*ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತವಾದುದು: ಯುವ ಚಿಂತಕ ಸಿದ್ದು ಸನದಿ*
*ರಾಯಬಾಗ:* ಇತ್ತೀಚೆಗೆ ರಾಯಬಾಗ ತಾಲ್ಲೂಕಿನಾದ್ಯಂತ ನಿತ್ಯ ನಡೆಯುತ್ತಿದ್ದ ವಿದ್ಯುತ್ ಕಡಿತ ಖಂಡಿಸಿ ನೂರಾರು ರೈತರ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಶ್ರೀ ಪಿ.ರಾಜೀವ ಅವರು ಕಳೆದ ದಿ.11 ರಂದು ಬುಧವಾರ ತಾಲ್ಲೂಕಿನ ಕುಡಚಿ, ಯಲ್ಪಾರಟ್ಟಿ,ಹಿಡಕಲ್, ಹಾಗೂ ಸುಲ್ತಾನಪುರ ವಿದ್ಯುತ್ ವಿತರಣಾ ಕೇಂದ್ರಗಳ ಮುಂದೆ ಹಮ್ಮಿಕೊಂಡಿದ್ದ "ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತವಾದುದು" ಎಂದು ಖೇಮಲಾಪುರದ ಯುವ ಚಿಂತಕ ಶ್ರೀ ಸಿದ್ದು ಸನದಿ ಹೇಳಿದರು. ದಿನಾಂಕ 12 ರಂದು ಗುರುವಾರ ಸಂಜೆ ಖೇಮಲಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಕಡಿತ ಹಲವು ದಿನಗಳಿಂದ ನಡೆಯುತ್ತಿರುವುದು ನಿಜ. ನಮ್ಮ ತಾಲ್ಲೂಕಿನಲ್ಲಷ್ಟೇ ಅಲ್ಲ, ಇಡೀ ಅಖಂಡ ಕರ್ನಾಟಕವೇ ವಿದ್ಯುತ್ ತೀವ್ರ ಕೊರತೆ ಎದುರಿಸುತ್ತಿದೆ. ಈ ವಿದ್ಯಮಾನ ಗಮನಿಸಿದ ಕುಡಚಿ ಕ್ಷೇತ್ರದ ಶಾಸಕ ಶ್ರೀ ಮಹೇಂದ್ರ ತಮ್ಮಣ್ಣವರ ಅವರು ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಾಪತ್ರಯ ಮೊದಲೇ ಅರಿತುಕೊಂಡಿದ್ದ ಶಾಸಕರು ತಮ್ಮ ತೋಟದ ನಿವಾಸದಲ್ಲಿ ತಾಲ್ಲೂಕಿನ ಹೆಸ್ಕಾಂ ಅಧಿಕಾರಿಗಳ ಜೊತೆ ತುರ್ತು ಸಮಾಲೋಚನ ಸಭೆ ನಡೆಸಿದರು. ನಂತರ ಕಾರ್ಯೋನ್ಮುಖರಾಗಿ ಕೂಡಲೇ ಶಾಸಕರು ಸಂಬಂಧಿಸಿದ ಹುಬ್ಬಳ್ಳಿಯ ಹೆಸ್ಕಾಂ ಉನ್ನತ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಕೂಲಂಕುಷವಾಗಿ ಚರ್ಚಿಸಿ, ಕ್ಷೇತ್ರದ ಜನರ ಬವಣೆಯನ್ನು ವಿವರಿಸಿ ಗಮನ ಸೆಳೆದಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಮಾಜಿ ಶಾಸಕ ಶ್ರೀ ಪಿ.ರಾಜೀವ ಅವರು ದಿಢೀರನೆ ನೂರಾರು ಯುವಕರನ್ನು ಹಾಗೂ ರೈತರನ್ನು ರೊಚ್ಚಿಗೆಬ್ಬಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ನಿಜಕ್ಕೂ ಅರ್ಥಹೀನ ಎಂದು ಅಭಿಪ್ರಾಯಪಟ್ಟರು. ಅಧಿಕಾರ ಇದ್ದಾಗ ರೈತರ ಪರ ನಿಲ್ಲದ ಇವರು ಅಧಿಕಾರವಿಲ್ಲದೇ ಹತಾಶರಾಗಿ ಈಗ ಯುವಕರನ್ನು ಹಾಗೂ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. ಈ ದೇಶದಲ್ಲಿ ಪ್ರತಿಭಟನೆ, ಮುಷ್ಕರ ಮಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಆದರೆ ಮಾಜಿ ಶಾಸಕರು ಜನಪರ ಹಾಗೂ ರೈತಪರ ಕಾಳಜಿಯ ಮುಖವಾಡ ಧರಿಸಿಕೊಂಡು ಪ್ರತಿಭಟನೆಯನ್ನೇ ಒಂದು ನಿಮಿತ್ಯ ಹಾಗೂ ಅಸ್ತ್ರವಾಗಿ ಮಾಡಿಕೊಂಡು ಮತ್ತೊಮ್ಮೆ ಜನರ ಚಿತ್ತ ತಮ್ಮತ್ತ ಸೆಳೆದು ಪ್ರಚಾರ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಕ್ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಹಲವು ಯುವ ಉದಯೋನ್ಮುಖ ಮುಖಂಡರು ಉಪಸ್ಥಿತರಿದ್ದರು.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments