* ರಾಗಿ" ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು, ಆರೋಗ್ಯಕರವಾದ, ತುಂಬಾ ಚಿಕ್ಕದಾದ, ಒಂದು ಧಾನ್ಯ*

 "ರಾಗಿ"  ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು,  ಆರೋಗ್ಯಕರವಾದ, ತುಂಬಾ ಚಿಕ್ಕದಾದ,   ಒಂದು ಧಾನ್ಯ


.

         ನಾನು ರಾಗಿಯಷ್ಟೇ ಚಿಕ್ಕವನು ಎಂದು  ಹೇಳಿಕೊಳ್ಳುವ, ಒಬ್ಬರ ಗುರುತು ರಾಗಿಯಾಗೇ ಮಾರ್ಪಟ್ಟಿದೆ.

 ಅಂದ ಹಾಗೆ  ರಂಗಭೂಮಿ ಕಲಾವಿದರೊಬ್ಬರು, ಇವರನ್ನು ಮೊಟ್ಟ ಮೊದಲಿಗೆ "ರಾಗಿ" ಎಂದು ಕರೆದದ್ದು, ನಂತರ ಒಂದು ತಂಡ(ಶಿವಸಂಚಾರ) ಇವರನ್ನು ರಾಗಿಯಂದೇ ಕರೆದು, ರಂಗ ಗೆಳೆಯರ ಪ್ರೀತಿಯ "ರಾಗಿ"ಯನ್ನಾಗಿ ಇವರನ್ನು  ಬದಲಾಯಿಸಿದ್ದು, ಒಂದು ಸುಂದರವಾದ ನೆನಪು...

           ಹೌದು ರಾಮನಗರ ಜಿಲ್ಲೆ, ರಾಮನಗರ ತಾಲೂಕು, ಶ್ಯಾನುಭೋಗನಹಳ್ಳಿ ಯ ಅದ್ಭುತವಾದ ರಂಗ ಪ್ರತಿಭೆ,  ಈ "ರಾಗಿ".

               ಲೇಟ್ ನಾಗರತ್ನಮ್ಮ ಮತ್ತು ಶ್ರೀ ಚಿನ್ನಗಿರಯ್ಯ ನವರ ಮೂರನೇ ಮಗನಾಗಿ  ಹುಟ್ಟಿದವರು ಗಿರೀಶ ಅಲಿಯಾಸ್ ರಾಗಿ. 

