*ಕಲಾ ಸರೋವರದ ಮರಾಳ ಸಿದ್ಧಹಸ್ತ ರೇವಣಸಿದ್ಧ ತರಾಳ*
ಶ್ರೀ ರೇವಣಸಿದ್ಧ ಬಸಪ್ಪ ತರಾಳ ಅವರು ೧-೧-೧೯೯೫ ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಟಕಬಾವಿಯಲ್ಲಿ ಜನಿಸಿದರು.ಬಸಪ್ಪ ರೇವಣಸಿದ್ಧ ತರಾಳˌಸರಸ್ವತಿ ಬಸಪ್ಪ ತರಾಳ ಅವರ ಸುಪುತ್ರ ರೇವಣಸಿದ್ಧ ಜನಿಸಿದ ಹದಿನೈದು ದಿನದಲ್ಲಿ ಕಣ್ಣುಗಳನ್ನು ಕಳೆದುಕೊಂಡರು.ಅಂಧ ಕಲಾವಿದ ರೇವಣಸಿದ್ಧ ತರಾಳರವರು ಭಜನೆ ಹಾಡುಗಳನ್ನು ಸಾದರಪಡಿಸುವಲ್ಲಿ ಸಿದ್ಧಹಸ್ತರಾದ ಇವರು ಒಳಗಣ್ಣಿನಿಂದ ಕಲಾ ಪ್ರಪಂಚ ಬೆಳಗುತ್ತಿರುವ ಕಲಾಬೆಳಕು ಆಗಿದ್ದಾರೆ.ಕಲಾ ಸರೋವರದ ಮರಾಳ ರೇವಣಸಿದ್ಧ ತರಾಳರವರು ಬಾಲ್ಯದಲ್ಲಿ ಸೊದರ ಮಾವನವರಾದ ಸಿದ್ದೇಶ್ವರ ಅವರ ಪಾರಿಜಾತದ ಆಟಗಳಲ್ಲಿಯ ಪಾತ್ರಾಭಿನಯದಿಂದ ಪ್ರೇರೆಪಿತರಾಗಿ ಸಂಗೀತದತ್ತ ಒಲವನ್ನು ಬೆಳೆಸಿಕೊಂಡರು. ಹುಟ್ಟು ಕುರುಡರಾದ ಇವರಿಗೆ ಶಾಲೆಯಲ್ಲಿ ವಿದ್ಯೆ ದಕ್ಕಲಿಲ್ಲ ಆದರೆ ಸಂಗೀತ ಕ್ಷೇತ್ರ ಮಾತ್ರ ಇವರನ್ನು ಕೈಬೀಸಿ ಕರೆಯುತ್ತಿತ್ತು. ಸುಮಾರು 15 ವರ್ಷ ಪಾಚ್ಚಾಪೂರದಲ್ಲಿ ಕೇವಲ ಆಲಿಸುವುದರ ಮೂಲಕ ಹಾಡುಗಾರಿಕೆಯನ್ನು ರೂಢಿಸಿಕೊಂಡು ರಕ್ತಗತ ಮಾಡಿಕೊಂಡರು.ಪರಕಾನಟ್ಟಿಯ ಸಿದ್ಧಾರೂಢ ಭಜನಾ ಮಂಡಳಿಯ ಗರಡಿಯಲ್ಲಿ ಪಳಗಿ ಕಲಾಸೇವಾ ಭಾವವನ್ನು ಮೈಗೂಡಿಸಿಕೊಂಡರು.ಹೀಗೆ ಸಂಗೀತವನ್ನು ಉಸಿರಾಡುತ್ತಾ ಸೇವೆಯನ್ನು ಆರಂಭಿಸಿ ಕಲಾಲೋಕದಲ್ಲಿ ಚಿಗುರಿದರು.
