*ನಿಮ್ಮ ಗಣಪ*


ನಡುರಾತ್ರಿ ರಸ್ತೆಯಲ್ಲಿ

ಬಗೆ ಬಗೆಯ ಅವತಾರದಲ್ಲಿ

ಪ್ಲಾಸ್ಟಿಕ್ ಕವರ್ರುಗಳ ಹೊದಿಕೆಯಲ್ಲಿ

ನಾಳೆಯ ಬೆಳಕಿಗಾಗಿ ಕಾಯುತ ಕುಳಿತಿರುವೆ


ನನಗೂ ಕೂಡ ಬೆಲೆ ಬೇರೆ ಬೇರೆಯಂತೆ

ಉದ್ದ ಅಗಲ ಎತ್ತರ ದಪ್ಪಗಳಿಗೆ ತಕ್ಕಂತೆ

ಅಳೆದು ಮಾಪನ ಮಾಡಿ ಮಾರುವರಂತೆ

ದೇವರೂ ಇಲ್ಲಿ ಮಾರಾಟಕ್ಕಿವೆಯಂತೆ


ಬೆಳಗಾದರೆ ಕೊಂಡೊಯ್ಯುವರು

ಸಾಲು ಸರತಿಯಲ್ಲಿ ನಿಂತು ಜನ

ಅವರವ ಹೆಸರಲ್ಲಿ  ಬುಕ್ಕಾಗಿರುವ ನನ್ನನ್ನ

ಜೈಕಾರದಿ ಮಾಡುವರು ನನ್ನ ಗುಣಗಾನ


ಟ್ಯಾಕ್ಟರ ಲಾರಿ ಮೇಲೇ ನನ್ನ ಮೆರವಣಿಗೆ

ಡಿಜೆ ಹಾಡುಗಳು ನನ್ನ ಮುಂದೆ ಮುಂದೆ

ನಾನು ಎಲ್ಲರಿಗಿಂತ ಬಲು ಹಿಂದೆ

ಪಟಾಕಿ ಸದ್ದಲಿ ಪುಟಿದೇಳುತ ಮತ್ತೆ ಬಂದೆ


ಇದೇನು ಭಕ್ತಿಯೋ ಇಲ್ಲಾ ಅವರ ಶೋಕಿಯೊ

ಕರೆವರು ನನ್ನ ಕರವಿಡಿದು ಕಾಯಲು

ಕರುಣಿಸಿ ಬರುವೆನು ಭಕ್ತರು ಕೂಗಲು

ಅವರ ಸಂಭ್ರಮದೊಂದಿಗೆ ಸಂಭ್ರಮಿಸಲು


ಪಕಪಕ ಹೊಳೆಯುವ ಲೈಟಿನ ಸರ

ಮಿಣಮಿಣ ಮಿಂಚುವ ಮುತ್ತಿನ ಹಾರ

ಕಣ್ಮನ ಸೆಳೆಯುವ ಮಂಟಪ ಅಲಂಕಾರ

ಮರೆಯದೆ ಕೊರಳಿಗೆ ಹಾಕುವರು ಜನಿವಾರ


ಕಡಬು ಮೋದಕ ನೈವೇದ್ಯ ನನಗೆ

ಅದನ್ನು ತಿಂದ ಮಕ್ಕಳ ಮುಖದಲ್ಲಿ ನಗೆ

ಇಟ್ಟುಕೊಂಡಷ್ಟು ದಿನ ಇರುವೆನು ಹೀಗೆ

ಕಳಿಸಿಕೊಟ್ಟಾಗ ಹೊರಡುವೆನು ನೀರಿಗೆ


ಪ್ಲಾಸ್ಟರ್ ಆಫ ಪ್ಯಾರಿಸನಿಂದ 

ಮಾಡಿದ ಗಣಪನಾಗಲೊಲ್ಲೆ

ಮಣ್ಣಿನ ಗಣಪನಾದರೆ  ನಿಮ್ಮ ಮನೆಯಲ್ಲೆ ಇರಬಲ್ಲೆ

ಹೂ ಕುಂಡದಲ್ಲಿ ಹೂವಾಗಿ ಅರಳ ಬಲ್ಲೆ



*ಪ್ರತಿಭಾ ಪಾಟೀಲ ಧಾರವಾಡ*



Image Description

Post a Comment

0 Comments