ಚಿತ್ರಕವನ* *ಶೀರ್ಷಿಕೆ: ವಿಸ್ಮಯ ನೋಟ*

 *ಚಿತ್ರಕವನ*


*ಶೀರ್ಷಿಕೆ: ವಿಸ್ಮಯ ನೋಟ*



ಆಗಸದಂಗಳ ಗ್ರಹಗಳು ಹೊರಟಿವೆ

ಒಂದೇ ರೇಖೆಯ ಮೆರೆವಣಿಗೆ|

ಯೋಗವ ಪಡೆದಿಹ ಜನತೆಯು ನೋಡಲು

ಸಿಗುವುದು ಬೆಳಗಿನ ಶುಭಘಳಿಗೆ||


ನಸುಕಿನ ಸಮಯದಿ ಪೂರ್ವದ ದಿಕ್ಕಲಿ

ಸುಂದರ ದೃಶ್ಯವು ಕಾಣಲಿದೆ|

ಹೊಸಹೊಸದನುಭವ ಕೌತುಕ ತರುವುದು

ಚಿತ್ತಕೆ ಸಂತಸ ಸಿಕ್ಕಲಿದೆ||


ವೀಕ್ಷಣೆ ಮಾಡಲಪೂರ್ವದ ದೃಶ್ಯವು

ಬರಿದೇ ಕಣ್ಣಿಗೆ ಕಾಣುವುದು|

ಸಾಕ್ಷಿಯು ಆಗಿರಿ ವಿಸ್ಮಯ ನೋಟಕೆ

ಗಗನ ಮನೋಹರವಾಗಿಹುದು||


ಮಂಗಳ ಬುಧ ಗುರು ಬೆಳ್ಳಿಯ ಶುಕ್ರವು

ಹೊಳೆವುದು ಗಗನದ ಬಯಲಲ್ಲಿ|

ತಿಂಗಳ ಮಾಮನು ಪಕ್ಕದಲಿರುವನು

ಕಾಣುವ ಶನಿಯೂ ಜೊತೆಯಲ್ಲಿ||


ಗ್ರಹವು ಯುರೇನಸ್ ಸಂಗಡ ನೆಪ್ಚೂನ್

ಬೆಳಕಿನ ಚುಕ್ಕಿಯೊಲಿರುತಿಹವು|

ಬಹಳವೆ ಚೆಂದಕೆ ಕಾಣುತ ಸೆಳೆವುವು

ಮನಸಿಗೆ ಹಿತವನು ನೀಡುವುವು||


*ಅಶ್ವತ್ಥನಾರಾಯಣ*

    *ಮೈಸೂರು*

Image Description

Post a Comment

0 Comments