ಗಿರಿಮಲ್ಲಿಕಾರ್ಜುನ ಭಜನಾ ಮಂಡಳಿ ಕಟಕಬಾವಿ ,ಶ್ರೀ ನಿಂಗಮ್ಮ ದೇವಿ ಭಜನಾ ಮಂಡಳಿ ಕಟಕಬಾವಿˌ ದತ್ತ ಭಜನಾ ಮಂಡಳಿ ಅಳಗವಾಡಿ ಹಾಗೂ ರಾಮಲಿಂಗೇಶ್ವರ ಭಜನಾ ಮಂಡಳಿ ಅಳಗವಾಡಿ ಮುಂತಾದ ಭಜನಾ ಮಂಡಳಿಗಳಲ್ಲಿ ತಮ್ಮ ಅಮೋಘ ಸೇವೆಯನ್ನು ಸಲ್ಲಿಸುತ್ತಾ ಮುನ್ನಡೆಯುತ್ತಿದ್ದಾರೆ.
ಯೂಟ್ಯೂಬ್ ಚಾನೆಲ್ ನಲ್ಲಿ 35ಕ್ಕೂ ಹೆಚ್ಚು ಹಾಡುಗಳನ್ನು ಪ್ರಸ್ತುತಪಡಿಸಿದ್ದಾರೆ. ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ 150ಕ್ಕೂ ಹೆಚ್ಚು ಹಾಡುಗಳು ಮತ್ತು ಸರ್ಪಭೂಷಣ ಶಿವಯೋಗಿಗಳ ಕೈವಲ್ಯ ಕಲ್ಪವಲ್ಲರಿಯಲ್ಲಿನ 55ಕ್ಕೂ ಹೆಚ್ಚು ಹಾಡುಗಳು ಇವರ ಕಂಠಭಂಡಾರದಲ್ಲಿ ಸುಭದ್ರವಾಗಿವೆ.
ಬಸವಣ್ಣˌ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ ,
ಮಡಿವಾಳ ಮಾಚಯ್ಯ , ದೇವರ ದಾಸಿಮಯ್ಯ ಮುಂತಾದ ಶಿವಶರಣರ ವಚನಗಳನ್ನು ತಮ್ಮ ಕೊರಳ ಕೊಳಲಿನಲ್ಲಿ ಮುದ್ರಿಸಿಟ್ಟುಕೊಂಡಿದ್ದಾರೆ.
ಕನ್ನಡದ ಕಬೀರ ಶ್ರೀ ಇಬ್ರಾಹಿಂ ಸುತಾರರವರ ಪ್ರವಚನಕ್ಕೆ ಮನಸೋತು ಸ್ವಯಂ ಪ್ರವಚನಕಾರರಾಗಿ ರೂಪುಗೊಂಡಿದ್ದು ವಿಶೇಷ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳುˌ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ಪ್ರವಚನಗಳ ಪ್ರೇರಣೆಗೆ ಒಳಗಾಗಿರುವ ಇವರು ಹಲವಾರು ಕಡೆ ಪ್ರವಚನ ನೀಡಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಗೋಕಾಕದ ಮಠˌ ಮುಕ್ತಿ ಮಠ ಬೆಳಗಾವಿˌ ಅರಬಾವಿ ಮಠ ಮುಂತಾದ ಮಠ ಮಂದಿರಗಳಲ್ಲಿ ಪ್ರವಚನಗೈದು ಶ್ರೀಗಳ ಆಶೀರ್ವಾದಕ್ಕೆ ಭಾಜನರಾಗಿದ್ದಾರೆ. ಮಹಮ್ಮದ ಪೈಗಂಬರ್ ರವರ ಖುರಾನವನ್ನು ಕೂಡ ಪಠಿಸಿ ಬಿಡಿಸಿ ಹೇಳುವ ಸಾಮರ್ಥ್ಯ ಪಡೆದಿದ್ದಾರೆ. ಸ್ವಂತ ಕವಿತೆ ಕಟ್ಟಿ ಹಾಡುವುದರಲ್ಲಿ ಇವರು ಸಿದ್ಧಹಸ್ತರು. ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನೀಡಿ ಪ್ರೇಕ್ಷಕರಿಂದ ನಗುನವಿಲು ಚಪ್ಪಾಳೆಪುಷ್ಪ ಬಹುಮಾನ ಪಡೆದಿರುವರು.ತತ್ವಪದಗಳನ್ನು ಜನ ಮನಕೆ ಮುಟ್ಟುವಂತೆ ಹೃದಯಕೆ ತಟ್ಟುವಂತೆ ಹಾಡುತ್ತಾರೆ. ತಬಲಾ ಬಾರಿಸುವುದು ˌತಾಳ ಬಾರಿಸುವುದು ˌಮೃದಂಗ ನುಡಿಸುವುದು ಈ ವಿದ್ಯೆಗಳನ್ನು ಏಕಲವ್ಯನಂತೆ ಗುರುಗಳಿಲ್ಲದೇ ಕೇವಲ ಕೇಳಿ ಅಭ್ಯಾಸ ಮಾಡಿ ಕರಗತ ಮಾಡಿಕೊಂಡಿದ್ದಾರೆ.
ಶ್ರೇಷ್ಠ ಕಲಾವಿದರಾಗಿರುವ ರಾವಳ ಮಾಸ್ತರ್ ಕಟಕಬಾವಿ ಅವರಿಂದ ಸಂಗೀತ ವಿದ್ಯೆಯನ್ನು ಪಡೆದುಕೊಂಡಿದ್ದು ಹೆಮ್ಮೆ ಅಭಿಮಾನಕ್ಕೆ ಕೊಡು ಮೂಡುವ ಸಂಗತಿ ಎಂಬುದು ರೇವಣಸಿದ್ಧನ ಅಂತರಂಗದ ತರಂಗಗಳು.
ಬಡತನದ ಕುಟುಂಬ ಇವರದಾಗಿದ್ದು ಮನೆಯಲ್ಲಿ ಒಟ್ಟು ಆರು ಜನರಿದ್ದಾರೆ. ಮೂಲತಃ ಇವರದ್ದು ರೈತ ಕುಟುಂಬ ಇವರು ಕೇವಲ ಆಲಿಸುವುದರ ಮೂಲಕ ಎಲ್ಲ ಪದ್ಯಗಳನ್ನು ಬಾಯಿಪಾಠ ಮಾಡಿಕೊಂಡಿದ್ದಾರೆ.ಸಿದ್ದ ಶಿವಯೋಗಿ ಸ್ವಾಮಿಗಳು ಹುಬ್ಬಳ್ಳಿ ಮಹಾತ್ಮರು ಇವರಿಗೆ ಆಶೀರ್ವಾದ ಮಾಡಿ ಜ್ಞಾನದ ಒಳಗಣ್ಣಿನಿಂದ ಜಗತ್ತನ್ನು ನೋಡುವ ಶಕ್ತಿ ದೇವರು ನಿನಗೆ ಕಲ್ಪಿಸಿಕೊಟ್ಟಿದ್ದಾನೆಂಬ ಅಮೂಲ್ಯ ಮಾತುಗಳನ್ನು ಆಡಿದ್ದಾರೆ.