ಬಹುತ್ವ ಭಾರತಕ್ಕೆ ಅನುವಾದ ಸಾಹಿತ್ಯ ಬೇಕು : ಡಾ.ಜಾಜಿ ದೇವೇಂದ್ರಪ್ಪ
ಬೆಂಗಳೂರು: ಭಾರತ ದೇಶವು ಬಹುತ್ವದ ರಾಷ್ಟ್ರ ಇಲ್ಲಿನ ಸಂಸ್ಕೃತಿ ಆಚಾರ ವಿಚಾರ ಊಟ ಜಾತ್ಯತೀತತೆ ಶೋಷಣೆ ಜಮೀನ್ದಾರಿ ವ್ಯವಸ್ಥೆ ಇರುವ ಈ ಭಾರತಕ್ಕೆ ಅನುವಾದ ಸಾಹಿತ್ಯವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಕನ್ನಡ ಸಹ ಪ್ರಾಧ್ಯಾಪಕ ಹಾಗೂ ಅನುವಾದಕರಾದ ಡಾ. ಜಾಜಿ ದೇವೇಂದ್ರಪ್ಪ ಅವರು ಅಭಿಪ್ರಾಯಪಟ್ಟರು.
ಕ್ರಿಸ್ತು ಜಯಂತಿ ಕಾಲೇಜು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ ಕನ್ನಡ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ(ಎಫ್ ಡಿ ಟಿ) ಐದನೆ ದಿನದ 'ಭಾಷಾಂತರ ಮತ್ತು ಹೊಸ ತಲೆಮಾರು' ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಭಾರತವು ಬಹುತ್ವ ರಾಷ್ಟ್ರವಾದ ಕಾರಣ ದೇಶದ ಹಲವು ರಾಜ್ಯಗಳಲ್ಲಿ ನ ಸಾಹಿತ್ಯದ ವಿವಿಧ ಅನುಭವಗಳನ್ನು ಚಿಂತನೆಗಳನ್ನು ಕನ್ನಡ ಸಾಹಿತ್ಯಕ್ಕೆ ತರುವ ಮೂಲಕ ಹಾಗೂ ಕನ್ನಡದಿಂದ ಬೇರೆ ಬೇರೆ ಭಾಷೆಗಳಿಗೆ ನಮ್ಮ ಸಾಹಿತ್ಯವನ್ನು ಅನುವಾದಿಸುವುದರ ಮೂಲಕ ಬಹುತ್ವ ಭಾರತಕ್ಕೆ ಸಾಕ್ಷಿಯಾಗಬೇಕಾಗಿದೆ ಎಂದು ಹೊಸತಲೆಮಾರಿನ ಅನುವಾದಕರಿಗೆ ಕರೆ ನೀಡಿದರು.
ಈಗಾಗಲೇ ಪ್ರಾಚೀನ ಕನ್ನಡ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದವರೆಗೆ ಅಲ್ಲಲ್ಲಿ ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಮಹತ್ವದ ಕೃತಿಗಳು ಅನುವಾದ ಗೊಂಡಿವೆ. ಈ ಕಾರಣದಿಂದ ಕವಿರಾಜಮಾರ್ಗಕಾರ, ಪಂಪ ನಮಗೆ ಮುಖ್ಯರಾಗುತ್ತಾರೆ. ಜೊತೆಗೆ ರಾಮಾಯಣ ಮತ್ತು ಮಹಾಭಾರತಗಳು ಭಾರತದ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿವೆ ಎಂದು ತಿಳಿಸಿದರು.
ಯಾವುದೇ ಅನುವಾದಕನಿಗೆ ಮೂಲ ಭಾಷೆ ಸಾಹಿತ್ಯ ಸಂಸ್ಕೃತಿಯ ಅರಿವು, ಜೊತೆಗೆ ಎರಡು ಭಾಷೆಗಳ ಹಿಡಿತದ ಅಸ್ಮಿತೆ ಇರಬೇಕು ಆಗ ಮಾತ್ರ ಉತ್ತಮ ಅನುವಾದ ಸಾಹಿತ್ಯವು ಹೊರಬರಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಬ್ರಿಟಿಷ್ ಮಿಶನರಿಗಳು ಕರ್ನಾಟಕಕ್ಕೆ ಬಂದು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ ಮಾಡಲು ಬಹು ಪ್ರಾಮುಖ್ಯತೆ ನೀಡಿದರು. ಇವರು ನಂತರ ಕನ್ನಡ ನವೋದಯ ಪೂರ್ವ ಅನುವಾದದ ಸುಗ್ಗಿ ಕಾಲವಾಗಿತ್ತು ಎಂದು ತಿಳಿಸಿದರು.
ಮೈಸೂರು ಒಡೆಯರ ಕಾಲದಲ್ಲಿ ಷೇಕ್ಸ್ ಪಿಯರ್ ನ ಹಲವಾರು ನಾಟಕಗಳನ್ನು ಕನ್ನಡಕ್ಕೆ ಬಸಪ್ಪ ಶಾಸ್ತ್ರಿಗಳು ಅನುವಾದಿಸಿದರು. ಮರಾಠಿಯಿಂದ ಕನ್ನಡಕ್ಕೆ ಅಧಿಕ ನಾಟಕಗಳು ಕನ್ನಡಕ್ಕೆ ಬಂದಿವೆ. ಆಧುನಿಕ ಕಾಲದ ಸಾಹಿತ್ಯದಲ್ಲಿ ದಲಿತ ಲೋಕ, ಮಹಿಳಾಲೋಕ ಕಾರ್ಮಿಕ ಲೋಕದ ಮೇಲಿನ ಶೋಷಣೆಯ ವಿವಿಧ ಆಯಾಮಗಳನ್ನು ಆಯಾಯ ಭಾಷೆಯ ಸೃಜನಶೀಲ ಸಾಹಿತ್ಯ ಓದಿ ಅನುವಾದಿಸುವುದರ ಮೂಲಕ ನಿಜವಾದ ಶೋಷಣೆಯ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅನುವಾದಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಕನ್ನಡದ ಬಹುತೇಕ ಅನುವಾದಕರು ಕನ್ನಡ ಭಾಷೆ ಪ್ರಮುಖ ಸಾಹಿತ್ಯವನ್ನು ಬೇರೆ ಬೇರೆ ಭಾಷೆಗೆ ಅನುವಾದ ಮಾಡುವುದರ ಮೂಲಕ ನಮ್ಮ ಸಾಹಿತ್ಯವನ್ನು ಪರಿಚಯಿಸಬೇಕು ಎಂದು ಕರೆನೀಡಿದರು.
ಈ ಆನ್ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಿದ್ದರು. ಕ್ರಿಸ್ತು ಜಯಂತಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು ಹಾಗೂ ವಿವಿಧ ಕಾಲೇಜುಗಳ ಆಧ್ಯಾಪಕರು ಉಪನ್ಯಾಸದಲ್ಲಿ ಭಾಗವಹಿಸಿದ್ದರು. ಪ್ರೇಮಕುಮಾರ್ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು. ಕೊನೆಯಲ್ಲಿ ಸಂವಾದ ನಡೆಯಿತು.
ವರದಿ: ಡಾ.ಹೊಂಬಯ್ಯ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments