ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳವರ ಪ್ರವಚನಗಳು


ಭಕ್ತಿಯೋಗ

-------------


( ಮೈಸೂರಿನ ಸುತ್ತೂರಲ್ಲಿ ದಿ. ೨೧.೯.೧೯೯೫ ರಿಂದ  ದಿ. ೨೧.೧೦.೧೯೯೫ ರವರೆಗೆ ಜರುಗಿದ ಪ್ರವಚನದ ಮಾಲಿಕೆ )


ಸಂಪಾದನೆ : ಡಾ. ಶ್ರದ್ಧಾನಂದ ಸ್ವಾಮಿಗಳು


ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಮೈಸೂರು


ಪ್ರಥಮ ಮುದ್ರಣ: ೧೯೯೯


೨೨. ಚಂದ್ರಗಿರಿ

------------


ಪುಟ ಸಂಖ್ಯೆ : ೯೦

-------------


ಭಾವಮಾಧುರ್ಯದ ಮೂಲಕ ಅನಂತ ಸತ್ಯದ ಅನುಭೂತಿ ಉಂಟಾಗುತ್ತದೆ. ಅದು ಭಕ್ತಿಯೋಗ.  ಈ ಯೋಗದಲ್ಲಿ ಸಾಧಕನು ಪರಮ ಸತ್ಯವನ್ನು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತಾನೆ. ಅದಕ್ಕೆ ತನ್ನನ್ನೇ ತಾನು

ಸಮರ್ಪಿಸಿಕೊಳ್ಳುತ್ತಾನೆ. ಅದು, ತಾನು ಒಂದಾಗಿ ಅವಿರಳ ಆತ್ಮಾನಂದ

ಪಡೆಯುತ್ತಾನೆ. ಈ ಭಕ್ತಿಯೋಗದ ಜೀವಾಳ ಎನಿಸಿರುವ ಪರಮಸತ್ಯದ ಅರಿವು ಸಾಧಕನಿಗೆ ಸ್ಪಷ್ಟವಾಗಿರಬೇಕಾಗುತ್ತದೆ. ಇಲ್ಲದಿದ್ದರೆ ಸಾಧನೆ ಕುಂಠಿತವಾಗುತ್ತದೆ.


ಮನೆ ಮಠ ಮುಂತಾದ ಪ್ರಪಂಚದ ವಸ್ತುಗಳನ್ನು ಪ೦ಚ ಜ್ಞಾನೇಂದ್ರಿಯಗಳಿಂದ ಅರಿಯುತ್ತೇವೆ. ಇದು ಐಂದ್ರಿಯಿಕ ಜ್ಞಾನ. ಪ್ರಪಂಚದಲ್ಲಿ ಇನ್ನು ಕೆಲವು ನಾವು ಕಂಡಿರದ ವಸ್ತುಗಳಿರುತ್ತವೆ. ಅವುಗಳನ್ನು ನಾವು ಕಂಡವರ ಮಾತಿನಿಂದ ಗ್ರಂಥಗಳಿಂದ ಅರಿಯುತ್ತೇವೆ; ಅದು 'ಶಬ್ದಜ್ಞಾನ.' ಯಾರೂ

ಕಂಡಿರದಂಥ ಮತ್ತೂ ಕೆಲವು ಸಂಗತಿಗಳನ್ನು ನಾವು ತರ್ಕದಿಂದ, ಅನುಮಾನದಿಂದ

ಅರಿಯುತ್ತೇವೆ; ಅದು ಅನುಮಾನಜ್ಞಾನ.


ಅನುಭಾವಿಗಳು ಪರಮಸತ್ಯವನ್ನು ಅರಿತವರು. ಅವರ ಜ್ಞಾನವು ಐಂದ್ರಿಯಿಕವಲ್ಲ, ಶಾಬ್ದಿಕವಲ್ಲ, ತಾರ್ಕಿಕವೂ ಅಲ್ಲ. ಅದು 'ಸ್ವಾನುಭವಜನ್ಯ, ಅಂತೆಯೇ ಸಂತರು-ಶರಣರು ಪಂಡಿತರಲ್ಲ, ಶಾಸ್ತ್ರಜ್ಞರಲ್ಲ, ವಿದ್ವಾಂಸರೂ ಅಲ್ಲ.

ಅವರು ಪರಮಾನುಭಾವಿಗಳು. ಅಲ್ಲಮಪ್ರಭುದೇವರು ಅಂಥ ಒಬ್ಬ ಅಪರೂಪದ ಅನುಭಾವಿಗಳು. ಪರಮಸತ್ಯವನ್ನು ಅವರು ಓದಿ, ಕೇಳಿ ತಿಳಿದುಕೊಂಡವರಲ್ಲ. ನಿರ್ಮಲ ಬದುಕಿನಲ್ಲಿ ಸಹಜವಾಗಿ ಅನುಭವಿಸಿದವರು. ಅದು ಅನುಭೂತಿ. ಅವರು ಸತ್ಯದ ಸ್ಪಷ್ಟ ಚಿತ್ರ ಕೊಡುತ್ತ ಒಂದು ಮಾತು ಹೇಳುತ್ತಾರೆ :


ಪುಟ ಸಂಖ್ಯೆ : ೯೧

--------------


ಕೆಲವರು ಕಂಡೆವೆಂಬರು! ಕೆಲವರು ಕಾಣೆವೆಂಬರು.ಅದೇನು ತಾರಾಮಂಡಲವೇ? ಸೂರ್ಯಮಂಡಲವೇ? ಗುಹೇಶ್ವರನಿಪ್ಪುದು ಚಂದ್ರಗಿರಿಯ ಪಟ್ಟಣ ನೋಡಾ!


