ಚಾರಣಪ್ರಿಯರಿಗೆ ಸೊಬಗಿನ ತಾಣ ಸಾವನದುರ್ಗ:
ಸಮುದ್ರಮಟ್ಟದಿಂದ 4884 ಅಡಿ ಎತ್ತರದಲ್ಲಿರುವ ಸಾವನದುರ್ಗ ಕರಿ-ಬಿಳಿ ಬೆಟ್ಟಗಳಿಂದ ಕೂಡಿದೆ. ಸುತ್ತಲೂ ಅಭಯಾರಣ್ಯ, ಗಿರಿ-ಕಂದರಗಳ ನಡುವೆ ವಿಜ್ಞಾನಕ್ಕೆ ಸವಾಲಾಗಿ, ಆನೆಯನ್ನು ಹೋಲುವ ಚಿತ್ರದಂತಿರುವ ಪ್ರಾಗೈತಿಹಾಸಿಕ ಪ್ರೇಕ್ಷಣೀಯ ಸ್ಥಳವೇ ಸಾವನದುರ್ಗ.
ಈ ಸಾವನದುರ್ಗದ ಸಂಕ್ಷಿಪ್ತ ಪರಿಚಯವನ್ನು ಡಾ. ಎಚ್ ತುಕಾರಾಂ ಬರೆದಿರುವ "ಸಾವನದುರ್ಗ ಕಿರು ಪ್ರವಾಸ ಕಥನ" ಬಹಳ ಚೆನ್ನಾಗಿ ಇಲ್ಲಿನ ಅನೇಕ ವೈಶಿಷ್ಟ್ಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ.
ವಿಜಯನಗರ ಅರಸರ ಮಾತಿನಂತೆ ಇಮ್ಮಡಿ ಕೆಂಪೇಗೌಡನು ಸಾವನದುರ್ಗದ ರಾಜನಾದ ಗಂಗರಾಯನನ್ನು ಸೋಲಿಸಿ ಕಪ್ಪ ಕಾಣಿಕೆಗಳನ್ನು ಪಡೆದು ವಿಜಯನಗರ ಸಾಮ್ರಾಜ್ಯಕ್ಕೆ ಕಳಿಸಿದೆನೆಂದು ಇಲ್ಲಿ ತಿಳಿದು ಬರುತ್ತದೆ. ಪ್ರಕೃತಿ ಸೊಬಗಿನ ತಾಣವಾದ ಸಾವನದುರ್ಗ ಕೆಂಪೇಗೌಡ ರಾಜನ ಆಡಳಿತಕ್ಕೆ ಒಳಪಟ್ಟಿತ್ತು. ಸಾವನದುರ್ಗದ ಕೋಟೆ ಅತ್ಯಂತ ಬಲಿಷ್ಟವಾಗಿದ್ದು, ಶತ್ರುಗಳಿಗೆ ಸವಾಲಾಗಿತ್ತು ಎಂದು ತಿಳಿದು ಬರುತ್ತದೆ. ಈ ಸಾವನ್ನು ದುರ್ಗದ ಬೆಟ್ಟವು ದೈತ್ಯಾಕಾರವಾಗಿದ್ದು ಅದನ್ನು ಏರಿ ನಿಲ್ಲುವುದೇ ಸಾಹಸವೇ ಸರಿ.
