*ಮನುಜನ ಮನೋಲಹರಿಯೇ ಮೌನಜಾತ್ರೆ *

 ಮನುಜನ ಮನೋಲಹರಿಯೇ ಮೌನಜಾತ್ರೆ




ಕವಿತೆಯನ್ನು ಕಟ್ಟುವುದು ಒಂದು ಕಲಾವಂತಿಕೆ, ಅದೊಂದು ಭಾವನಲಹರಿ, ಮನುಜನ ಮನದಾಳಕೆ ಇಳಿದಾಗ ಮೂಡುವ ನೆನಪುಗಳು, ಕಾಡುವ ಕನಸುಗಳು, ನಮ್ಮ ನಡುವೆ ನಡೆಯುವ ಘಟನೆಗಳು, ಶೋಷಣೆ ಅನ್ಯಾಯ, ಬದಲಾಗುತ್ತಿರುವ ಮನುಜನ ಮನಸ್ಥಿತಿ ಹೀಗೆ ನಾನಾಬಗೆಯಲ್ಲಿ ಆ ವಿಷಯಗಳ ಬಗ್ಗೆ ಕವಿ/ಕವಯಿತ್ರಿ ಯೋಚಿಸಿ ಧ್ಯಾನಿಸಿ ಸಾಲುಗಳಾಗಿ ರೂಪಿಸಿ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವ ರೀತಿಯ ಬರವಣಿಗೆಯು ಸಾಹಿತ್ಯವಾಗಿ ಕವಿತೆಯಾಗಿ ರೂಪಗೊಳ್ಳುತ್ತದೆ.


ಈಗಿನ ನವ್ಯ ಕನ್ನಡ ಸಾಹಿತ್ಯಲೋಕದಲ್ಲಿ ಬಹಳಷ್ಟು ಮಹಿಳೆಯರು ಬರವಣಿಗೆಯನ್ನು ಪ್ರವೃತ್ತಿಯಾಗಿ ಬಳಸಿಕೊಂಡು ಬರೆಯಲು ಆರಂಭಿಸಿದ್ದಾರೆ. ಪ್ರಸ್ತುತ ಕನ್ನಡ ಸಾಹಿತ್ಯಲೋಕದಲ್ಲಿ ಉದಯೋನ್ಮುಖ ಬರಹಗಾತಿ೯ಯಾಗಿ ಭಾವಯಾನಿ ಕಾವ್ಯನಾಮದಿಂದ ಬರೆಯುತ್ತಾ  ಬೆಳಕಿಗೆ ಬರುತ್ತಿರುವ ಹೆಸರು ಶ್ರೀಮತಿ ಪ್ರಮೀಳಾ ರಾಜ್...


ಶ್ರೀಮತಿ ಪ್ರಮೀಳಾ ರಾಜ್ ಶಿಕ್ಷಕಿಯಾಗಿ, ಗಾಯಕಿಯಾಗಿಯೂ ಕೂಡ ತನ್ನನ್ನು ಗುರುತಿಸಿಕೊಳ್ಳುತ್ತಿರುವವರು, ಕನ್ನಡ ಸಾಹಿತ್ಯದ ಬರವಣಿಗೆಯಲ್ಲೂ ತನ್ನ ಛಾಪನ್ನು ಮೂಡಿಸಿ, ತನ್ನ  ಕಲಾಪ್ರತಿಭೆಗೆ ಸಾಕ್ಷಿಯ ಬಿಂಬವಾಗಿ ಎರಡನೇಯ ಕೃತಿಯಾಗಿ ಹೊರತಂದಿರುವ ಪುಸ್ತಕ  ಮೌನಜಾತ್ರೆ ಕವನಸಂಕಲನ.


ಮೌನ ಜಾತ್ರೆ ಕವನಸಂಕಲನ ಶ್ರೀಮತಿ ಪ್ರಮೀಳಾ ರಾಜ್ ರವರ ಎರಡನೇಯ ಕೃತಿಯಾಗಿದ್ದು ಈ ಕವನ ಸಂಕಲನದಲ್ಲಿ ಮೂವತ್ತು ಕವಿತೆಗಳಿವೆ. ಕವಿತೆಗಳು ಮೂವತ್ತಾದರೂ ಆ ಕವಿತೆಗಳಲ್ಲಿ ಇರುವ ಭಾವನೆಗಳು ನೂರಾರು. ಈ ಕವಿತೆಗಳಲ್ಲಿ ಪ್ರೇಮಿಯ ಆಲಾಪನೆಯಿದೆ, ಅಮ್ಮನ ಮಮತೆಯಿದೆ, ಮನದ ನೋವಿದೆ, ನಿರಾಶದಾಯಕ ಭಾವ ಕಾಡುತ್ತದೆ. ಅವಮಾನ ಮೋಸದ ವಿಷಯಗಳಿವೆ. ಗುರುಭಕ್ತಿಗೂ ಕೂಡ ತನ್ನ ಮೊದಲ ಕವಿತೆಯ ಸಾಲಿನಲ್ಲಿ ಜಾಗವನ್ನು ನೀಡಿದ್ದಾರೆ.


ಮೌನ ಜಾತ್ರೆಯ ಕವನಸಂಕಲನವನ್ನು ಓದಲು ಹಿಡಿದರೆ ಖಂಡಿತವಾಗಿಯೂ ನಮಗೆ ಬೇಸರವೆನಿಸುವುದಿಲ್ಲ. ಓದುಗನು ಕೂಡ ಮನದೊಳಗೆ ಚಿಂತಿಸುವಂತೆ ಮಾಡುತ್ತದೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳು. ಮನುಜನ ಮನಸ್ಥಿತಿ ಸಂಬಂಧಗಳು ಸ್ವಾಥ೯ದಿಂದ ಅವಸಾನದತ್ತ ಸಾಗಿರುವ ಸ್ನೇಹ ಪ್ರೀತಿಯೆಂಬ ಮೋಸದಾಟಗಳು ನಮ್ಮನ್ನು ಒಮ್ಮೆ ಯೋಚಿಸುವಂತೆ ಮಾಡುತ್ತವೆ.


ಗುರು ಭಕ್ತಿಯ ನೆನಪಿನಿಂದ ಪ್ರಾರಂಭವಾಗುವ ಕವಿತೆಯು

ಬಾಡದಿರಲಿ ಬದುಕು ಕವಿತೆಯೊಂದಿಗೆ ಕೊನೆಯಾಗುತ್ತದೆ. ಈ ಕೃತಿಯನ್ನು ಓದಲು ಕೈಗೆತ್ತಿಕೊಂಡಾಗ ನನ್ನ ಮನವನ್ನು ಕಾಡಿದ ಹಲವು ಕವಿತೆಗಳನ್ನು ಇಲ್ಲಿ ಪರಿಚಯ ಮಾಡುತ್ತೇನೆ. (ಅ) ಮಾನವೀಯತೆ ಕವಿತೆಯ ಶೀರ್ಷಿಕೆ ಬರೆದಿರುವ ಸಾಲುಗಳು ಮನುಜನ ಒಳ ಮನಸ್ಸಿನ ನಿಕೃಷ್ಟತೆಯನ್ನು ಸಾರುತ್ತಾ ಹೋಗುತ್ತವೆ. ಕಾಲಚಕ್ರದ ಹೊಡೆತಕ್ಕೆ, ವಿಳಾಸವಿಲ್ಲದ ಊರು ಸೇರುವೆನೆಂಬ ಕೊಂಚ ಅರಿವು ಇಲ್ಲದ ಮನುಷ್ಯ, ನನ್ನ ಮಾನವ ಜನ್ಮಕೆ, ಹುಟ್ಟು ಪಶ್ಚಾತ್ತಾಪ ಪಡುತ್ತದೆ, ಮೌಲ್ಯಗಳು ಸುಮ್ಮನೆ ಬಿಕ್ಕಳಿಸುತ್ತವೆ. ಎಂದು ಹೇಳುವ ಕವಯತ್ರಿ ಮನುಜನ ಮನಸ್ಸು ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಹೇಗೆ ಬದಲಾಗುತ್ತಿದೆ ಎಂಬ ಅಂಶಗಳನ್ನು ತಿಳಿದುಕೊಳ್ಳ ಬಹುದು. ಮನುಷ್ಯನ ಹೃದಯಗಳಲ್ಲಿ ಅನುಕಂಪ ಮಾನವೀಯತೆ ಕರುಣೆಯು ಸತ್ತು ಹೋಗಿದೆ. ಮನುಜನ ದೇಹದಲ್ಲಿ ಉಸಿರಿದ್ದರೂ ಕೂಡ ಸತ್ತಾ ರೀತಿಯಲ್ಲಿ ಇವೆ.

