"ಭಾವ ವೈಭವ" ದೊಳಗೆ ಭಾವನೆಗಳೇ ಹಾಡಾಗಿವೆ.
ಆ. ನಾ. ಕೃಷ್ಣನಾಯಕ್ ಬರೆದಿರುವ "ಭಾವ ವೈಭವ" ಕವನ ಸಂಕಲನದಲ್ಲಿ ಒಟ್ಟು 78 ಕವಿತೆಗಳಿವೆ. ಇದು ಆ.ನಾ. ಕೃಷ್ಣನಾಯಕ್ ಅವರ ಚೊಚ್ಚಲ ಕೃತಿಯಾಗಿದೆ.
ಕನ್ನಡಾಂಬೆ, ಮಣ್ಣಿನ ಹಿರಿಮೆ, ಧರ್ಮಭೂಮಿ, ಕಾವೇರಿ, ಸುಗ್ಗಿ ಸಂಭ್ರಮ, ಕಾಯಕವೇ ಕೈಲಾಸ, ಕಲ್ಲಾದ ಭಗವಂತ, ಎಣ್ಣೆಯಲ್ಲಿ ದುನಿಯಾ, ನಾಡಿನ ಕಣ್ಣು, ಸೃಷ್ಟಿಯೇ ದೈವ, ಜ್ಞಾನ ದೀವಿಗೆ, ಭ್ರಷ್ಟರು, ಸತ್ಯ ಮಿತ್ಯ, ಅಪ್ಪ, ಮಡದಿ, ಕವಿಮನ ಆಸೆ, ದಾಸ, ಕಲಿಗಾಲವಯ್ಯ, ಆಮಂತ್ರಣ, ಭಾವ ಶ್ರಾವ, ನಾಡಭಕ್ಷಕರು, ಕಣ್ಕೊಟ್ಟ ದೇವರು, ಹರಿನಾಮ ಸ್ಮರಣೆ, ಹಿರಿಮೆಯ ಭಾರತ, ರಕ್ಷಕ ಕವಿತೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕವಿತೆಗಳು ಪ್ರೇಮಕವನಗಳಾಗಿವೆ.
ಆ.ನಾ. ಕೃಷ್ಣ ನಾಯಕ್ ಬರೆದಿರುವ ಇಲ್ಲಿನ ಬಹುತೇಕ ಕವಿತೆಗಳು ಗೇಯತೆಯಿಂದ ಕೂಡಿವೆ. ಕವಿ ತನ್ನ ಭಾವನೆಗಳನ್ನು ಇಲ್ಲಿನ ಕವಿತೆಗಳ ಜೊತೆಗೆ ಹಂಚಿಕೊಂಡಿರುವುದು ಸ್ಪಷ್ಟವಾಗಿ ನಮಗೆ ಗೋಚರಿಸುತ್ತವೆ. ಪ್ರಿಯ ತಮ್ಮ ತನ್ನ ಪ್ರೇಯಸಿಯನ್ನು ಕುರಿತು ಏನೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸಬಹುದೋ ಆ ಎಲ್ಲ ಭಾವನೆಗಳು ಇಲ್ಲಿನ ಕವಿತೆಗಳಲ್ಲಿ ಮೂಡಿರುವ ಹಾಗೆ ಪ್ರಿಯತಮೆ ತನ್ನ ಪ್ರಿಯಕರನ ಸ್ವಾಗತಿಸಲು ಏನೆಲ್ಲ ಭಾವನೆಗಳನ್ನು ವ್ಯಕ್ತಪಡಿಸಬೇಕೋ ಆ ಭಾವನೆಗಳೆಲ್ಲ ಇಲ್ಲಿನ ಬಹುಪಾಲು ಕವಿತೆಗಳಲ್ಲಿ ವ್ಯಕ್ತವಾಗಿರುವುದನ್ನು ನಾವು ಕಾಣಬಹುದಾಗಿದೆ.
ಪ್ರೇಮ ಕವಿತೆಗಳು ಮೂಡುವಾಗ ಪ್ರಕೃತಿಯ ಆಕರಗಳಾದ ಭೂಮಿ ಸೂರ್ಯ ಚಂದ್ರ ನಕ್ಷತ್ರ ನದಿ ಸಮುದ್ರ ಕಾಡು ಸೂರ್ಯೋದಯ ಪಕ್ಷಿಗಳು ಹೃದಯ ಹೂವು ಇವುಗಳನ್ನು ಕವಿ ತಮ್ಮ ಕವಿತೆಗಳ ಮೂಲಕ ಸಾಕಷ್ಟು ಬಳಸಿಕೊಂಡಿರುವುದರ ಪರಿಣಾಮವಾಗಿ ಕವಿತೆಗಳ ಸಮೃದ್ಧತೆ ಕಂಡು ಬರುತ್ತದೆ ಹಾಗೆಯೇ ಹಾಡಲು ಅನುಕೂಲವಾಗಿವೆ. ಇಲ್ಲಿನ ಅನೇಕ ಕವಿತೆಗಳು ಗೀತೆಗಳಾಗಿ ಕಂಡುಬಂದಿರುವ ಕಾರಣ ಕವಿ ಒಳ್ಳೆಯ ಗೀತ ರಚನೆಕಾರನಂತೆ ಕಂಡುಬರುವುದರಲ್ಲಿ ಅಲ್ಲಗಳೆಯುವಂತಿಲ್ಲ. ಇಲ್ಲಿನ ಅನೇಕ ಕವಿತೆಗಳು ನವೋದಯ ಕವಿತೆಗಳಂತೆ ಕಂಡುಬರುವುದರಿಂದ ಕವಿತೆಗಳು ಗೀತೆಯಂತೆ ಆಡಿಕೊಳ್ಳಲು ಬರುತ್ತವೆ.
ಕವಿ ಆ. ನಾ.ಕೃಷ್ಣನಾಯಕ ಅವರು ಬೇರೆ ಬೇರೆ ಕವಿತೆಗಳ ಆಯಾಮಗಳನ್ನು ರೂಡಿಸಿಕೊಳ್ಳಬೇಕಾಗುತ್ತದೆ ಹಾಗಂತ ನಾವು ಕವಿಯನ್ನು ನಿರ್ದಿಷ್ಟವಾಗಿ ಹೀಗೆ ಬರೆಯಬೇಕೆಂದು ತಾಕೀತು ಮಾಡುವ ಗೋಜಿಗೆ ಹೋಗಬೇಕಾಗಿಲ್ಲ. ಇಲ್ಲಿನ ಪ್ರೇಮ ಕವನಗಳನ್ನು ಉದಾಹರಿಸುವುದಾದರೆ 'ಭಾವದಲೆ' ಕವನದಲ್ಲಿ
"ನನ್ನೆದೆಯ ಬಾನಂಗಳದ ತುಂಬಾ
ಅವಳದೇ ಮಧುರ ಗೆಜ್ಜೆಯ ತಾಳ
ಎದೆ ಕಡಲು ಉಕ್ಕುತಿದೆ ಮರೆಯಾಗದು
ಅವಳ ಒಲವಿನ ಮೇಳ"
ಹೀಗೆ ಪ್ರಿಯತಮ ಪ್ರೇಯಸಿಯ ಪ್ರೇಮಕ್ಕಾಗಿ ಪರಿತಪಿಸಿದರೆ
"ಮಲ್ಲಿಗೆ ಮನ" ಕವನದಲ್ಲಿ ಬರುವ ಈ ಸಾಲುಗಳು
" ನಲ್ಲನೆ ನಿನ್ನ ಸವಿ ಮಾತೇ ಚೆನ್ನ
ತಂಗಾಳಿಯಂತೆ ತಂಪಾಗಿದೆ
ನಿನ್ನೊಲವಿನ ಧಾರೆ ಸೆಳೆಯುತ್ತಿದೆ
ಮನಸಾರೆ ಮನದಾಸೆ ಈಗ ಮಾಗಿದೆ"
ಎಂದು ಪ್ರೇಯಸಿ ಪ್ರಿಯತಮನನ್ನು ಸ್ವಾಗತಿಸುವ ಪರಿಯನ್ನು ಇಲ್ಲಿ ಕಾಣಬಹುದು
ಹೀಗೆ ಸಾಕಷ್ಟು ಪ್ರೇಮಕವಿತೆಗಳನ್ನ ಬರೆದಿರುವ ಆ. ನಾ. ಕೃಷ್ಣನಾಯಕ್ ಅವರು ಇದರಾಚೆ ನಾಡಿನಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆಯೂ ಕೂಡ ತಮ್ಮ ಗಮನವನ್ನು ಹರಿಸಿರುವುದರ ಜೊತೆಗೆ ಸ್ವತಃ ಅನುಭವವನ್ನು ಪಡೆದಿರುವ ಕಾರಣ ಆ ಅನುಭವಗಳನ್ನು ಇಲ್ಲಿನ ಭ್ರಷ್ಟರು, ಕಲಿಗಾಲವಯ್ಯ, ಆಮಂತ್ರಣ ಕವಿತೆಗಳ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಕವಿ ಕಲಿಗಾಲವಯ್ಯ ಕವಿತೆಯಲ್ಲಿ