ಬೆಂಗಳೂರಿನಿಂದ ಸುಮಾರು 60 ಕಿ.ಲೋ. ಮೀಟರ್ ದೂರದಲ್ಲಿರುವ ಮಾಗಡಿ ತಾಲೂಕಿನ ಸಾವನದುರ್ಗ ಒಂದು ಬೃಹತ್ ಏಕಶಿಲಾ ಬೆಟ್ಟ. ಮಾಗಡಿಯಿಂದ ಹಿಂದಕ್ಕೆ ಸುಮಾರು 2 ಕಿ.ಲೋ. ಹಿಂದಕ್ಕೆ ಎಡಕ್ಕೆ ತಿರುಗಿ 8 ಕಿ.ಮೀ ಕ್ರಮಿಸಿದರೆ ನಾಯಕನ ಪಾಳ್ಯ, ಅಲ್ಲಿ ಮತ್ತೆ ಎಡಕ್ಕೆ ತಿರುಗಿ 4 ಕಿಲೋಮೀಟರ್ ಕ್ರಮಿಸಿದರೆ ಸಿಗುವ ಸುಂದರ ನಿಸರ್ಗತಾಣವೇ ಸಾವನದುರ್ಗ. ಅಲ್ಲಿ ಬೀಸುವ ತಂಗಾಳಿ ಹಿತವಾದ ಅನುಭವ ನೀಡುತ್ತದೆ. ಮೊದಲಿಗೆ ಕಾಣುವ ಕೆಂಪೇಗೌಡ ವನಧಾಮದಲ್ಲಿ ಬಗೆ ಬಗೆಯ ಸಸ್ಯ ಸಂಕುಲವನ್ನು ನೋಡಬಹುದು. ಕತ್ತಿ ಹಿಡಿದ ಕೆಂಪೇಗೌಡನ ಪ್ರತಿಮೆ ನಮ್ಮನ್ನು ಸ್ವಾಗತಿಸುತ್ತದೆ. ನಂತರ ಕಾಣಿಸುವ ಸುರಂಗ ಸಸ್ಯಧಾಮ ಬೆಟ್ಟದ ತಳದಲ್ಲಿರುವುದರಿಂದ ಇದು ಕೆಂಪೇಗೌಡರು ಈ ಮೂಲಕ ಬೆಟ್ಟದ ತುದಿಗೆ ಹೋಗಲು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ಹುಣಸೆ ಮರಗಳನ್ನು ಹೇರಳವಾಗಿ ನಾವು ಕಾಣಬಹುದು. ಅಲ್ಲಿರುವ ಕಟ್ಟೆಯನ್ನು ಬಿದಿರು ಕಟ್ಟೆ ಎಂದು ಹೇಳುತ್ತಾರೆ, ಕಾರಣ ಬಿದಿರು ಮೆಳೆಗಳಿಂದ ಆವೃತವಾಗಿರುವುದರಿಂದ ಈ ಹೆಸರು ಬಂದಿದೆ. ಹಿಂದೆ ಈ ಕಟ್ಟೆಯಲ್ಲಿ ದೇವರ ತೆಪ್ಪೋತ್ಸವಗಳು ಇಲ್ಲಿ ನಡೆಯುತ್ತಿತ್ತು ಎಂದು ತಿಳಿದು ಬರುತ್ತದೆ. ಕೆಂಪೇಗೌಡ ಸಸ್ಯಧಾಮದ ಎಡಭಾಗದಲ್ಲಿರುವ ದೇವಾಲಯ ಸಾವಂದಿ ವೀರಭದ್ರ ಸ್ವಾಮಿ ದೇವಾಲಯ. ಸಾಮಂತ ರಾಜರನ್ನು ಸಾವಂದ ಎಂದು ಕರೆಯುತ್ತಿದ್ದರು. ಹೊಯ್ಸಳರ ಮೂರನೇ ಬಲ್ಲಾಳನು ಈ ಸ್ಥಳವನ್ನು ಸಾವಂದಿ ಎಂದು ಕರೆದಿದ್ದಾನೆ.