ಒಂದು ನೋವಿನ ಚಿತ್ಕಾರ ಬಹಳ ಜೋರಾಗಿ ಕೇಳಿಸುತ್ತಿದ್ದರೂ ಕೂಡ ನಾವು ಆ ಅಳುವ ಧ್ವನಿಯು ನಮಗೆ ಕೇಳದ ರೀತಿಯಲ್ಲಿ ನಾವು ಕಿವುಡರಂತೆ ನಟಿಸುತ್ತಿದ್ದೇವೆ. ತಿರುಗಿ ನೋಡಬೇಕು ಆ ನೋವಿನ ಕೂಗಿಗೆ ಕಾರಣವನ್ನು ಕೇಳಬೇಕು ಹುಡುಕಬೇಕು ಅಂತ ನಮಗೆ ಅನಿಸುವುದೇ ಇಲ್ಲ. ಆ ಮಟ್ಟಿಗೆ ನಮ್ಮ ಹೃದಯಗಳು ಸತ್ತು ಹೋಗಿವೆ. ಒಂದೊತ್ತಿನ ಅನ್ನಕ್ಕಾಗಿ ಪರದಾಡುವ ಬಡವರು ನಮಗೆ ಆಗಾಗ ಎದುರಾಗುತ್ತಾರೆ. ಶ್ರೀಮಂತ ಜನರು ತಮ್ಮ ನೋಟು ನಾಣ್ಯಗಳ ಚೀಲವನ್ನು ಕಂಡು ಕಾಣದಂತೆ ಸವರುತ್ತಾ ನೋಡುತ್ತಾ ಇರುತ್ತಾರೆ. ಈ ಹಣದ ಮುಂದೆ ಆ ಹಸಿದಿರುವ ದೇಹಗಳು ನಮಗೆ ಕಾಣಿಸುವುದೇ ಇಲ್ಲ. ವಯಸ್ಸಾದ ಹಿರಿಯ ಜೀವಗಳು ಅಸರೆಗಾಗಿ ಕೈಚಾಚುತ್ತವೆ. ಅದರೆ ಮನದಲ್ಲಿ ತಿರಸ್ಕರಾದ ಭಾವನೆಯು ಮೂಡಿ ನನ್ನ ಕೈಗಳನ್ನು ನಾವು ಮುಂದೆ ಚಾಚುವುದೇ ಇಲ್ಲ ಅವರ ಅಸರೆಗಾಗಿ ನಿಲ್ಲುವುದೇ ಇಲ್ಲ. ನನಗೆ ಗೊತ್ತು ಒಂದು ದಿನ ನಾನು ಎಷ್ಟೇ ಶ್ರೀಮಂತನಾದರೂ ಸೌಂದರ್ಯವಂತನಾದರೂ ಸಾವು ನಮಗೆ ತಪ್ಪಿದಲ್ಲ. ಸತ್ತು ವಿಳಾಸವೇ ತಿಳಿಯ ಊರು ಸೇರುತ್ತವೇ ಅಂತ ಅದರ ಕೊಂಚ ನೆನಪನ್ನು ಕೂಡ ನಾವು ಮಾಡಿಕೊಳ್ಳದೇ ಬದುಕುತ್ತಿದ್ದೇವೆ. ಮನುಜನಲ್ಲಿ ಇರಬೇಕಾದ ಮೌಲ್ಯಗಳು ಈಗ ಇವನ ಮನಸ್ಥಿತಿಯನ್ನು ಕಂಡು ಬಿಕ್ಕಳಿಸುತ್ತಿವೆ ಎಂದು ಬಹಳಷ್ಟು ಮಾಮಿ೯ಕವಾಗಿ ಮನುಜನ ಮನಸ್ಥಿತಿಯನ್ನು ತಿಳಿಸುವ ರೀತಿಯನ್ನು ಕವಯಿತ್ರಿ ಈ ಸಾಲುಗಳಲ್ಲಿ ತಿಳಿಸುತ್ತಾರೆ.