ಪುಟ್ಟರಾಜ ಗವಾಯಿ ಕವಿಗಳು, ಪಂಚಾಕ್ಷರಿ ಅಪ್ಪನವರು ಮೊದಲಾದವರ ಆಶೀರ್ವಾದ ಬಲದಿಂದ ವಿದ್ಯೆ ವಶೀಕರಣವಾಗಲು ಸಾಧ್ಯವಾಗಿದೆಯೆಂಬುದು ರೇವಣಸಿದ್ಧನ ಉವಾಚ. ಹಲವಾರು ಅಂಧ ಕಲಾವಿದರ ಪರಿಚಯ ಇವರಿಗಿದ್ದು ಸಂಗೀತ ಸೇವೆಯ ಮೂಲಕ ಈ ಸಮಾಜಕ್ಕೆ ವಿಶೇಷ ಕೊಡುಗೆಯನ್ನು ನೀಡುತ್ತಿದ್ದಾರೆ. ಹಳೆಯ ಚಲನಚಿತ್ರ ಗೀತೆಗಳು ಇವರ ನಾಲಿಗೆ ತುದಿ ಮೇಲೆ ಕುಣಿದಾಡುತ್ತವೆ. ಪ್ರಸ್ತುತ ಇವರಿಗೆ ಗಿರಿ ಮಲ್ಲಿಕಾರ್ಜುನ ಭಜನಾ ಮಂಡಳಿ ಹಾಗೂ ದತ್ತ ಭಜನಾ ಮಂಡಳಿ ಅಳಗವಾಡಿರವರು ಆಧಾರ ಸ್ಥಂಭವಾಗಿದ್ಧು ಶಿಕ್ಷಕ ವಿಠ್ಠಲ ತೇರದಾಳೆಯವರ ಬೆಂಬಲ ಪ್ರೋತ್ಸಾಹ ಶ್ರೀರಕ್ಷೆಯಾಗಿದೆಯೆಂದು ನೆನೆಯುತ್ತಾರೆ. ಹತ್ತು
ಹಲವಾರು ಪ್ರಶಸ್ತಿಗಳನ್ನು ಇವರು ಪಡೆದುಕೊಂಡಿದ್ದಾರೆ. ಮಂಟೂರು ಮುಕ್ತಿ ಮಠ ಬೆಳಗಾವಿ(ಸೋಮೇಶ್ವರ ಮಠ), ಹುಕ್ಕೇರಿ ಮಠ, ಕಟಕಬಾವಿ ಗುಡಿ ಹಾಗೂ ರಾಯಬಾಗ ತಾಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ಹಂದಿಗುಂದದಲ್ಲಿ ಭಾಗವಹಿಸಿ ಪ್ರಶಸ್ತಿಯೊಂದಿಗೆ ಸುವರ್ಣ ಗೌರವಾದರಾತಿಥ್ಯ ಪಡೆದುಕೊಂಡಿದ್ದಾರೆ. ಒಟ್ಟಾರೆ 400ಕ್ಕೂ ಹೆಚ್ಚು ಪದ್ಯಗಳು ಇವರ ಮೆದುಳಿನಲ್ಲಿ ಮುದ್ರಿತಗೊಂಡಿವೆ. ಸಂಗೀತ ಸೇವೆಯನ್ನು ನಿಸ್ವಾರ್ಥ ಭಾವದಿಂದ ಸಲ್ಲಿಸುತ್ತಿರುವುದು ಅನುಕರಣಾರ್ಹವಾಗಿದೆ. ಇಂತಹ ಅಪರೂಪದ ಕಲಾವಿದರು ಇನ್ನೂ ಎತ್ತರಕ್ಕೆ ಬೆಳೆಯಲೆಂದು ಮನದುಂಬಿ ಹಾರೈಸೋಣ.ಬೆಂಬಲಿಸೋಣˌಬೆಳೆಸೋಣ.ಇವರನ್ನು ಕಾರ್ಯಕ್ರಮಗಳಿಗೆ ಆಮಂತ್ರಿಸಿ ಅಭಿನಂದಿಸಿ ಗೌರವಿಸುವವರು ಈ(9663456519)ದೂರವಾಣಿಗೆ ಸಂಪರ್ಕಿಸಬೇಕು.
ಲೇಖಕರು:
ಶ್ರೀ ರವೀಂದ್ರ ಪಾಟೀಲ
ತಾಲೂಕಾಧ್ಯಕ್ಷರುˌಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments