*ಎಂತಹ ಕಾಲವದು *


 ಎಂತಹ ಕಾಲವದು

----------------------------------------------

ಶಾಲೆ ಶುರುವಾಯಿತೆಂದರೆ

ಒಂದು ತಂಡ ಊರೊಳಗೆ ಸುತ್ತಿ

ಯಾರು ಶಾಲೆ ಬಿಟ್ಟಿದ್ದಾರೆ ನೋಡಿ

ಇಬ್ಬರು ಕಾಲು ಇಬ್ಬರು ಕೈ ಹಿಡಿದು

ಹೊತ್ತುಕೊಂಡು ಮಾಸ್ತರ ಮುಂದ

ಕೊಟ್ಟು ಅಂವ ಲಬ್ ಲಬ್

ಹೊಯ್ಕೊಂಡು ಕುಳಿತಿದ್ದು ನೋಡಿ

ಸಮಾದಾನಪಟ್ಟ ಕಾಲವದು||೧||


ಎದ್ದ ತಕ್ಷಣವೇ ಆಟ

ಶಾಲೆ ಊಟಕ್ಕೆ ಬಿಟ್ಟಾಗೂ ಆಟ

ಶಾಲೆ ರೆಸ್ಟ ಬಿಟ್ಟಾಗ ಆಟ ಕೊನೆಗೆ

ಶಾಲೆ ಬಿಟ್ಟಾಗಲೂ ಆಟವೇ...ಆಟ

ಬಿಟ್ಟರೆ ಹೊಲ ಹೊಲ ತಿರುಗಿ

ಸಿಕ್ಕ ಸಿಕ್ಕ ಹಣ್ಣುಗಳ ಸವೆದು

ಮಾಸ್ತರಿಗೂ ತಂದು‌ ಕೊಟ್ಟು

ಪಾಠಕ್ಕಿಂತ ಅಟದಲ್ಲೇ ಕಳೆದ ಕಾಲವದು ||೨|| 


ಶಾಲ್ಯಾಗ ಮಾಸ್ತರಕ್ಕಿಂತ

ಮುಖ್ಯಮಂತ್ರಿದೆ ಕಾರಬಾರು 

ಯಾಂವ ಓದಲ್ಲ ಸರಿಯಾಗಿ ಬರೆಯೊಲ್ಲ

ಅವಂಗ ಕೋಲಿನಿಂದ ಇಂವ ಬಾರಿಸಿ

ದರಬಾರ್ ನಡೆಸುತ್ತಿದ್ದ ಉಳಿದವರು 

ಮೂಕ ಪ್ರೇಕ್ಷಕರು ಮಾತಾಡುವಂಗಿಲ್ಲ

ಮಾತಾಡಿದರೆ ಮಾಸ್ತರ ಬಂದ ಮೇಲೆ

ಎರಡು ಒದೆ ಜಾಸ್ತಿ ಬಿದ್ದ ಕಾಲವದು ||೩|| 


ಓದೋದು ಬರೆಯೋದು ಮಗ್ಗಿ

ಹೇಳೋದೆ ದೊಡ್ಡ ಸವಾಲು

ಪರೀಕ್ಷೆಗಂತೂ ಅಂತಹ ತಲೆಕೆಟ್ಟು

ತಲೆಯಲ್ಲಿ ಹುಳ ಬಿಟ್ಟುಕೊಂಡು

ತಲೆಕೆರೆದು ಓದಿದ್ದಂತೂ ಅಷ್ಟಕಷ್ಟೆ 

ಒತ್ತಡವಿಲ್ಲದೆ ಶಾಲೆಯೊಳಗಿದ್ದ ಕಾಲವದು ||೪|| 


ಮಾಸ್ತರುಗಳು ಕೋಲು ಹಿಡಿದು

ಹೊಡೆಯುತ್ತಿದ್ದರೆನ್ನುವದ ಬಿಟ್ಟರೆ

ನಮ್ಮ ಮೇಲೆ ಅವರಿಗೆ ಅದೇನಕ್ಕರೆ 

ಮಧ್ಯ್ಹಾನ ಊಟದ ಸಮಯದಾಗ

ಒಬ್ಬರನಾದರೂ ಕರೆದು

ಊಟ ಮಾಡಿಸಿದ  ಬಾಕ್ಸ್

ತೊಳೆದು ಖುಷಿಪಟ್ಟ ಕಾಲವದು ||೫|| 


ಬೆನ್ನಿಗೆ ಬಾರವಾಗುವಷ್ಡು ಪುಸ್ತಕವಿಲ್ಲ

ಕಲಿಯದೆ ಹೋದರೆ ಆಕಾಶ

ಕಳಚಿ ತಲೆಮೇಲೆ ಬಿದ್ದು ಬಿಡುವ

ಭಯವಂತೂ ಇರಲೇ ಇಲ್ಲ

ನಮ್ಮಪ್ಪ ನಮ್ಮವ್ವ ಎಷ್ಟು ಮಾರ್ಕ್ಸ

ತಗೆದೆ ಏನು ಎಂತ ಅಂತ 

ತಲೆ ಸಿಡಿಯುವ ಪ್ರಶ್ನೆಗಳಿಲ್ಲದ ಕಾಲವದು ||೬||


✍🏻ಪರಸಪ್ಪ ತಳವಾರ

Image Description

Post a Comment

0 Comments