ಕೆಲವರು ಪರಮಸತ್ಯವನ್ನು ಕಂಡೆವು ಎನ್ನುತ್ತಾರೆ. ಕೆಲವರು ನಾವು

ಕಂಡಿಲ್ಲವೆನ್ನುತ್ತಾರೆ. ಹಗಲು ತಾರಾಮಂಡಲ ಕಾಣದು. ರಾತ್ರಿ ಸೂರ್ಯಮಂಡಲ

ಕಾಣದು. ಹಾಗೆ ಸತ್ಯವು ಕಾಣಲು ಅಥವಾ ಕಾಣದೆ ಇರಲು ಅದೇನು ತಾರಾಮಂಡಲವೇ? ಸೂರ್ಯಮಂಡಲವೇ? ಪರಮಸತ್ಯಸ್ವರೂಪನಾದ ಗುಹೇಶ್ವರ

ನಿರುವುದು ಚಂದ್ರಗಿರಿಯ ಪಟ್ಟಣದಲ್ಲಿ ಎಂಬುವುದು ಈ ವಚನದ ಸಾಮಾನ್ಯಾರ್ಥ,

ಲೌಕಿಕ ಭಾಷೆಯಲ್ಲ.


ಯೋಗದ ಭಾಷೆಯಲ್ಲಿ ಹೇಳುವುದಾದರೆ ತಾರಾಮಂಡಲ, ಸೂರ್ಯಮಂಡಲ ಎಂಬ ಪದಗಳು ತಾರಕಯೋಗದಲ್ಲಿ ಬರುತ್ತವೆ. ತಾರಕವೆಂದರೆ ನಾದ-ಬಿಂದು-ಕಲೆಗಳ ಸಾಧನೆ. ಬರಿ ಬೆಳಕು, ಅದು ಕಲೆ. ಬೆಳಕು ಸಾಕಾರಗೊಂಡು ಜ್ಯೋತಿರೂಪ ತಾಳಿದರೆ ಅದು ಬಿಂದು. ಆ ಜ್ಯೋತಿ ಸ್ಪಂದಿಸಿದರೆ ಅದು

ನಾದ!


ಉದಾಹರಣೆಗೆ, ದೇಹ-ಮನ ಸ್ಥಿರಗೊಳಿಸಿ, ಪ್ರಾಣವಾಯುವಿನ ಗತಿ ನಿಯಂತ್ರಿಸಿ ಕಣ್ಣು ಮುಚ್ಚಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಆಗ ಕೇವಲ ಭಾವಗತ ಪ್ರಕಾಶ ಕಂಡರೆ ಅದು ಕಲಾದರ್ಶನ! ಆ ಕಲೆಯೇ ಮೂರ್ತಿಗೊಂಡು

ಸೂರ್ಯಬಿಂಬವಾಗಿ ಕಂಡರೆ ಅದು ಬಿಂದುದರ್ಶನ. ಆ ಸೂರ್ಯನು ಸ್ಪಂದಿಸಿದಂತೆ ಗೋಚರಿಸಿದರೆ ಅದು ನಾದದರ್ಶನ (ಶ್ರವಣ). ಕಲಾ-ಬಿಂದು-ನಾದ; ನಾದ-ಬಿಂದು-ಕಲಾ ಇದು ತಾರಕಯೋಗದ ಅವರೋಹಣ, ಆರೋಹಣ ಕ್ರಮ!


ಈ ತಾರಕಯೋಗದ ಸಾಧಕರು ನಾದ- ಬಿಂದು-ಕಲೆಗಳನ್ನು ಕಂಡು ಪರಮ

ಸತ್ಯವನ್ನೇ ಕಂಡೆವು ಎಂದು ಭಾವಿಸುತ್ತಾರೆ. ಅನುಭಾವಿಗಳ ದೃಷ್ಟಿಯಲ್ಲಿ ಅದು

ಸರಿಯಲ್ಲ. ಯಾಕೆಂದರೆ ಅಂತಿಮ ಸತ್ಯವು ನಾದ ಬಿಂದು ಕಲೆಗಳಿಗೂ ಅತೀತವಾಗಿದೆ. ಹಾಗಾದರೆ ಸತ್ಯಸದನವೆಲ್ಲಿದೆ? ಅದಕ್ಕೆ ಉತ್ತರ ಈ ವಚನದ ಕೊನೆಯ ಸಾಲಿನಲ್ಲಿದೆ: ಗುಹೇಶ್ವರನಿಪ್ಪುದು ಚಂದ್ರಗಿರಿಯ ಪಟ್ಟಣದಲ್ಲಿ.

Image Description

Post a Comment

0 Comments