ಮಾತನಾಡಬೇಕು ನಾನು ಎಂಬ ಕವನದ ಶೀರ್ಷಿಕೆಯಲ್ಲಿ ಸತ್ತಿರುವ ಶವವು ಸ್ವಲ್ಪ ಸಮಯ ನಿಶ್ಯಬ್ಧವಾಗಿರಿ ನಾನು ಮಾತನಾಡಬೇಕಿದೆ ಎಂದು ಕೇಳುವ ಸಾಲುಗಳನ್ನು ಮನೋಜ್ಞವಾಗಿ ವಿವರಿಸುತ್ತಾ ಸಾಗುತ್ತಾರೆ. ಶವಕ್ಕೆ ಬಿಳಿ ವಸ್ತ್ರವನ್ನು ಹೊದ್ದಿಸಿ ಮಲಗಿದ್ದಾರೆ. ಆ ಬಿಳಿ ವಸ್ತ್ರದೊಳಗಿನಿಂದ ಮನಸ್ಸು ಮಾತನಾಡುತಿದೆ. ಈಗ ಇಷ್ಟೊಂದು ಆಳುತ್ತಾ ಕುಳಿತಿರುವ ನೀವು ನಾನು ಬದುಕಿರುವಾಗಲೇ ಒಂದಷ್ಟು ಪ್ರೀತಿಯನ್ನು ಹಂಚಬೇಕಿತ್ತು. ನಾನು ಕೆನ್ನೆಯನ್ನು ಊದಿಸಿಕೊಂಡು ಆಳುತ್ತಾ ಕೂತಿದ್ದರು ನನ್ನೊಳಗಿನ ನೋವನ್ನು ನೀವು ಅಥ೯ ಮಾಡಿಕೊಳ್ಳಲಿಲ್ಲ. ನನಗೆ ಬಂಗಾರ ವಜ್ರ ವೈಡೂರ್ಯವನ್ನು ನಾನೆಂದು ಕೂಡ ಬಯಸಿರಲಿಲ್ಲ. ಅದರೆ ನನ್ನ ಕೊರಳಿಗೆ ಆರಿಶಿನ ದಾರವನ್ನು ಕಟ್ಟಿದವನ ಪ್ರೀತಿಯಷ್ಟೆ ನನಗೆ ಬೇಕಿತ್ತು. ಅದರೆ ಅವನು ಕತ್ತಲಿನ ರಾತ್ರಿಯ ಸಮಯದಲ್ಲಿ ಮಾತ್ರ ಒಲವನ್ನು ತೋರಿಸುತ್ತಿದ್ದ. ಆ ಒಲವಿಗೆ ನನ್ನ ಒಡಲು ತುಂಬಿತು. ಅದರೆ ಎದೆಯ ರಕ್ತವನ್ನು ಹೀರಿದ ಕುಡಿಗಳಿಗೆ ಅಮೃತ ಘಮವೆಂದು ಸಾರಲಿಲ್ಲ. ಯಾರಿಗೂ ಬೇಡದಳೆಂದೇನೋ ಸಾವು ನನಗೆ ಅಪ್ತವಾಗಿ ಕಂಡಿತು. ಬದುಕಿಯೂ ಸತ್ತಂತೆ ಇದ್ದ ನಾನು ಸಾವಿನ ಒಲುಮೆಯನ್ನು ಒಪ್ಪಿಕೊಂಡಿದ್ದೆ. ವಾವ್ ಎಂತಹ ಸಾಲುಗಳು ಇತ್ತೀಚಿಗೆ ನಾನು ಓದಿದ ಅತ್ಯುತ್ತಮವಾದ ಬರಹವು ಇದಾಗಿದೆ. ಈ ಕವಿತೆಯನ್ನು ಮತ್ತೆ ಮತ್ತೆ ಓದಿದ್ದೇನೆ.


