“ಇದು ಸುಂದರ ಒಲವಿನ ಅನಾವರಣದ ಇನಿಗವಿತೆ. ಅನುರಾಗದ ಮಧುರ ರಿಂಗಣಗಳ ಭಾವಗೀತೆ
. ಇಲ್ಲಿ ಒಲವಿನ ಭಾವಾನುಭಾವಗಳ ಸುಶ್ರಾವ್ಯ ಲಹರಿಯಿದೆ. ಪ್ರೇಮದ ಲಾಸ್ಯ ಭಾಷ್ಯಗಳ ಸಂವೇದ್ಯ ಕಾವ್ಯಝರಿಯಿದೆ. ಓದಿ ನೋಡಿ.. ಹೃನ್ಮನ ಪುಳಕಗೊಂಡು ನವಿರು ಸ್ಪರ್ಶದಿ ಮೊಗವರಳುತ್ತದೆ. ಏಕೆಂದರೆ ಅನುರಾಗವೆನ್ನುವುದು ವಯಸ್ಸಿನ ಇತಿಮಿತಿಗಳಿಗೆ ಅತೀತವಾಗಿ, ಜೀವ-ಭಾವಕೆ ಸಂಪ್ರೀತವಾಗಿ ಮುದ ನೀಡುವ ಹೃದ್ಯ ಸಂವೇದನೆ. ನರ ನರಗಳಲಿ ಸುಸ್ವರ ಹೊಮ್ಮಿಸುವ ನಿತ್ಯ ನವ್ಯ ಸಂಕೀರ್ತನೆ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಭಾವ ಬೆಳದಿಂಗಳು.!
ನನ್ನೆದೆ ಪುಸ್ತಕದ
ಪುಟಗಳ ತುಂಬೆಲ್ಲ
ನಿನ್ನದೆ ಒಲವಿನ
ಅಪೂರ್ವ ಬರವಣಿಗೆ.!
ಮನದ ಕನಸಿನೂರಿನ
ಬೀದಿಯಲಿ ಸದಾ
ನಿನ್ನದೆ ನೆನಪುಗಳ
ಭರ್ಜರಿ ಮೆರವಣಿಗೆ.!
ಹೃದಯ ಅರಮನೆಯ
ಅಂಗಳದ ತುಂಬೆಲ್ಲ
ನಿನ್ನದೆ ಕಂಗಳಕಾಂತಿಯ
ಹೊಂಬೆಳಕ ದೀವಣಿಗೆ.!
ನನ್ನಯ ಭಾವಬನದ
ಉಸಿರುಹಾಸಿನ ಮೇಲೆಲ್ಲ
ನಿನ್ನದೆ ನಗೆಮಾರುತದ
ತಂಬೆಲರ ಬೀಸಣಿಗೆ.!
ನನ್ನಯ ಅಂತರಂಗದ
ಪ್ರೀತಿಚಿಪ್ಪಿನಾ ಒಳಗೆಲ್ಲ
ನಿನ್ನನುರಾಗದ ಹನಿಗಳು
ಸ್ವಾತಿಮುತ್ತಾದ ಬೆಳವಣಿಗೆ.!
ದಿನವು ಕ್ಷಣದಿಂದ ಕ್ಷಣಕೆ
ನನ್ನೊಳಗೆ ನೀನಿಳಿದಂತೆಲ್ಲ
ಜೀವ-ಭಾವ ಐಕ್ಯವಾಗುತ
ಆತ್ಮಮಿಲನದ ಚಿರಬೆಸುಗೆ.!
ನೀನನ್ನ ಚಿತ್ತ ಚೈತನ್ಯವಾಗಿ
ಭಾವದಂಗಳ ಬೆಳಗಿದಂತೆಲ್ಲ
ಬದುಕೆಲ್ಲ ಬೆಳದಿಂಗಳಾಗುತ
ಅಡಿಗಡಿಗು ಹುಣ್ಣಿಮೆದೀವಿಗೆ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments