ಭ್ರಮಿಕ.

 "ಇದು ನಮ್ಮ ನಿಮ್ಮದೇ ಮೂರ್ಖ ಮನಸ್ಥಿತಿಯ ಅನಾವರಣದ ಕವಿತೆ. ನಶ್ವರ ಬದುಕಿನ ಶಾಶ್ವತ ಭ್ರಮೆ ಭ್ರಾಂತುಗಳ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನ ಸಾರವಿದೆ. ಅರಿತಷ್ಟೂ ಬದುಕು ಬೆಳಕಿನ ವಿಸ್ತಾರವಿದೆ. ಅಲ್ಪಮತಿ, ಅಲ್ಪಜ್ಞಾನ, ಅಹಮಿಕೆ, ಆತ್ಮರತಿ, ಅಂಧಕಾರದಲ್ಲೇ ಮೆರೆವ ನಾವು, ಸತ್ಯ ಬೆಳಕಿನ ಸಾಕ್ಷಾತ್ಕಾರವಾಗದೆ, ಭ್ರಮೆ ಭ್ರಾಂತಿಗಳ ಮಿಥ್ಯ ಬೆಳಕಲ್ಲೇ ಬದುಕು ಕಳೆದು ಬಿಡುತ್ತೇವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 


ಭ್ರಮಿಕ.


!


ಕುಸಿದು ಹೋಗುವ ಕೆಳಗಿನ

ಪಾಯ ನಿನದಲ್ಲ

ಕಳಚಿ ಬೀಳುವ ಮೇಲಿನ

ಸೂರು ನಿನದಲ್ಲ.!


ನಡುವಿನ ಅತಂತ್ರವಾದ

ನಾಲ್ಕು ಗೋಡೆಯಷ್ಟೆ ನಿನದು

ನಾನೇ ಸ್ಥಿರವೆಂಬ ಭ್ರಮೆಯೇಕೋ?


ಕಳೆದ ನಿನ್ನೆಗಳಿಗೆ ನಿನ್ನಯ

ನೆನಪಿಲ್ಲ ನಿನ್ನ ಗುಂಗಿಲ್ಲ

ಬರುವ ನಾಳೆಗಳಿಗೆ ನಿನ್ನಯ

ನೆರವಿಲ್ಲ ನಿನ್ನ ಹಂಗಿಲ್ಲ.!


ನಿನ್ನೆದುರ ಕ್ಷಣಿಕ ಈ ಕ್ಷಣದ 

ಹೊತ್ತಷ್ಟೆ ತುತ್ತಷ್ಟೆ ನಿನದು

ನಾನೆ ಚಿರವೆಂಬ ಭ್ರಾಂತಿಯೇಕೋ?


ತೂರಿ ಬರುವ ಹೊರಗಿನ

ಪ್ರಾಣ ವಾಯು ನಿನದಲ್ಲ

ಉಸಿರ ಹೀರುವ ಒಳಗಿನ

ಜೀವ ವಾರಿ ನಿನದಲ್ಲ.!


ಕೊಳೆತು ನಾರುವ ನಶ್ವರ

ಕನಿಷ್ಟ ಕಾಯವಷ್ಟೆ ನಿನದು

ನಾನೇ ಅಮರನೆಂಬ ಭ್ರಮೆಯೇಕೋ?


ಹೊರಗಣ ಅನನ್ಯ ಸೃಷ್ಟಿಯ

ಅರಿವು ಅಂದಾಜು ನಿನಗಿಲ್ಲ

ಒಳಗಣ ಅನೂಹ್ಯ ದೃಷ್ಟಿಯ

ಪರಿವು ಪ್ರಜ್ಞೆಯೂ ನಿನಗಿಲ್ಲ.!


ಅಜ್ಝಾನ ಅನುಮಾನ ಬಿಗುಮಾನ

ಅಲ್ಪತನಗಳಷ್ಟೇ ನಿನದು

ನಾನೇ ಸರ್ವಜ್ಞನೆಂಬ ಭ್ರಾಂತಿಯೇಕೋ?


ಬರೆದ ಅಕ್ಷರಗಳು ನಿನದಲ್ಲ

ಮೊರೆದ ಅರ್ಥಗಳು ನಿನದಲ್ಲ

ಗೀಚಿದ ಕರಗಳಷ್ಟೇ ನಿನದು

ನಾನೆ ಸಕಲವೆಂಬ ಸಿನಿಕತನವೇಕೋ.?


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments