"ಮಹಾತ್ಮಾರ ನಾಮ ಸ್ಮರಣೆಯಲ್ಲಿ ಭವ ಬಂಧನದಿಂದ ಮುಕ್ತಗೊಳಿಸುವ ದಿವ್ಯ ಶಕ್ತಿ ಅಡಗಿದೆ "

 *ಮಹಾತ್ಮರ ನಾಮ ಸ್ಮರಣೆಯಲ್ಲಿ ಭವ ಬಂಧನದಿಂದ ಮುಕ್ತಗೊಳಿಸುವ ದಿವ್ಯ ಶಕ್ತಿ ಅಡಗಿದೆ:* 

*ಶ್ರೀ ನಾಗಲಿಂಗ ಶ್ರೀಗಳು*



*ರಾಯಬಾಗ:* ಪುಣ್ಯ ಪುರುಷರ, ಸಂತ ಮಹಾತ್ಮರ, ಪ್ರಾತಃಸ್ಮರಣೀಯ ಸದ್ಗುರುಗಳ ನಾಮ ಸ್ಮರಣೆಯನ್ನು ತ್ರಿಕರಣಪೂರ್ವಕವಾಗಿ ಮಾಡಿದರೆ ಮುಮುಕ್ಷುಗಳು  ಭವ ಬಂಧನದಿಂದ ಮುಕ್ತರಾಗಲು ಸಾದ್ಯವಿದೆ. ಅಂತಹ ದಿವ್ಯ ಶಕ್ತಿ ನಾಮಸ್ಮರಣೆಯಲ್ಲಿದೆ  ಎಂದು  ಕಾಡಾಪುರದ  ಶ್ರೀ ಸಿದ್ಧಾರೂಢ ಜ್ಞಾನಾಶ್ರಮದ ಪರಮ  ಪೂಜ್ಯ ಶ್ರೀ ರಾಜಯೋಗಿ ನಾಗಲಿಂಗ ಮಹಾಸ್ವಾಮೀಜಿಯವರು ನುಡಿದರು.  


ಅವರು ಸಮೀಪದ ಉಗಾರ ಪಟ್ಟಣದ ಶರಣ ಶ್ರೀ ಗಂಗಾಧರ ಅಂಬಿ ಅವರ ಮಹಾಮನೆಯ ಆವರಣದಲ್ಲಿ ಇತ್ತೀಚೆಗೆ ಶನಿವಾರ ದಿನಾಂಕ 23 ರಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಅದ್ವೈತ ಸಾರ್ವಭೌಮ ಚಕ್ರವರ್ತಿ ಸದ್ಗುರು ಶ್ರೀ ಸಿದ್ಧಾರೂಢರ ಕಥಾಮೃತ ಪಠಣದ ಮುಕ್ತಾಯ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು. ಶ್ರೀ ಸಿದ್ದಾರೂಢರ ಕಥಾಮೃತ ಪಠಣದಿಂದ  ತನಗೂ ಹಾಗೂ ಜನಕ್ಕೂ ಮಂಗಲವಾಗಬೇಕು. ನಮ್ಮನ್ನು ಅಗಲಿದ ಅದೆಷ್ಟೋ ಆತ್ಮಗಳು ಮುಕ್ತರಾಗಿರುವುದಿಲ್ಲ. ಅವು ಈ  ಭೂಲೋಕಕ್ಕೆ ಬಂದು ಶ್ರವಣ ಮನನ ಮಾಡಿದವರ ಮನೆಯ ಆಚೆ ಈಚೆ ನಿಂತುಕೊಂಡು ಕೇಳಿ ಮುಕ್ತರಾಗಿ ಹೋಗುತ್ತವೆ. ನಾವು ಮರಣರಾದಾಗ  ನಮ್ಮೊಂದಿಗೆ ಗಳಿಸಿದ ಹಣ ಬರುವುದಿಲ್ಲ. ಪುಣ್ಯ ಮತ್ತು ಪಾಪ ಎರಡೇ  ಬಂದಿರುತ್ತವೆ. ಪುಣ್ಯ ಸ್ವರ್ಗಕ್ಕೆ ಕಳುಹಿಸಿದರೆ ಪಾಪ ನರಕಕ್ಕೆ ತಳ್ಳುತ್ತದೆ ಎಂದು ನುಡಿದರು. ಭಗವಂತನ ದಿವ್ಯ ಕಾರುಣ್ಯವಾಗಬೇಕಾದರೆ ನಮ್ಮ ಮನವನ್ನೇ ಅವನಿಗೆ ಆರತಿಯನ್ನಾಗಿ ಮಾಡಿ ಮನದ ಬಯಕೆಗಳನ್ನು ಅಡಗಿಸಿ ವಾಣಿಯನ್ನೇ ಗಂಗಾಜಲವನ್ನಾಗಿ ಸಮರ್ಪಿಸಿದರೆ ಮಾತ್ರ  ಮನೆಯಲ್ಲಿ ಭಗವಂತ ತುಂಬಿಕೊಳ್ಳುತ್ತಾನೆ. ಪವಿತ್ರ ಶ್ರಾವಣ ಮಾಸದಲ್ಲಿ ಪೂಜ್ಯರ ಕಥಾಮೃತವನ್ನು ಪಠಣ ಮಾಡಿದ ಶ್ರೀ ಸಿದ್ಧಾರೂಢರ ಪರಮ ಭಕ್ತರು,ಸಂತಪ್ರೇಮಿ ಶ್ರೀ ಗಂಗಾಧರ ಅಂಬಿ ಅವರ ಮನೆತನಕ್ಕೆ ಖಂಡಿತಾ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ಮಾರ್ಮಿಕವಾಗಿ ನುಡಿದರು. 

ಇದಕ್ಕೂ ಮೊದಲು ಸ್ಥಳೀಯ ಶ್ರೀ ಸಿದ್ದಾರೂಢ ಭಜನಾ ಮಂಡಳಿಯ ಸದ್ಭಕ್ತರು ಶ್ರೀ ಸಿದ್ದಾರೂಢರ  ನಾಮಸ್ಮರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ಪೂಜ್ಯರನ್ನು ಶರಣ  ಶ್ರೀ ಗಂಗಾಧರ ಅಂಬಿ ಸತ್ಕರಿಸಿದರು.

ಸುರೇಶ ಥಬಾಬ,ಗೋವಿಂದ ಕರಜಿಗಿ, ಮಲ್ಲಪ್ಪ ಮಗದುಮ್, ರಾಜು ಥಬಾಬ, ಕಲ್ಲಪ್ಪ ಮಾದರ,ಸುರೇಶ ಪಾಟೀಲ, ಹನುಮಂತ ಅಂಬಿ ಉಪಸ್ಥಿತರಿದ್ದರು. ಗೀರೀಶ ಇಟ್ನಾಳ ಸ್ವಾಗತಿಸಿದರು. ವಿದ್ಯಾನಂದ ಬಾನಿ ನಿರೂಪಿಸಿದರು. ಶ್ರೀಕಾಂತ ಕೋಳಿ ಶರಣು ಸಮರ್ಪಿಸಿದರು.


*ವರದಿ:ಡಾ.ಜಯವೀರ ಎ.ಕೆ.*

       *ಖೇಮಲಾಪುರ*


Image Description

Post a Comment

0 Comments