ಬದುಕು ಎಂಬ ಶೀರ್ಷಿಕೆಯಲ್ಲಿ ಬರೆದ ಮತ್ತೊಂದು ಕವಿತೆ

ಈ ಸಮಾಜದಲ್ಲಿ ಮನುಷ್ಯತ್ವ ಮರೆತ ಮನಸುಗಳ ಬಗ್ಗೆ ಸಾರುತ್ತದೆ. ನಿನ್ನ ಜೊತೆಯಲ್ಲಿ ಇರುವವರೆಲ್ಲಾರೂ ನಿನ್ನವರೆಂದು ಬೀಗ ಮನುಜನೇ ಅವರಿಗೆ ಬೇಕಾದವರು ಜೊತೆಯಾದಾಗ ನಿಮ್ಮನ್ನು ತಿರಸ್ಕರಿಸಿ ಹೋಗುತ್ತಾರೆ. ನೀನು ಎಲ್ಲಾರನ್ನು ನಂಬಿ ಪ್ರೀತಿಯಿಂದ ಬಾಚಿ ತಬ್ಬಿಕೋಬೇಡ ತಬ್ಬಿಕೊಂಡವರೇ ನಿನ್ನ ಬೆನ್ನಿಗೆ ಇರಿಯುವುದನ್ನು ನಾನು ಕಂಡಿದ್ದೇನೆ. ಮಗ್ದ ಮನಸುಗಳು ಎಂದು ಒಲವಿನ ಆಸ್ತವನ್ನು ಚಾಚಿದಾಗ ಆ ಅಸ್ತದೊಳಗೆ ಚುಚ್ಚುವ ಮುಳ್ಳುಗಳು ತುಂಬಿರುತ್ತವೆ. ಮುಖವಾಡ ಹೊತ್ತ ಬದುಕಿದು ಸಂತೆಯಂತ ಗದ್ದಲ ಈ ಬದುಕಿನಲ್ಲಿ ತನ್ನತನವನ್ನು ಮಾರಿಕೊಳ್ಳದೆ ಮನ್ನೆಡೆದರೆ ಸೋಲನ್ನು ಕೂಡ ಗೆಲುವಿನಂತೆ ಸಂಭ್ರಮಿಸ ಬಹುದೆಂದು ಬಹು ಸೊಗಸಾಗಿ ಹೇಳಿದ್ದಾರೆ.


ಅವ್ವ ಕವಿತೆಯ ಶೀರ್ಷಿಕೆಯಲ್ಲಿ ಅಮ್ಮನ ಜೀವನ ಮತ್ತು ಪ್ರೀತಿಯನ್ನು ವಿವರಿಸುತ್ತಾ ಸಾಗುತ್ತಾರೆ. ಅಮ್ಮನಿಗೂ ಆಡುಗೆ ಮನೆಗೂ ಬಿಡಿಸಲಾರ ಒಂದು ಸಂಬಂಧವಿದೆ. ತಾನು ಉಪವಾಸವಿದ್ದರೂ ಕೂಡ ತನ್ನೊಡಲ ಮಕ್ಕಳಿಗೆ ತನ್ನವರಿಗೆ ರುಚಿ ರುಚಿಯಾಗಿ ಆಡುಗೆಯನ್ನು ಮಾಡಿ ಬಡಿಸಿದರೂ ಅವಳ ಮಾಡುವ ಉದ್ದಿಮೆಗೆ ಯಾವುದೇ ಸಂಬಳವಿರುವುದಿಲ್ಲಾ. ಅಮ್ಮ ಯಾವತ್ತೂ ಕೋಪಗೊಂಡಿದ್ದು ಸಿಡಿ ಮಿಡಿಗೊಂಡಿದ್ದು ನೋಡಲೇ ಇಲ್ಲ

ಪಾತ್ರೆ ಸೌಟುಗಳ ಜೊತೆಯಲ್ಲಿ ಆಕೆ ಸುಖಿಯಾಗಿದ್ದಾಳೆ.

ನನ್ನವ್ವ ಯಾವೊತ್ತೂ ಕೂಡ ಬಣ್ಣ ಬಣ್ಣದ ಸೀರೆ ಬೇಕು ಅದನ್ನು ಉಟ್ಟು ಶೃಂಗಾರಗೊಳ್ಳಬೇಕು ಎಂದು ಯಾವತ್ತು ಕೂಡ ಬಯಸಲಿಲ್ಲ ಅವಳು ಮಾಸಿದ ಸೀರೆಯಲ್ಲೂ ಕೂಡ ನಿರಾಭರಣಾ ಸುಂದರಿಯಂತೆ ಕಾಣುತ್ತಾಳೆ. ನನ್ನವ್ವ ಎಂದೂ ಮೋಸ ವಂಚನೆಗೆ ತಲೆಬಾಗಲಿಲ್ಲ, ತನ್ನನ್ನು ತಾನು ಅಡವಿಟ್ಟುಕೊಂಡು ಬದುಕಿದವಳು ಅಲ್ಲಾ, ಸ್ವಾಭಿಮಾನದ ಪಾಠವನ್ನು ಕಲಿಸಿ ಬದುಕಿನ ದೀಪವನ್ನು ಹಚ್ಚಿಟ್ಟವಳು ನನ್ನವ್ವ ಎಂದು ಅಮ್ಮ ಮಮತೆಯನ್ನು ಸಾರುತ್ತಾರೆ ಕವಯಿತ್ರಿ ಈ ಕವಿತೆಯಲ್ಲಿ.


ಮೌನ ಜಾತ್ರೆಯೆಂಬ ಈ ಕವನಸಂಕಲನದಲ್ಲಿ ಬರೀ ಸಮಾಜ ಜನರ ಮನಸ್ಥಿತಿ ತಾಯಿಯ ಮಮತೆಯು ಮಾತ್ರ ಇರದೇ ಪ್ರೀತಿ ಪ್ರೇಮವೂ ಕೂಡ ಇದೇ ಹಣತೆಯೆಂಬ ಶೀರ್ಷಿಕೆಯ ಕವನದಲ್ಲಿ 

ಹಣತೆಯ ಬೆಳಕಿಗಿಂತಲೂ

ನಿನ್ನ ಕಣ್ಣ ಹೊಂಬೆಳಕಿಗೆ

ಪದೇ ಪದೇ ಸೋತು ಹೋಗುತ್ತೇನೆ. ಸ್ನೇಹವೆಂಬ ದೀಪದ ಬೆಳಕಿನಲ್ಲಿ ನಿನ್ನ ಮುಖದಲ್ಲಿ ಮಿನಗುವ ಕಾಂತಿಯನ್ನು ನಾನು ನೋಡುತ್ತಲೇ ನನ್ನನ್ನು ನಾನು ಮರೆತು ಹೋಗುತ್ತೇನೆ. ಅದೆಂತಹ ದಿವ್ಯವಾದ ಚೆಲವು ನಿನ್ನದು ನಿನ್ನ ಚೆಲುವನ್ನು ಸವಿಯುವುದರಲ್ಲೆ ನಾನು ಮೌನ ಧ್ಯಾನಿಯಾಗುತ್ತೇನೆ. ಈ ನಮ್ಮ ಪ್ರೀತಿ ವಿಶ್ವಾಸವೆಂಬ ಕಿರಣಗಳು ಎಂದಿಗೂ ಆರದಂತೆ ಇರಲಿ ಎಂಬ ಉತ್ಕಟವಾದ ಬಯಕೆಯಿಂದ ಪ್ರೀತಿಯ ತೈಲವನ್ನು ದೀಪಕ್ಕೆ ಸದಾ ಸುರಿಯುತ್ತೇನೆ. ನಿನ್ನ ಪ್ರೀತಿಯ ಸಾಂಗತ್ಯದಲ್ಲಿ ತನ್ಮಯಳಾಗುತ್ತೇನೆ ಎಂದು ಒಲವಿನ ಪ್ರೇಮಧಾರೆಯ ಸಾಲುಗಳನ್ನು ಅದ್ಬುತವಾಗಿ ವಣಿ೯ಸಿದ್ದಾರೆ.