        ಗಿರೀಶ ದ್ವಿತೀಯ ಪಿಯುಸಿ ಓದುತ್ತಿರುವಾಗಲೇ  ತನ್ನ ತಾಯಿಯನ್ನು ಕಳೆದುಕೊಂಡು, ಬೆಂಗಳೂರಿನ ಅಕ್ಕನ ಮನೆಯತ್ತ ಮುಖ ಮಾಡುತ್ತಾರೆ. ಅಲ್ಲಿ  ಹಾಸ್ಟೆಲ್ ಬಾಯ್, ಆಗಿ ಓಕಳಿ ಪುರಂ ನಲ್ಲಿ "ಯುವಜನ ಸೇವಾ ಮತ್ತು ಸಾಂಸ್ಕೃತಿಕ ವಿಕಾಸ ಕೇಂದ್ರ" ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಾರ್ಯನಿಮಿತ್ತ ಅಲ್ಲಿಗೆ ಬಂದ ಪೊಲೀಸ್ ಪೇದೆ ಯಾಗಿದ್ದ ಶಿವಕುಮಾರ್ ಎಂಬುವರು ರಾಗಿಯವರನ್ನ ಸಿಲ್ಲಿ ಲಲ್ಲಿ ಧಾರಾವಾಹಿಯ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರಿಗೆ ಪರಿಚಯಿಸಿ ಸಿಲ್ಲಿಲಲ್ಲಿ ದಾರವಾಹಿಯಲ್ಲಿ ಒಂದು ಪಾತ್ರ ವಾಗಿ ಅಭಿನಯಿಸಲು ಅವಕಾಶ ಮಾಡಿಕೊಡುತ್ತಾರೆ. ಅದೇ ಹಾಸ್ಟೆಲಿಗೆ  ವಸತಿಯ ಸಲುವಾಗಿ ಬಂದಿದ್ದ, ಹೆಗ್ಗೋಡಿನ "ಆಶ್ರಯ್ ಕುಮಾರ್ ಎಂ" ಎಂಬುವರು ರಾಗಿಯವರಿಗೆ "ನೀನಾಸಂ"ನಲ್ಲಿ ನಡೆಯುವ "ರಂಗ ಶಿಬಿರ"ದ ಬಗ್ಗೆ ಮಾಹಿತಿ ತಿಳಿಸಿದ್ದು ಅಲ್ಲದೆ ಪರಿಚಯಸ್ಥರ ನೆರವಿನಿಂದ ರಾಗಿಯವರಿಗೆ ಆ ಶಿಬಿರಕ್ಕೆ ಹೋಗಲು ಸಹಾಯ ಮಾಡುತ್ತಾರೆ. ಅಲ್ಲಿ ರಂಗಭೂಮಿಯ ಬಗ್ಗೆ ನಡೆದ ವಿವಿಧ ಚರ್ಚೆಗಳು,ತರಬೇತಿಗಳು, ಅನಿಸಿಕೆ -ವಿನಿಮಯಗಳು, ರಂಗಭೂಮಿಯ ಬಗ್ಗೆ ಅನೇಕ ವಿಶೇಷ ಮಾಹಿತಿಗಳು, ಹಲವಾರು ಪ್ರಸಿದ್ಧ ರಂಗ ಕಲಾವಿದರು, ನಿರ್ದೇಶಕರು, ಚಲನಚಿತ್ರ ಕಲಾವಿದರು,ಸಂಗೀತಗಾರರ ಅನಿಸಿಕೆ-ಅಭಿಪ್ರಾಯಗಳು, ಹಾಗೂ ಪಾತರಗಿತ್ತಿ ಪಕ್ಕ, ರೋಮಿಯೋ ಜೂಲಿಯೆಟ್, ತಲಕಾಡು ಗೊಂಡ, ಎಂಬ ನಾಟಕಗಳು  ರಾಗಿಯವರಿಗೆ  ರಂಗಭೂಮಿ ಮತ್ತು ನಟನೆಯ ಬಗೆಗಿನ ಆಸಕ್ತಿಯನ್ನು ಇಮ್ಮಡಿಗೊಳಿಸಿದವು, 

 ಆದರೂ ಪರಿಸ್ಥಿತಿಗೆ ಅನುಗುಣವಾಗಿ ಸೆಕ್ಯೂರಿಟಿ ಗಾರ್ಡ್, ಹೋಟೆಲ್ ಕೆಲಸಗಾರ, ಬಟ್ಟೆ ಅಂಗಡಿಯ  ಮಾರಾಟಗಾರ, ಹೀಗೆ ಜೀವನಕ್ಕಾಗಿ ಹಲವಾರು ಕೆಲಸಗಳನ್ನ ಮಾಡಿದರೂ ತೃಪ್ತಿ ಎನಿಸುತ್ತಿರಲಿಲ್ಲ, 

  ಹೀಗಿರಲು 2006ರ ಜೂನ್ ತಿಂಗಳಲ್ಲಿ  ಕಂಡ ಆ ಪತ್ರಿಕ ಪ್ರಕಟಣೆ, ರಾಗಿಯವರ ಜೀವನವನ್ನೇ ಬದಲಾಯಿಸಿತು. ಆ ಪತ್ರಿಕೆಯಲ್ಲಿ" ಜುಮುರಾ ಸುತ್ತಾಟಕ್ಕೆ ಕಲಾವಿದರು ಬೇಕಾಗಿದ್ದಾರೆ " ಎಂಬ ಬರಹ ಮತ್ತು ಮಾಹಿತಿಯನ್ನು ಓದಿ 2006ರಲ್ಲಿ  ಜಮುರಾ ತಂಡಕ್ಕೆ ರಾಗಿಯವರು ಆಯ್ಕೆಯಾಗುತ್ತಾರೆ. ನಂತರ "ಶಿವ ಸಂಚಾರ" " ಶಿವದೇಶಿ ಸಂಚಾರ", "ನಾಟ್ಯ ಯೋಗ " ತಂಡಗಳಲ್ಲೂ ರಾಗಿಯವರು, ನಟರಾಗಿ,ವ್ಯವಸ್ಥಾಪಕರಾಗಿ,ತಂತ್ರಜ್ಞ ರಾಗಿ ಸೇವೆ ಸಲ್ಲಿಸಲು ಅವಕಾಶಗಳು ಸಿಗುತ್ತವೆ.


 2006ರಲ್ಲಿ  ಜಮುರಾ ಸುತ್ತಾಟ   ತಂಡಕ್ಕೆ ಆಯ್ಕೆಯಾದ ಈ ಕಲ್ಲಿಗೆ ಸುಂದರವಾದ ರಂಗ ರೂಪ ನೀಡುವ,  ಮೊದಲ ಶಿಲ್ಪಿ, "ಕೃಷ್ಣಮೂರ್ತಿ ಕವತ್ತಾರ್", ನಂತರ ಅದಕ್ಕೊಂದು ಅದ್ಭುತ ರೂಪ ನೀಡಿದ್ದು  " ಮಹದೇವ ಹಡಪದ್ " ನಂತರ  ಇದಕ್ಕೆ ಸುಂದರ ರೂಪ ನೀಡುತ್ತಾ ಸಾಗಿದವರು ಮಹಾಂತೇಶ್ ರಾಮದುರ್ಗ, ವೈ ಡಿ ಬದಾಮಿ,   ಕಲ್ಲಪ್ಪ ಪೂಜೇರಾ, ಮೌನೇಶ್ ಬಡಿಗೇರ್, ಶ್ರೀಕಾಂತ್ ಎನ್ ವಿ, ಧನಂಜಯ ದಿಡಗ, ಪ್ರಕಾಶ್ ಗರುಡ, ಸಿ ಬಸವಲಿಂಗಯ್ಯ, ಯತೀಶ್ ಕೊಳ್ಳೇಗಾಲ, ಮಂಜುಳಾ ಬದಾಮಿ, ಕೆ ಜಿ ಕೃಷ್ಣಮೂರ್ತಿ, ಸಿರೀಶ್ ಧೋಬಾಲ್, ಶೀಲಾ ಹಾಲ್ಕುರಿಕೆ, ಅಪ್ಪಣ್ಣ ರಾಮದುರ್ಗ, ಕೆಪಿಎಮ್ ಗಣೇಶಯ್ಯ, ಹಾಗೂ ಎಲ್ ಕೃಷ್ಣಪ್ಪ ಎಂಬ ರಂಗ ನಿರ್ದೇಶಕರು...

                    ಹಾಗೆಯೇ  2006ರಿಂದ  ಜಮುರಾ ಸುತ್ತಾಟ, ಶಿವ ಸಂಚಾರ, ಶಿವದೇಶ ಸಂಚಾರ, ನಾಟ್ಯ ಯೋಗ ತಂಡಗಳಲ್ಲಿ...

     ಮಹಾಮಾಯಿ, ನಾಯಿಮರಿ,ಶೂನ್ಯದೆಡೆಗೆ, ಬೆಳಕಿನೆಡೆಗೆ, ಚಿದಂಬರರಹಸ್ಯ,ತಿಪ್ಪೇರುದ್ರಸ್ವಾಮಿ,ಹಂಚಿನ ಮನೆ ಪರಸಪ್ಪ, ಮಹಾ ಚೇತನ, ಹೂಗನಸು, ಚಕೋರಿ, ಹರಿಶ್ಚಂದ್ರ,ಅಲ್ಲಮ್ಮನ ಬಯಲಾಟ,ಯಡೆಯೂರು ಸಿದ್ದಲಿಂಗೇಶ್ವರ, ಬೀಚಿ ಮತ್ತು ತಿಮ್ಮ, ಮಹಾಕ್ರಾಂತಿ, ನೀಲಿ ಕುದುರೆ,ಸಂತ ಶಿಶುನಾಳ ಶರೀಫ,  ಊರು ಸುಟ್ಟರೂ ಹನುಮಪ್ಪ ಹೊರಗ, ನೀರತಾವರೆ, ಜನರೆಡೆಗೆ ಜಂಗಮ, ಮಾದಾರ ಚೆನ್ನಯ್ಯ, ಹಳ್ಳಿ ಚಿತ್ರ, ಶರಣಪಥ ಕ್ರಾಂತಿಪಥ, ನವಿಲೂರು ನಿಲ್ದಾಣ, ಮತ್ಯೋರ್ಮ, ಮಹಾ ಬೆರಗು,ಸಾಯೋಆಟ, ಅವಿರಳ ಜ್ಞಾನಿ ಚನ್ನಬಸವಣ್ಣ, ಸೋರುತಿಹುದು ಸಂಬಂಧ  ಎಂಬ 29 ಕನ್ನಡ ನಾಟಕಗಳು, ಹಾಗೂ ಮರಣ್ ಹೀ ಮಹಾನವಮಿ, ಮತ್ತು ಮೇ ಬಾವರಿ ಚೆನ್ನಕೀ ಎಂಬ ಎರಡು ಹಿಂದಿ ನಾಟಕದಲ್ಲಿ ನಟರಾಗಿ ತಂತ್ರಜ್ಞರಾಗಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ.


