*ನೂರು ಗ್ರಾಂ ತೂಕ *

 ನೂರು ಗ್ರಾಂ ತೂಕ.




ಮಗನೆಂಬ ಎರಡಕ್ಷರದಿಂದ 

ಮಗಳೆಂಬ ಮೂರಕ್ಷರವಾದಾಗಲೇ

ಹೆಚ್ಚಾಗಿತ್ತು ನೂರು ಗ್ರಾಂ ತೂಕ.


ತನ್ನವರ ಉಳುವಿಗೆ

ತನ್ನತನ ಅಡವಿಟ್ಟು 

ಜೊತೆಯಾಗಿ ನಿಂತಾಗಲೆ

ಹೆಚ್ಚಾಗಾತ್ತು ನೂರು ಗ್ರಾಂ ತೂಕ .


ಕೀರ್ತಿ ಪತಾಕೆಯ ಸಾಧಕರ

ಕಾಲೆಳೆವ ಕುತಂತ್ರಿಗಳ

ವಿರುದ್ಧ ನಿಂತಾಗಲೆ

ಹೆಚ್ಚಾಗಿತ್ತು ನೂರು ಗ್ರಾಂ ತೂಕ .


ನಿತ್ಯ ಜೊತೆ ನಡೆದು

ನಡೆಯುವಾಗಲೇ ಎಡವಿಸಿದ

ಮೋಸದಾಟದ ವಂಚಕರಿಗೆ

ವರವಾಗಿತ್ತು ನೂರು ಗ್ರಾಂ ತೂಕ .


ಬಹುತೇಕ ತುಳಿವವರ ದೇಶದಿ

ಶಕುನಿಗಳಿಗೆ ವರವಾದದ್ದು

ನಿನಗೂ ನಮಗು ಮಾರಕವಾಯ್ತು

ಆ ನೂರು ಗ್ರಾಂ ತೂಕ.


ಕೋಟಿ ಭಾರತೀಯರ 

ಆಶಾ ಭಾವದ ಎದೆಗೆ

ವಿಷದ ಬಾಣವಾಗಿ ನೆಟ್ಟಿತ್ತು

ಆ ನೂರು ಗ್ರಾಂ ತೂಕ.


ನಮ್ಮ ಕಣ್ಣೀರ ಕೋಡಿ ಹರಿಸಿತು

ಸೋತರೂ ಹೃದಯ ಗೆಲ್ಲಿಸಿತು

ಚರಿತ್ರೆಗೆ ನಿನ್ನ ಸೇರಿಸಿತು

ಮಗಳೆ ನಿನ್ನ ಆ ನೂರು ಗ್ರಾಂ ತೂಕ.


        ಎಂ.ಕೆ.ಶೇಖ್ (ಮೌಕುಶೇ)

Image Description

Post a Comment

0 Comments