ಅನೂಹ್ಯ ಲೀಲಾಯಣ.!

 “ಈ ಇಳೆಯ ಚರಾಚರಗಳ ಅವಿನಾಭಾವ ಸಂಬಂಧಗಳ ಕವಿತೆಯಿದು. ಬುವಿ ಬದುಕುಗಳ ಅನೂಹ್ಯ ಬಂಧಾನುಬಂಧಗಳ ನಿತ್ಯ ಸತ್ಯ ಭಾವಗೀತೆಯಿದು. ಪ್ರಕೃತಿಯ ಕಣ ಕಣಗಳಿಗೂ ಕಲ್ಪನಾತೀತ ನಂಟಿದೆ. ಬದುಕುಗಳ ಪುಟ ಪುಟದಲ್ಲೂ ಪ್ರತಿಕ್ಷಣ ಊಹಾತೀತ ಬೆಸುಗೆ ಬೆರಗುಗಳ ಅಂಟಿದೆ. ಈ ಸೃಷ್ಟಿಯೇ ಒಂದು ಅದ್ಭುತ ಅಚ್ಚರಿಗಳ ಅನೂಹ್ಯ ಮಾಲೆ. ಅದೃಶ್ಯ ಅಗೋಚರನ ಅನಂತ ರಹಸ್ಯಗಳ ಅನನ್ಯ ಲೀಲೆ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.  



ಅನೂಹ್ಯ ಲೀಲಾಯಣ.!



ಯಾರ ಕೊರಳಿಗೆ ಯಾವ ಕಡಲ ಮುತ್ತೊ?

ಯಾರ ತಟ್ಟೆಗೆ ಯಾವ ನೆಲದ ತುತ್ತೋ?

ಯಾರ ಚಿತ್ತದಿ ಯಾರ ಒಲವಿನ ಭಿತ್ತಿಯೊ?

ಯಾರ ಗೂಡಲಿ ಯಾರ ಪ್ರೇಮ ತತ್ತಿಯೊ?


ಯಾವ ಬಳ್ಳಿಗೆ ಯಾವ ಮರದ ಆಸರೆಯೊ?

ಯಾರ ಬಾಳಿಗೆ ಯಾರ ಕರದ ಕೈಸೆರೆಯೊ?

ಯಾರ ಕಂಗಳಲಿ ಯಾರ ಕನಸಿನ ಕರೆಯೊ? 

ಯಾರ ಎದೆಯಲಿ ಯಾರ ನೆನಪ ತೊರೆಯೊ?


ಯಾರ ಸ್ವಪ್ನಕೆ ಯಾವ ಜೀವ ಸ್ಫೂರ್ತಿಯೋ?

ಯಾರ ಬದುಕಿಗೆ ಯಾರ ಭಾವ ದೀಪ್ತಿಯೋ?

ಯಾರ ತಪಸಿಗೆ ಯಾರ ಮೇಲಿನ ಭಕ್ತಿಯೊ?

ಯಾರ ಬೆಳಕಿಗೆ ಯಾರ ವರಗಳ ಶಕ್ತಿಯೊ?


ಯಾವ ದೀಪಕೆ, ಯಾವ ಜ್ಯೋತಿ ಕಿಡಿಯೊ?

ಯಾರ ಪಾಪಕೆ, ಯಾರ ಕಿಡಿಯ ನುಡಿಯೊ?

ಯಾವ ಹಸಿರಿಗೆ, ಯಾವ ನೀರಿನ ಸೆಲೆಯೊ?

ಯಾರ ಹೆಸರಿಗೆ, ಯಾರ ಉಸಿರಿನ ನೆಲೆಯೊ?


ಎತ್ತಣ ಮಾಮರ ಎತ್ತಣ ಕೋಗಿಲೆ ಬಂಧ

ಎತ್ತಣ ಚಂದಮ ಎತ್ತಣ ನೈದಿಲೆ ಅನುಬಂಧ

ಅದೆಂತಹ ಅವಿನಾಭಾವಗಳ ಅಯೋಮಯ

ಅಭೇದ್ಯ ಈ ಬಂಧ ಸಂಬಂಧಗಳ ವಿಸ್ಮಯ.!


ಸಕಲವೂ ಇಲ್ಲಿ ವಿಧಾತ ಬೆಸೆಯುವ ನಂಟು

ಅಡಿಗಡಿಗೂ ಅಚ್ಚರಿ ಅನೂಹ್ಯಗಳ ಗಂಟು

ಅನುಕ್ಷಣ ಅವಕ್ಕಾಗಿಸುವ ಕಾಲನಡೆ ಉಂಟು

ಅರಿವು ಅಂದಾಜಿಗು ಸಿಗದು ಅವನ ನಿಘಂಟು.!


ನಡೇಸಿಹ ಅವನೆ ಪ್ರತಿದಿನ ಪ್ರತಿಜೀವದ ಪಾತ್ರ

ಹಿಡಿದಿಹ ಅವನೆ ಪ್ರತಿಕ್ಷಣ ಪ್ರತಿಕಣದ ಸೂತ್ರ

ನಿಯಾಮಕನ ಲೀಲೆಯಲಿ ನಾವು ನೆಪ ಮಾತ್ರ.!

ಬದುಕಿದು ಭಗವಂತನ ನಿತ್ಯಾಣತಿಯ ಯಾತ್ರ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments