ಹುಕ್ಕೇರಿ ತಾಲೂಕಿನ ಶ್ರೀ ಭರತೇಶ ವಿದ್ಯಾ ಮಂಡಳದ ಭರತೇಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಮಾಧ್ಯಮಿಕ ವಿಭಾಗ ಬೆಲ್ಲದ ಬಾಗೇವಾಡಿ ಇಲ್ಲಿ 2001 -2002 ನೇ ಸಾಲಿನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಶ್ರೀ ಸಮಹಂತ ಭದ್ರಮಹಾರಾಜ ಭಾವಚಿತ್ರಕ್ಕೆ ಪೂಜೆ ಹಾಗೂ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಜಿ.ಎನ್.ದೇಶಪಾಂಡೆ ವಿಶ್ರಾಂತ ಮುಖ್ಯೋಪಾಧ್ಯಾರು ಆಗಮಿಸಿ ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ಗೌರವ ಸಲ್ಲಿಸುವುದು ಶ್ಲಾಘನೀಯ ಎಂದು ತಿಳಿಸಿ ಗುರುವಂದನಾ ಕಾರ್ಯಕ್ರಮಕ್ಕೆ ಶುಭ ಕೋರಿದರು. ನಂತರ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಸುಜಾತಾ ನಾವಿ, ಸುಶಾಂತ ಹಿರೇಮಠ್, ಮಲ್ಲಿಕಾರ್ಜುನ ನೆಪೇರಿ ಅನಿಸಿಕೆ ವ್ಯಕ್ತಪಡಿಸಿದರು . ನಿವೃತ್ತ ಶಿಕ್ಷಕರಾದ ಶ್ರೀ ಎನ್.ಬಿ.ತೇರದಾಳ ರವರು ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದುವಲ್ಲಿ , ಭರತೇಶ ಮಹಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಹಾಗೂ ಇಲ್ಲಿನ ಗುರುಗಳ ಪಾತ್ರ ಶ್ಲಾಘನೀಯವಾದದ್ದು ಎಂದು ಹೇಳಿ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಸರ್ವರಿಗೂ ಶುಭ ಕೋರಿದರು. ಎಲ್.ಎಸ್. ಮಾಲಗಾಂವ ನಿವೃತ್ತ ಶಿಕ್ಷಕರು ಮಾತನಾಡಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಹೊಂದಿ ಬದುಕುವುದೇ ನಿಜವಾದ ಶಿಕ್ಷಣ ಎಂದು ತಿಳಿಸಿದರು. ಎಸ್.ಬಿ.ಮುನ್ನೊಳ್ಳಿ ವಿಜೇತ ನಿವೃತ್ತ ಶಿಕ್ಷಕರು ಮಾತನಾಡಿ ಗುರು- ಶಿಷ್ಯರ ಸಂಬಂಧ ತಂದೆ ಮಕ್ಕಳ ಸಂಬಂಧವಿದ್ದಂತೆ, ಆ ದಿಸೆಯಲ್ಲಿ ಕಲಿಸಿದ ಗುರುಗಳನ್ನು ಗೌರವಿಸುವುದು ಸಂಸ್ಕಾರವಿತವಾದದ್ದು ಎಂದು ಅನೇಕ ಮೌಲಿಕ ನುಡಿಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಹಾಗೂ ಹಾಲಿ ಗುರು ವೃಂದವನ್ನು ಸತ್ಕರಿಸಿ, ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಭರತೇಶ ವಿದ್ಯಾ ಮಂಡಳದ ಆಡಳಿತ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ, ಮಾಧ್ಯಮಿಕ,ಕಾಲೇಜು ವಿಭಾಗ, ಶಿಕ್ಷಣ ಮಹಾವಿದ್ಯಾಲಯ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ ಸದರಿ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳಾದ ಗಂಗಾಧರ ನಂದಗಾವ ಹಾಗೂ ಅಭಿಜಿತ್ ಖೆಮಲಾಪುರೆ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಬಿಳ್ಳೂರೆ ಹಾಗೂ ಕಡೆಮನಿ ಸತ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಅನಿಲ ಹಂಜಿ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ತಪಸಿ ನಿರೂಪಿಸಿದರು.ಡಾ. ಉಮೇಶ್ ಪಾಟೀಲ ವಂದಿಸಿದರು.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ

.gif)

.gif)


0 Comments