ಈ ಕವನಸಂಕಲನದ ಎಲ್ಲಾ ಕವಿತೆಗಳನ್ನು ವಿವರಿಸುತ್ತಾ ಹೋದರೆ ಓದುಗನಲ್ಲಿ ಕುತೂಹಲ ಕಡಿಮೆಯಾಗಬಹುದು 

ಅದ್ದರಿಂದ ಕೆಲವು ಕವಿತೆಗಳನ್ನು ಮಾತ್ರ ಪರಿಚಯ ಮಾಡುತ್ತಿದ್ದೇನೆ. ಈ ಕವನಸಂಕಲನದಲ್ಲಿ ಇನ್ನೂ ಹಲವಾರು ಕವಿತೆಗಳು ಬಾಡದಿರಲಿ ಬದುಕು, ಮೌನಿ ಅವಳು, ನೀ ಅಪರಾಧಿಯಲ್ಲ, ಜಗವು ಮೌನವಾಗಿ ಬಿಡಲಿ ಮುಂತಾದ ಕವಿತೆಗಳು ಓದುಗರ ಮನಕ್ಕೆ ಲಗ್ಗೆ ಇಡುತ್ತವೆ.


ಈ ಮೌನ ಜಾತ್ರೆ ಕವನಸಂಕಲನಕ್ಕೆ ಎಸ್ ನಾಗಮ್ಮ ಇವರು ಮುನ್ನುಡಿಯನ್ನು ಬರೆದಿದ್ದು, ಭಾವಯಾನಿರವರ ಈ ಕವನಸಂಕಲನದಲ್ಲಿ ಪ್ರೀತಿ ಪ್ರೇಮ, ತಾಯಿ' ಸಂಗಾತಿ, ಸಂಸಾರದ ಗುಟ್ಟು, ಪದವಿರದ ನೋವುಗಳ ನವಿರಾದ ಅಭಿವ್ಯಕ್ತಿ. ಇಂತಹ ಮೌನ ಜಾತ್ರೆಗಳು ಕನ್ನಡ ಸಾಹಿತ್ಯಲೋಕದತ್ತಾ ಹರಿಯಲಿ ಬೆಳೆಯಲಿ ಎಂದು ಹೇಳಿ ಹಾರೈಸಿದ್ದಾರೆ. ಉದಯ ಭಾಸ್ಕರ್ ಸುಳ್ಯರವರು ಬೆನ್ನುಡಿಯನ್ನು ಬರೆದಿದ್ದು ಮೌನ ಜಾತ್ರೆ ಕವನಸಂಕಲನದಲ್ಲಿರುವ ಕವಿತೆಗಳು ಓದುಗನ ಮನದ ಬಾಗಿನಲ್ಲಿ ಮೌನ ಜಾತ್ರೆಯು ಸಡಗರ ಸಂಭ್ರಮದಿಂದ ಸದ್ದು ಮಾಡಲೆಂಬ ತುಂಬು ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.


ಶ್ರೀಮತಿ ಪ್ರಮೀಳಾ ರಾಜ್ ರವರ ಮೌನಜಾತ್ರೆ ಎರಡನೇಯ ಕೃತಿಯಾಗಿದ್ದು ಒಂದಷ್ಟು ಬದುಕಿನ  ಸಂದೇಶಗಳನ್ನು ಹೊತ್ತು ಬಂದಿದೆ. ಎಲ್ಲಾರೂ ಈ ಕೃತಿಯನ್ನು ಕೊಂಡು ಓದಿ ಸಾಹಿತಿಗಳನ್ನು ಬೆಳೆಸಬೇಕಾಗಿದೆ. ಯಾಕೆಂದರೆ  ಕೃತಿಯನ್ನು ಓದಿದಾಗ ಮಾತ್ರ ಆ ಕವಿತೆಗಳಲ್ಲಿ ಇರುವ  ಒಳಾಂಶಗಳನ್ನು ಗ್ರಹಿಸಬಹುದಾಗಿದೆ


ತಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ 


ನಾರಾಯಣಸ್ವಾಮಿ .ವಿ

ಮಾಸ್ತಿ ಕೋಲಾರ ಜಿಲ್ಲೆ .

Image Description

Post a Comment

0 Comments