ವೀರಭದ್ರ ಸ್ವಾಮಿ ದೇವಾಲಯದ ಪಕ್ಕದಲ್ಲಿ 53 ಅಡಿ ಎತ್ತರದ ಧ್ವಜಸ್ತಂಭವಿದೆ ಹಾಗೂ ಬೃಹತ್ ತೂಗುಯ್ಯಾಲೆ ಇದೆ. ಮಹಾರ್ನವಮಿ ಮಂಟಪ, ಕೆಂಪೇಗೌಡರ ದರ್ಬಾರ್ ಹಾಲ್, ಕೆಂಪೇಗೌಡರ ಮನೆದೇವರು ವೀರಭದ್ರದೇವರ ದೇವಸ್ಥಾನ ಉತ್ತರಾಭಿಮುಖವಾಗಿದೆ. ನೆಲಪಟ್ಟಣದಲ್ಲಿ ವೀರಣ್ಣ ಗುಡಿ, ಸೋಮೇಶ್ವರ ಗುಡಿ ದ್ರಾವಿಡ ಶೈಲಿಯಲ್ಲಿವೆ. ಆಂಜನೇಯ ಗುಡಿಗಳು ನಾಶದ ಸ್ಥಿತಿಯಲ್ಲಿವೆ. ಅಲ್ಲಿ ಮಾರುಕಟ್ಟೆ ಸ್ಥಳ ಇತ್ತು ಎನ್ನುವುದಕ್ಕೆ ಅಲ್ಲಿ ಮಳಿಗೆಗಳಿದ್ದವು ಈಗ ಅವುಗಳನ್ನು ಕೆಡವಿ ಹಾಕಲಾಗಿದೆ. ಕೆಂಪೇಗೌಡ ದರ್ಬಾರ್ ಹಾಲ್ ನಲ್ಲಿ ಕುಳಿತರೆ ಇಡೀ ದುರ್ಗವೇ ಅವನಿಗೆ ಕಾಣಿಸುತ್ತಿತ್ತು ಎಂದು ಹೇಳಲಾಗುತ್ತದೆ. ಇದರ ಉತ್ಖನನ ನಡೆಸಿದವರು ಹಿಂದಿನ ಮಾಗಡಿ ಶಾಸಕರಾದ ಶ್ರೀ ಹೆಚ್ ಎಂ ರೇವಣ್ಣನವರು.
ಸಾವನದುರ್ಗದಲ್ಲಿ ವೀರಭದ್ರಸ್ವಾಮಿ ಮತ್ತು ಲಕ್ಷ್ಮೀ ನರಸಿಂಹಸ್ವಾಮಿ ಉತ್ಸವಗಳು ಪ್ರತಿ ವರ್ಷ ಜರುಗುತ್ತವೆ. ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ದೇವರ ತೂಗುಯ್ಯಾಲೆ ನಡೆಯುತ್ತದೆ. ಮೇ ತಿಂಗಳಲ್ಲಿ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನಡೆದು ಅಲ್ಲಿ ಅರವಂಟಿಕೆಗಳು ನಡೆಯುತ್ತವೆ. ಭಕ್ತರಿಗೆ ಭೋಜನದ ವ್ಯವಸ್ಥೆಯು ಇರುತ್ತದೆ. ಸಾವಂದಿ ವೀರಭದ್ರ ಸ್ವಾಮಿ ದೇವಾಲಯದ ಎದುರು ಮೈಸೂರು ಟಿಪ್ಪು ಸುಲ್ತಾನ್ ಎರಡು ಗೋಲಿಗಳನ್ನು ಕಟ್ಟಿಸಿದ್ದಾನೆ ಒಂದು ಗುಲಾಮ್ ಹುಸೇನ್ ಖಾದ್ರಿ ಗೋರಿ ಎಂದು ಹೇಳಲಾಗುತ್ತದೆ.
ಸುಮಾರು 20 ಮುಸ್ಲಿಂ ಕುಟುಂಬಗಳಿವೆ, ಲಂಬಾಣಿ ಜನರು ಇಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಹಿಂದೂ ಮುಸ್ಲಿಂ ಎರಡು ಧರ್ಮದವರು ಸಹೋದರರಂತೆ ಇದ್ದಾರೆ. ಇಲ್ಲಿನ ಗಿಡಗಂಟಿಗಳ ನಡುವೆ ಅನೇಕ ವೀರಗಲ್ಲುಗಳು ಮತ್ತು ವಿಶಿಷ್ಟ ಶಿಲ್ಪಗಳನ್ನು ನಾವು ಕಾಣಬಹುದು. ಸಾಮಂತದುರ್ಗ, ಸಾವಂತದುರ್ಗ, ಕೃಷ್ಣಗಿರಿ, ಸಾವಿನದುರ್ಗ, ನೆಲ ಪಟ್ಟಣ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲು ಕಾರಣಗಳನ್ನು ಈ ಕೃತಿ ವಿವರಿಸಿ ಹೇಳುತ್ತದೆ. ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನನ ಮೇಲೆ ದಾಳಿ ಮಾಡಿದ ಕಾರ್ನ್ ವಾಲಿಸ್ ಸಾವನದುರ್ಗವನ್ನು ಕಂಡು ಹೆದರಿ ಡೆಡ್ ರಾಕ್ ಸಾವನದುರ್ಗ ಎಂದನಂತೆ.
ಈ ಕೃತಿ ಸಾವನದುರ್ಗವನ್ನು ಆಳಿದ ರಾಜರುಗಳ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಬಂಡೆಯ ಮೇಲ್ಚಾವಣಿಯಲ್ಲಿ ಸುಮಾರು 30 ಅಡಿ ಉದ್ದ 10 ಅಡಿ ಅಗಲದ ಶಿವಲಿಂಗವಿದೆ. ಬಂಡೆಯ ಮೇಲೆ ಕಾವಲು ಗೋಪುರಗಳನ್ನು ನಾವು ನೋಡಬಹುದು. ಇಟ್ಟಿಗೆ ಬಯಲು ಇದೆ. ಬೆಟ್ಟದ ತುದಿಯಲ್ಲಿ ತಲುಪುವ ಮುಂಚೆ ಆಂಜನೇಯ ಚಿತ್ರವನ್ನು ಕೆತ್ತಲಾಗಿದೆ. ಬೆಟ್ಟದ ತುದಿಯ ಗೋಪುರದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಎಲೆ ಅಂಬಿನ ಕಲ್ಲು ನೋಡಬಹುದು. ಬೆಲ್ಲದಚ್ಚಿನ ಗವಿ, ಯೋನಿಕಣಿವೆ, ಕುಂತಿಕಲ್ಲುಗಳ ಬಗ್ಗೆ ಕೃತಿ ವಿವರಣೆಯನ್ನು ನೀಡುತ್ತದೆ. ಸಾವನದುರ್ಗದಲ್ಲಿ ಹಲವು ಬಗೆಯ ಔಷಧಿ ಸಸ್ಯಗಳನ್ನ ಗುರುತಿಸಿದ್ದಾರೆ ಉದಾಹರಣೆಗೆ ; ಅಂಕೋಲೆ, ಕಲ್ಲತಿಮಿರ, ಬಿಟೆ, ಗೋಣಿ ನವಿಲಾಡಿ,ಮುಗಳಿ, ತಪಾಲ, ತಪಸಿ, ಮುತ್ತುಗ, ಕಲ್ಲು ಹರಳಿ, ಭಾಗೆ, ಚುಜ್ಜಿಲಿ, ಬೇವು, ಅಮಟೆ, ಯಲಚಿ, ಕಾಡುಗೇರು, ಬೆಟ್ಟತಂಗಡಿ, ತೊರೆಮತ್ತಿ, ಪಚಾರಿ, ಸೇಮೆ ತಂಗಡಿ, ಮಾಕಳಿ ಬೇರು, ಬೆಟ್ಟಿನಲ್ಲಿಕಾಯಿ, ಬಾಡಬಕ್ಕ, ಅಮೃತ ಬಳ್ಳಿ, ಕರಿಲಕಲಿ, ಲಕಲಿಪತ್ರಿ ಹಾಗೆಯೇ ಇಲ್ಲಿನ ಅನೇಕ ಪ್ರಾಣಿ ಪಕ್ಷಿ ಸಂಕುಲಗಳನ್ನು ಕಾಣಬಹುದಾಗಿದೆ. ಚಿರತೆ, ಕಸ್ತೂರಿಮೃಗ, ನವಿಲು, ಮರಕುಟಕ, ತೋಳ, ಉಡ, ಬಕಪಕ್ಷಿ, ಪುರಲೆಹಕ್ಕಿ, ಕಾಡುಹಂದಿ, ಹಣಜ, ಬಾತುಕೋಳಿ, ಗಿಡಗ, ಕಾಡು ಬೇಕು, ಕರಡಿ, ನರಿ, ಕಾಡು ಪಾರಿವಾಳ, ಗಿಳಿ, ಆನೆ, ರಣಹದ್ದು, ಕಾಡು ಕೋಳಿ, ಮುಳ್ಳುಹಂದಿ, ಗೊರವಂಕ ಮುಂತಾದವುಗಳನ್ನು ನಾವು ಈ ಪ್ರದೇಶದ ಕಾಡುಗಳಲ್ಲಿ ಕಾಣಬಹುದಾಗಿದೆ ಎಂಬುದನ್ನು ಕೃತಿ ನಮಗೆ ವಿವರಿಸುತ್ತದೆ. ಇದಲ್ಲದೆ ಸಾವನದುರ್ಗದ ಬಗ್ಗೆ ಅನೇಕ ಮಾಹಿತಿಯನ್ನು ಈ ಸಂಕ್ಷಿಪ್ತ ಕೃತಿ ನಮಗೆ ಅಚ್ಚುಕಟ್ಟಾಗಿ ತಿಳಿಸಿಕೊಡುತ್ತದೆ. ಇಲ್ಲಿ ಈಗ ಹಲವಾರು ಕಲ್ಯಾಣ ಮಂಟಪಗಳನ್ನು, ಶಾಲೆ ಮತ್ತು ಪ್ರವಾಸಿ ಮಂದಿರವು ಸಹ ನಿರ್ಮಾಣವಾಗಿದೆ. ಈ ಕೃತಿಯಲ್ಲಿ ಸಾಂದರ್ಭಿಕವಾಗಿ ಅನೇಕ ಮಾಹಿತಿಗಳನ್ನುಳ್ಳ ಫೋಟೋಗಳು ಸಹ ಕಂಡುಬರುತ್ತವೆ. ಇದರಿಂದ ಈ ಕೃತಿ ಸಾವನದುರ್ಗದ ಬಗ್ಗೆ ಒಳ್ಳೆಯ ಉತ್ತಮ ಮಾಹಿತಿಯನ್ನು ನಮಗೆ ತಿಳಿಸುತ್ತದೆ. ಚಾರಣರಿಗೆ ಮೆಚ್ಚಿನ ತಾಣವಾಗಿದೆ ಸಾವನದುರ್ಗ. ಬೇಟಿ ಕೊಡುವ ಮೊದಲು ಈ ಕೃತಿಯ ಮಾರ್ಗದರ್ಶನ ಪಡೆಯಬಹುದು. ಈ ಕೃತಿಯನ್ನು ನಿಜಕ್ಕೂ ಓದಿದಾಗ ಸಾವನದುರ್ಗವನ್ನು ಒಮ್ಮೆ ನೋಡಿ ಬರಬೇಕು ಎಂದನಿಸದೆ ಇರಲಾರದು, ಆದ್ದರಿಂದಲೇ ಈ ಕೃತಿ ಮತ್ತು ಲೇಖಕ ಓದುಗರಲ್ಲಿ ಸಾರ್ಥಕತೆಯನ್ನು ಹೊಂದುತ್ತಾರೆ. ಈ ಕೃತಿಗಾಗಿ 9740999993 ಸಂಪರ್ಕ ಮಾಡಬಹುದು. ಇಂತಹ ಪ್ರವಾಸ ಕೃತಿಗಳು ಡಾ. ಎಚ್. ತುಕಾರಾಮರವರಿಂದ ಇನ್ನಷ್ಟು ಬರಲೆಂದು ಆಶಿಸೋಣ.
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ದೂ: 9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments