ಮನೆ ಮನೆಗೆ ಅಂಬೇಡ್ಕರ್ :ಕಾರ್ಯಕ್ರಮ

 ಮುದ್ದಂಗುಡ್ಡಿ ಗ್ರಾಮ: ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ


ಎಲ್ಲಾ ಜಾತಿಯ ಸ್ತ್ರೀಯರಿಗೆ ಹಕ್ಕು-ಅಧಿಕಾರ ಕೊಟ್ಟವರು ಅಂಬೇಡ್ಕರ್: ಹುಸೇನಪ್ಪ ಅಮರಾಪುರ


ಮಾನ್ವಿ: ಭಾರತದಲ್ಲಿ ಈ ಹಿಂದೆ ಹೆಣ್ಣು ಮಕ್ಕಳನ್ನು ಅನಿಷ್ಟ, ಗಂಡಿನ ಗುಲಾಮಳು, ಸ್ವತಂತ್ರಕ್ಕೆ ಅನರ್ಹಳು ಎಂದು ಮೌಡ್ಯದ ಹೆಸರಲ್ಲಿ ಸ್ತ್ರೀಯರನ್ನು ಕಟ್ಟಿ ಹಾಕಲಾಗಿತ್ತು. ಆದರೆ ಹೆಣ್ಣು ಮಕ್ಕಳಿಗೂ ಒಂದು ಜೀವವಿದೆ, ಮನಸ್ಸಿದೆ. ಆಕೆಯೂ ಪುರುಷನಷ್ಟೇ ಸಮಾನಳು ಎಂದು ಎಲ್ಲಾ ಜಾತಿಯ ಸ್ತ್ರೀಯರಿಗೆ ಸಮಾನ ಹಕ್ಕು-ಅಧಿಕಾರಗಳನ್ನು ಕೊಟ್ಟವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು, ದಲಿತ ಸಾಹಿತ್ಯ ಪರಿಷತ್ತಿನ ಸಿಂಧನೂರು ತಾಲೂಕಾಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.


ಮಾನವಿ ತಾಲೂಕಿನ ಮುದ್ದಂಗುಡ್ಡಿ ಗ್ರಾಮದ ಲಕ್ಷ್ಮೀ - ಶರಣಕುಮಾರ್  ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ, 69ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.


ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, 12ನೇ ಶತಮಾನದ ಶರಣರು, ಪುಲೆ ದಂಪತಿಗಳು ಈ ದೇಶದ ಬಹುಸಂಖ್ಯಾತ ಜನರ ಏಳಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅಂಥಹ ಮಹಾತ್ಮರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು. ಅವರು ಇಡೀ ಮಾನವ ಜನಾಂಗದ ಒಳಿತಿಗೆ ಶ್ರಮಿಸಿದ ಮಹಾತ್ಮರು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು.


ಬಹುಜನ ಸಂಘರ್ಷ ಸಮಿತಿ ಮಹಾಪೋಷಕರು, ಹಿರಿಯ ಹೋರಾಟಗಾರರಾದ ಎಂ.ಆರ್.ಭೇರಿ, ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ತಿನ ಯುವ ಘಟಕದ ಮಾನವಿ ತಾಲೂಕಾಧ್ಯಕ್ಷ ಶರಣಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಮುಕ್ತಾಯದ ಕೊನೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮಾನವಿ ತಾಲೂಕಾಧ್ಯಕ್ಷ ಯಮುನಪ್ಪ ಜಾಗೀರ ಪನ್ನೂರು, ಪತ್ರಕರ್ತ ದುರುಗಪ್ಪ ಸಾದಾಪೂರು, ಮಹಿಳಾ ಜಾಗೃತಿ ಸಂಘದ ಮುಖಂಡ ನಿಂಗಪ್ಪ ಪೋತ್ನಾಳ, ಬಸವರಾಜ ಮುದ್ದಂಗುಡ್ಡಿ, ಚಿನ್ನಪ್ಪ, ಯಲ್ಲಮ್ಮ, ಜ್ಯೋತಿನಮ್ಮ, ಅಪ್ಪಯ್ಯ, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ :ವಿಲಾಸ್ ಕಾಂಬಳೆ

ಹಾರೂಗೇರಿ 


Image Description

Post a Comment

0 Comments