ಸಾಕ್ಷಾತ್ಕಾರ.!

 "ಇದು ಬಾಳಿನ ಮರ್ಮ-ಧರ್ಮಗಳ ಅನಾವರಣದ ಬದುಕಿನ ಗೀತೆ. ಬಾಳಿನ ನಿತ್ಯ-ಸತ್ಯಗಳ ರಿಂಗಣಗಳ ಬೆಳಕಿನ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಅಂತಃಸತ್ವಗಳ ಝೇಂಕಾರವಿದೆ. ಅರಿತು ಅರ್ಥೈಸಿದಷ್ಟೂ ಬದುಕು-ಬೆಳಕಿನ ನಿಜತತ್ವಗಳ ಸಾಕ್ಷಾತ್ಕಾರವಿದೆ. ಜೀವ ನಮ್ಮದೆಂದ ಮೇಲೆ ನಮ್ಮ ಜೀವನಮಾಧುರ್ಯಕ್ಕೂ ನಾವೇ ಪ್ರೇರಣ. ಬದುಕು ನಮ್ಮದೆಂದ ಮೇಲೆ ಬೆಳಕಿನ ಬಾಳಸೌಂದರ್ಯಕ್ಕೂ ನಾವೇ ಕಾರಣ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.



ಸಾಕ್ಷಾತ್ಕಾರ.!



ಕಂಡ ಕಂಡದ್ದನೆಲ್ಲ

ಹಳಿಯುವುದರಲ್ಲಿಲ್ಲ..

ಹೊಗಳುವುದರಲ್ಲಿದೆ

ಬಾಳ ಸಂಭ್ರಮ.!


ಎಲ್ಲಕು ಎಲ್ಲೆಂದರಲ್ಲಿ

ಮುನಿಯುವುದರಲ್ಲಿಲ್ಲ.. 

ಮೆಚ್ಚುವುದರಲ್ಲಿದೆ 

ಬದುಕಿನ ಪ್ರೇಮ.!


ಯಾರದೋ ಮಧು 

ಮಧುರ ನುಡಿಗಳಿಗೆ.!

ಸೋಲುವುದರಲ್ಲಿದೆ

ಬಾಳ ಖುಷಿಸ್ಪರ್ಶ.! 


ಇನ್ಯಾರದೋ ಸಿಹಿ

ಪ್ರೀತಿ ಗಾರುಡಿಗೆ 

ಶರಣಾಗುವುದರಲ್ಲಿದೆ 

ಬದುಕಿನ ಹರ್ಷ.!


ನಮ್ಮೆದೆಯ ಒಲವಿಗೆ

ನಮ್ಮವರ ಗೆಲುವಿಗೆ

ಪರವಶವಾಗುವುದರಲ್ಲಿದೆ

ಬಾಳಿನಾ ಸಂತಸ.!!


ಅನುದಿನದ ಸವಾಲಿಗೆ

ಹೆದರದೆ ಬೆದರದೆ 

ನಗುತ ಸಾಗುವುದರಲ್ಲಿದೆ

ಬದುಕಿನ ಚೆಲುವು.!!


ಅನುಕ್ಷಣದ ಸಮಸ್ಯೆಗೆ

ಎದೆಯೊಡ್ಡಿ ಎದುರಿಸಿ

ಹೋರಾಡುವುದರಲ್ಲಿದೆ 

ಜೀವನದ ಗೆಲುವು.!


ಕಣಕಣವ ಆಸ್ವಾಧಿಸಿ

ಕ್ಷಣಕ್ಷಣವು ಆನಂದಿಸಿ

ಸದಾ ನಲಿಯುವುದರಲ್ಲಿದೆ

ಜೀವಸುಖ ಸಾಕಾರ.!


ಕಷ್ಟ ನೋವುಗಳ ನುಂಗಿ

ನಿತ್ಯ ನಲಿವು ಹಂಚುತ 

ನಿಂತು ಅರಳುವುದರಲ್ಲಿದೆ

ಜೀವಜೀವನ ಸಡಗರ.!


ಬಂದದ್ದೆಲ್ಲ ಸ್ವೀಕರಿಸಿ

ಅಡಿಗಡಿಗು ಝೇಂಕರಿಸಿ

ಬಾಳ ಆರಾಧಿಸುವುದರಲ್ಲಿದೆ

ಬದುಕು-ಬೆಳಕಿನ ಸಾಕ್ಷಾತ್ಕಾರ.!


ಎ.ಎನ್.ರಮೇಶ್. ಗುಬ್ಬಿ

Image Description

Post a Comment

0 Comments