       ಇದಲ್ಲದೆ  ಮದಕರಿಪುರ, ಬರಗೂರು  ಎಂಬ ಎರಡು  ರಾಧಾಕೃಷ್ಣ ಪಲ್ಲಕ್ಕಿ ರವರ ನಿರ್ದೇಶನದ ಚಿತ್ರಗಳಲ್ಲಿ, ಹಾಗೂ ಅಮರ್ ದೇವ್ ಎಂಬ ನಿರ್ದೇಶಕರ ಜೊತೆ  ಕೊನೆಯ ನಮಸ್ಕಾರ, ಮತ್ತು ಅಲೆಮಾರಿ ಆತ್ಮಕಥೆ  ಎಂಬ ಎರಡು ಕಲಾತ್ಮಕ ಚಿತ್ರಗಳಲ್ಲಿ, ಮಹೇಶ್ ಎಂಬ ಯುವ ನಿರ್ದೇಶಕರ ಜೊತೆ ಮುನಿಯನ ಮಾದರಿ  ಎಂಬ ಚಲನಚಿತ್ರಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.

             ಇತ್ತೀಚೆಗೆ  ಕವನ ರಚಿಸುವ ಹವ್ಯಾಸ ಹೊಂದಿದ್ದು ಆಗೊಮ್ಮೆ ಈಗೊಮ್ಮೆ  ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿ  ಪ್ರಶಸ್ತಿ ಗಳಿಸಿದ್ದಾರೆ. 

                           ಇವರ ಈ ರಂಗ ಸೇವೆಯನ್ನು ಮೆಚ್ಚಿ "ಸಂಸ್ಕೃತಿ ಸೌರಭ ಟ್ರಸ್ಟ್" ರಾಮನಗರ   ಇವರು ತಮ್ಮ ತಮ್ಮ ಟ್ರಸ್ಟ್ ವತಿಯಿಂದ "ರಾಜ್ಯೋತ್ಸವ ಪ್ರಶಸ್ತಿ", "ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ"- ಹಿರಿಯೂರು  ಇವರು "ವಿಶ್ವ ಕನ್ನಡ ಪುನೀತ್ ಸ್ಪೂರ್ತಿ ಪ್ರಶಸ್ತಿ", ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ -ಮೈಸೂರು ಇವರು "ವಿಕಾಸ ಶ್ರೀ "  ಹಾಗೂ "ತನುಶ್ರೀ ಸಾಂಸ್ಕೃತಿಕ ಸಂಸ್ಥೆ"- ಚಿತ್ರದುರ್ಗ ಕವನ ಸ್ಪರ್ಧೆಯಲ್ಲಿ, ಮನಸುಗಳ ಬಾಂಧವ್ಯ ಬೆಸುಗೆ ಸಾಹಿತ್ಯ ವೇದಿಕೆ, ಜ್ಞಾನ ದೀಪಂ ದಿನಂಪ್ರತಿ ಸಾಹಿತ್ಯ ವೇದಿಕೆ ಯ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾರೆ.

     ರಾಗಿ( ಇವನೆಂಥ ಕ್ರೂರಿ ) ಎಂಬ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಚಲನಚಿತ್ರ ನಿರ್ಮಾಣ ಮಾಡಲು  ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದಾರೆ.

ಲೇಖನ : ಡಾ. ವಿಲಾಸ್ ಕಾಂಬಳೆ

ಕನ್ನಡ ಉಪನ್ಯಾಸಕರು

ಎಸ್. ಪಿ. ಎಮ್.ಕಲಾ, ವಾಣಿಜ್ಯ, ವಿಜ್ಞಾನ, ಪದವಿ ಮಹಾವಿದ್ಯಾಲಯ ಹಾರೂಗೇರಿ.

ಬೆಳಗಾವಿ ಜಿಲ್ಲೆ.


Image Description

Post a Comment

0 Comments