*ರತನ್ ಟಾಟಾ ಎಂಬ ಭಾರತ ಕಂಡ ಅಮೂಲ್ಯ ರತ್ನರಿಗೆ ಅಕ್ಷರ ನಮನ*
ಹೇಗೆ ನಂಬಲಿ ಟಾಟಾ ನೀವು ಹೊರಟು ಹೋದಿರಿ ಎಂದು.
ನಿತ್ಯ ಬೆಳಗಾದರೆ ಗೊತ್ತಿಲ್ಲದೆ ಕುಡಿಯುವ ಟೀ ಪೌಡರಿನಿಂದ ಹಿಡಿದು ಅನ್ನಕ್ಕೆ ಬೆರೆಸುವ ಉಪ್ಪಿನೊಳಗೂ ನಿಮ್ಮ ಜೀವಂತಿಕೆ ಎದ್ದು ಕಾಣಿಸುತ್ತಿರುವಾಗ.
ಹೇಗೆ ನಂಬಲಿ ಟಾಟಾ ನೀವು ಹೊರಟು ಹೋದಿರಿ ಎಂದು ಟಾಟಾ ಸ್ಟೀಲು ಹಾಕಿ ನಮ್ಮ ಅಪ್ಪ ಕಟ್ಟಿಸಿದ್ದ ಮನೆ ಇನ್ನೂ ಗಟ್ಟಿ ಮುಟ್ಟಾಗಿರುವಾಗ.
ಹೇಗೆ ನಂಬಲಿ ಟಾಟಾ ನೀವು ಹೊರಟು ಹೋದಿರಿ ಎಂದು ಅದೆಷ್ಟೋ ಜನರ ಬದುಕ ಬುತ್ತಿ ನೀವು ಕೊಟ್ಟ ಉದ್ಯೋಗ ದಿಂದ ತುತ್ತುಗಳು ಖಾಲಿಯಾಗದೆ ಇರುವಾಗ.
ಹೇಗೆ ನಂಬಲಿ ಟಾಟಾ ನೀವು ಹೊರಟು ಹೋದಿರಿ ಎಂದು.
ಕಾರು ಖರೀದಿಸುವ ಅದೆಷ್ಟೋ ಬಡಕುಟುಂಬಗಳ ಕನಸು ನನಸಾಗಿರುವಾಗ.
ಹೇಗೆ ನಂಬಲಿ ಟಾಟಾ ನೀವು ಹೊರಟು ಹೋದಿರಿ ಎಂದು.
ಬಸ್ಸು ಬಾರದ ಹಳ್ಳಿಯ ಕಚ್ಚಾ ರಸ್ತೆಗಳು ಈಗೀಗ ಟಾರು ರಸ್ತೆಗಳಾಗಿ ಬದಲಾಗಿ ಮೋಟಾರು ಕಾರುಗಳು ಚಲಿಸುತ್ತ ಇರುವಾಗ...
ದೇಶ ದೇಶಗಳ ಬೆಸೆದು ಸಂಭಂಧಗಳ ಹೊಸೆಯುತ್ತ ಲಕ್ಷ ಕೋಟಿಗಳ ಲೆಕ್ಕವಿಡದೆ ದಾನ ಧರ್ಮಗಳ ಮಾಡಿ ಸರಳ ಬದುಕು ನಡೆಸಿದ ನಿಮ್ಮ ಕಥೆಗಳು ಈಗಲೂ ನಮಗೆ ಕೇಳಲು ಸಿಗುತ್ತಿರುವಾಗ...
ಹೇಗೆ ನಂಬಲಿ ಟಾಟಾ ನೀವು ಇನ್ನಿಲ್ಲವಾದಿರಿ ಎಂದು ಕೋವಿಡ್ ಸಮಯದಲ್ಲಿ ಆಕ್ಸಿಜನ್ ಪೂರೈಸಿ ಲಕ್ಷಾಂತರ ಜೀವಗಳ ನೀವು ಉಳಿಸಿ ಹೋಗಿರುವಾಗ ಅವರಿನ್ನೂ ಉಸಿರಾಡುತ್ತ ಇರುವಾಗ.
ಹೇಗೆ ನಂಬಲಿ ಟಾಟಾ ನೀವು ಬಯಸಿದ ಪ್ರೀತಿಯ ಹುಡುಗಿ ನಿಮಗೆ ಸಿಗದೆ ಇರುವಾಗ ನಿಮ್ಮ ಹೃದಯದಲ್ಲಿ ಅಪ್ಪ ಅಮ್ಮನ ವಿಚ್ಚೇದನದ ನೋವು ಮಡುಗಟ್ಟಿರುವಾಗ ದುಡುಕದೆ ದೇಶ ಕಟ್ಟುವ ಕೆಲಸಕ್ಕೆ ನೀವೊಬ್ಬ ಸಂತನಂತೆ ಶಾಂತವಾಗಿ ಕೈ ಜೋಡಿಸಿರುವಾಗ.
ಹೇಗೆ ನಂಬಲಿ ಟಾಟಾ ನೀವು ಇನ್ನಿಲ್ಲವೆಂದು
ದ್ವೇಷ ಅಸೂಯೆಯ ಕಿಚ್ಚು ಹೊತ್ತಿಸಿ ನಮಗೆ ದೇಶವೇನು ಕೊಟ್ಟಿತು ಎಂದು ಕೇಳುವವರ ನಡುವೆ
ದೇಶ ಪ್ರೇಮದ ದೀಪ ಹೊತ್ತಿಸಿ ನೀವಿಗ ಕತ್ತಲೆಯ ಮೌನಕ್ಕೆ ಜಾರಿರುವಾಗ
ಹೇಗೆ ನಂಬಲಿ ಟಾಟಾ ಹೊಸತನಕ್ಕೆ ತುಡಿಯುತ್ತ ಮನುಷ್ಯತ್ವಕ್ಕೆ ಮಿಡಿಯುತ್ತ ಸೋತ ಪ್ರತಿ ಉದ್ಯಮಿಯ ಕನಸಿಗೂ ನೀವು ಬಂದು ಬೆನ್ನು ತಟ್ಟಿ ಸಂತೈಸುತ್ತ ಇರುವಾಗ.
ಹೇಗೆ ನಂಬಲಿ ಟಾಟಾ ನೀವು ಇನ್ನೂ ಕಾಣಿಸುವದಿಲ್ಲ ನಮಗೆಂದು ಇಂದು ಮುಂಜಾನೆಯೆ ನಮ್ಮ ಮಂಜಾದ ಕಣ್ಣುಗಳಲ್ಲಿ ನಿಮ್ಮ ಬಿಂಬವೇ ತುಂಬಿರುವಾಗ
ನೀವು ಇನ್ನಿಲ್ಲವಾದಿರಿ ಈ ನೆಲದ ಮಣ್ಣಲ್ಲಿ ಮಣ್ಣಾದಿರಿ ಎಂದು ಹೇಗೆ ನಂಬಲಿ ಟಾಟಾ ನಿಮ್ಮ ಪ್ರೇಯಸಿಯ ಹೃದಯದಲ್ಲಿ ಅಷ್ಟೇ ಅಲ್ಲ ಈ ದೇಶದ ಪ್ರತಿ ಪ್ರಜೆಯ ಹೃದಯದಲ್ಲೂ ನೀವು ಮಿಡಿಯುತ್ತ ಇರುವಾಗ....
*ದೀಪಕ ಶಿಂಧೇ*
*9482766018*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
1 Comments
ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ 💐💐💐
ReplyDelete