"ಲಂಚದ ಮೋಹವಿಲ್ಲಿ ಮಂಚದ ದಾಹವಿಲ್ಲಿ
ಲಫಂಗ ಜನರಲ್ಲಿ ನ್ಯಾಯಕ್ಕೆ ಬೆಲೆಯೆಲ್ಲಿ
ಸತ್ಯವ ಸಾಯಿಸ್ತಾರೆ ಸುಳ್ಳನ್ನೇ ಮೆರಿಸ್ತಾರೆ
ಸಾವಲ್ಲು ನೋವಲ್ಲೂ ಲಾಭನೇ ಮಾಡ್ಕೊತಾರೆ"
ನಾ ನಾಡು ನುಡಿಯ ಬಗ್ಗೆ ಕವಿ ಕನ್ನಡಾಂಬೆ, ಮಣ್ಣಿನ ಹಿರಿಮೆ, ಧರ್ಮಭೂಮಿ, ಕಾವೇರಿ, ನಾಡಿನ ಕಣ್ಣು ಕವಿತೆಗಳಲ್ಲಿ ಅಭಿಮಾನ ಮೆರೆದಿರುವುದನ್ನು ಕಾಣಬಹುದು. ಕನ್ನಡಾಂಬೆ ಎನ್ನುವ ಕವಿತೆಯಲ್ಲಿ ಈ ಕೆಳಗಿನ ಸಾಲುಗಳನ್ನು ನಾವು ಗಮನಿಸಬಹುದು
"ಕನ್ನಡಿಗನ ಎದೆಯಲ್ಲಿ
ಕರುನಾಡ ಮಡಿಲಲ್ಲಿ
ನನ್ನೆದೆಯೂ ಬೆಳಗುತಿದೆ
ಬೆಳಕಿನ ಹೊನಲಲ್ಲಿ
ಎದೆ ತುಂಬಿ ನಿಂತಿಹಳು
ನನ್ನೆದೆಯ ಗುಡಿಯಲ್ಲಿ
ನನ್ನ ತಾಯಿಯು
ಕರುನಾಡ ಜಗದಾಂಬೆಯು"
ಕವಿ ಆ.ನಾ. ಕೃಷ್ಣ ನಾಯಕ್ ಅವರು ತಂದೆ ತಾಯಿ ಮಡಿದಿಯ ಬಗ್ಗೆಯೂ ಕವನಗಳನ್ನು ರಚಿಸಿದ್ದಾರೆ.
"ಹೂವಾಗಿ ಬಂದೆ ನನ್ನಿ ಬಾಳಲಿ
ನೂರಾಸೆ ನೀ ತುಂಬಿದೆ
ಪ್ರೀತಿ ಅರಿಯದ ಹೃದಯದಲಂದು
ಪ್ರೇಮದ ಚಿಲುಮೆ ಹರಿಸಿದೆ....
ಹೃದಯವು ನಿನ್ನ ಬಿಡಲು ನನ್ನೇಕೆ
ತೊರೆದು ಹೋದೆ....ಓ...ಗೆಳತಿ
ಓಹೋ.....ಗೆಳತಿ. ನಿನ್ನ ನೆನಪೇ ಕಾಡಿದೆ....
ಇಂತಹ ಅನೇಕ ರಚನೆಗಳಿಂದ ಒಟ್ಟಾರೆಯಾಗಿ ಇಲ್ಲಿನ ಕವಿತೆಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ಕವಿ ಒಬ್ಬ ಒಳ್ಳೆಯ ಗೀತೆ ರಚನೆಕಾರನಾಗಿ ನಮ್ಮ ಮುಂದೆ ಕಂಡುಕೊಳ್ಳುತ್ತಾನೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಸಿನಿಮಾ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ಮೂಲಕ ಒಳ್ಳೆಯ ಗೀತೆ ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಸಿನಿಮಾ ಜಗತ್ತು ಇಂತಹವರನ್ನು ಬಳಸಿಕೊಂಡು ಬೆಳೆಯಬಹುದಾಗಿದೆ ಈ ದಿಸೆಯಲ್ಲಿ ಆ. ನಾ. ಕೃಷ್ಣ ನಾಯಕ್ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊ. 9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments