“ವಿಶೇಷ ಸೂಚನೆ -: ಕೆಲವೊಂದು ಕವಿಗೋಷ್ಠಿಗಳಿಗಷ್ಟೇ ಈ ಕವಿತೆ ಅನ್ವಯವಾಗುವುದಿಲ್ಲ”
“ಇದು ಇಂದು ನಡೆಯುವ ಬಹುಪಾಲು ಕವಿಗೋಷ್ಠಿಗಳ ಕಥೆ-ವ್ಯಥೆಗಳ ಅನಾವರಣದ ಕವಿತೆ. ಅಂತಹ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಕವಿಗಳ ಪಾಡು-ಪರದಾಟಗಳ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಸರಕಾರಿ ಪ್ರಾಯೋಜಿತ ಉತ್ಸವಗಳ ಸಂಬಂಧ ನಡೆವ ಕವಿಗೋಷ್ಠಿಯಿರಬಹುದು, ಪರಿಷತ್ತಿನ ಸಮ್ಮೇಳನಗಳ ಕವಿಮೇಳವಿರಬಹುದು, ಅನೇಕ ಸಂಘ-ಸಂಸ್ಥೆಗಳ ಕಾವ್ಯಕೂಟಗಳಿರಬಹುದು. ಬಹಳಷ್ಟು ಕಡೆ ಇದೇ ದೃಶ್ಯ, ಅದೇ ಧಾರ್ಷ್ಟ್ಯ, ಬಡಪಾಯಿ ಕವಿಗಳ ಕಷ್ಟ ಕಾರ್ಪಣ್ಯ. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ನಿವೇದನೆಯಲ್ಲ ಆಕ್ರಂದನೆ.!
ಕವನದ ಪೀಠಿಕೆ ಹೇಳೋ ಹಾಂಗಿಲ್ಲ
ಕವಿಪರಿಚಯ ಕೂಡ ಮಾಡೋಂಗಿಲ್ಲ
ನಾವೇ ನಮ್ಮ ಹೆಸರೂ ಹೇಳೋಂಗಿಲ್ಲ
ಹೀಂಗಾದ್ರೆ ಕವಿತೆ ಹೆಂಗ್ರೋ ಓದೋದು?
ಎರಡೆರಡು ಸಲ ಸಾಲು ಓದೋಂಗಿಲ್ಲ
ಮಧ್ಯೆ ಒಂದು ಪದನೂ ಆಡೋಂಗಿಲ್ಲ
ಎರಡು ನಿಮಿಶ ಸಮಯ ಮೀರೋಂಗಿಲ್ಲ
ಹೀಂಗಾದ್ರೆ ಬರೆದಿದ್ದೆಂಗ್ರೋ ಮುಟ್ಟಿಸೋದು?
ವೇದಿಕೆಲಿರೋರು ಲಕ್ಷ್ಯ ಕೊಡೋಂಗಿಲ್ಲ
ಕೆಳಗೆ ಕೋತೋರು ಮಾತು ನಿಲ್ಸೋಂಗಿಲ್ಲ
ಕನಿಷ್ಟ ಕವಿಗಳೂ ಕವನನ ಆಲಿಸೋಂಗಿಲ್ಲ
ಹೀಂಗಾದ್ರೆ ಯಾರಿಗಾಗ್ರೋ ವಾಚಿಸೋದು?
ತುಟ್ಟಿಭತ್ಯೆ ಪ್ರಯಾಣಭತ್ಯೆ ಕೇಳೋಂಗಿಲ್ಲ
ವಸತಿ ಭತ್ಯೆ ಅಂತೂ ಕೊಡೋಂಗಿಲ್ಲ
ತಿನ್ನೊದಕ್ಕೆ ತಂಗೋದಕ್ಕೆ ಇರೋಂಗಿಲ್ಲ
ಹೀಂಗಾದ್ರೆ ಕವಿಗೋಷ್ಠಿಗೆಂಗೋ ಬರೋದು?
ಪೇಟ ಶಾಲು ಹಾರ ಏನೂ ಹಾಕೋಂಗಿಲ್ಲ
ಎರಡು ಹಣ್ಣು ಹೂವು ಕೂಡ ಇಡೋಂಗಿಲ್ಲ
ಸಣ್ಣದೊಂದು ಸನ್ಮಾನ ಸತ್ಕಾರ ಮಾಡೋಂಗಿಲ್ಲ
ಹೀಂಗಾದ್ರೆ ಕವಿಗಳ್ನ ಯಾಕ್ರೋ ಕರೆಯೋದು.?
ಗೌರವಧನ, ಸಂಭಾವನೆಗಳು ಇಲ್ಲವೇ ಇಲ್ಲ
ಒಂದು ಸ್ಮರಣಿಕೆ ಕಾಣಿಕೆ ಕೂಡ ನೀಡೋಂಗಿಲ್ಲ
ಕೇವಲ ಕೈಗೊಂದು ಪ್ರಮಾಣಪತ್ರ ಇಡ್ತೀರಲ್ಲ
ಇಂಥ ಕವಿಗೋಷ್ಠಿನಾದ್ರೂ ಏಕ್ರೋ ಮಾಡೋದು?
ಆಯೋಜಕರ ಅನಾದರ ಅಲಕ್ಷ್ಯ ನಿಲ್ಲೋದಿಲ್ಲ
ಬಡಪಾಯಿ ಕವಿಗಳ ಪರಿಪಾಟಲು ತೀರೋಂಗಿಲ್ಲ
ಈ ವ್ಯವಸ್ಥೆ ಅವಸ್ಥೆ ದೃಶ್ಯ ಭಾಷ್ಯ ಬದಲಾಗೋಂಗಿಲ್ಲ
ಇದಕ್ಕೆಲ್ಲ ಪರಿಹಾರನಾದ್ರು ಎಂದಿಗಪ್ಪಾ ಸಿಗೋದು.?
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments