(ಪ್ರಜಾಪ್ರಭುತ್ವದ ನಿರ್ಮಾಪಕ, ಮಹಾ ಮಾನವತಾವಾದಿ, ಆಧುನಿಕ ಭಾರತ ನಿರ್ಮಾತೃ, ಮನಃಶಾಸ್ತ್ರವನ್ನು ಧಿಕ್ಕರಿಸಿ ಸಮ ಸಮತೆಯ ನವ ಇತಿಹಾಸ (ಬಾರತ ಸಂವಿಧಾನ) ಬರೆದ ಮಹಾನಾಯಕ, ಮಹಾಡ್ ಚೌಡರ ಕೆರೆ ಜಲ ಹೋರಾಟಗಾರ, ವ್ಯಕ್ತಿ ಗೌರವದ ಅರಿವಿನ ಮಹತ್ವ ಲೋಕದ ಜನತೆಗೆ ತಿಳಿಸಿದ ಮಹಾ ಚಿಂತಕ. ವಿಶ್ವ ಭೂಪಟದಲ್ಲಿ ಅಚ್ಚಳಿಯದ ವಿಶ್ವರತ್ನ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಂಸ್ಥಾಪಕ, ಜಾತಿ ಮತಾಂಧತೆಯ ದಾಸ್ಯ ಮೆಟ್ಟಿದ ಧೀಮಂತ ಚೇತನ, ತಮ್ಮ ಬುದ್ಧಿಶಕ್ತಿ ಮತ್ತು ಅಧ್ಯಯನದ ಮೂಲಕ ಕಾನೂನು ತಜ್ಞರಾಗಿ ಅರ್ಥಶಾಸ್ತ್ರಜ್ಞರಾಗಿ, ಸಮಾಜಶಾಸ್ತ್ರಜ್ಞರಾಗಿ, ಕಾರ್ಮಿಕ ನಾಯಕರಾಗಿ, ಸಜ್ಜನ ರಾಜಕಾರಣಿಯಾಗಿ, ಜನಮುಖಿ ಕಾರ್ಯ ಮಾಡಿದ ದಿನ ದಲಿತ, ದುರ್ಬಲ ವರ್ಗದ, ಶೋಷಿತ ಜನಾಂಗದ ವಿಮೋಚಕ, ವೈಚಾರಿಕ - ಪ್ರಗತಿಪರ ಚಿಂತಕ, ಬೋಧಿಸತ್ವ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾ ಮಾನವತಾವಾದಿ, ಮಹೋನ್ನತ ಪದವಿಗಳ ಸರದಾರ, ಲಿಂಗ, ವರ್ಣ, ಧರ್ಮ ವ ಸರ್ವ ಸಮತೆಗಾಗಿ ವಿಶ್ವ ಶ್ರೇಷ್ಠ ಸರ್ವೋನ್ನತಿಯ ಪರಿಶುದ್ಧ ಭಾರತ ಸಂವಿಧಾನ ಗ್ರಂಥ ರಚಿಸಿದ ಭಾರತ ಸಂವಿಧಾನ ಶಿಲ್ಪಿ, ಪುಸ್ತಕ ಪ್ರೇಮಿ, ರಾಷ್ಟ್ರ ಭಕ್ತ, ಭಾರತ ರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್ ರವರ ೧೩೩ನೇ ಜಯಂತಿ ೧೪ ಎಪ್ರಿಲ್ ರಂದು ಇದ್ದು; ಆ ನಿಮಿತ್ತ ಸ್ವಾಭಿಮಾನ, ಸ್ವಾವಲಂಬನೆಗಾಗಿ, ಮತದಾನ ಮಹತ್ವ ಹಾಗೂ ಸಮಾಜಾರ್ಥಿಕ ಉನ್ನತಿ, ವ್ಯಕ್ತಿಕಲ್ಯಾಣ ವ ರಾಷ್ಟ್ರಾಭ್ಯುದಯ ಜಾಗೃತಿಗಾಗಿ ಒಂದು ಕಿರುಲೇಖನ)
*ವಿಧಿ ಲಿಖಿತ ಬದಲಿಸಿದ ಭಾರತ ಭಾಗ್ಯ ವಿಧಾತ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್*
ಅದು ಕತ್ತಲೆಯ ಕಾಲ.೧೯ನೇ ಶತಮಾನ, ಸುತ್ತಲಿನ ಜನರಲ್ಲಿ ಮೌಡ್ಯತೆ ತುಂಬಿ ಜಾತೀಯತೆ ತಾಂಡವವಾಡುತ್ತಿದ್ದ ಕಾಲ. ಕತ್ತಲೆಯ ಕೋಣೆಗೆ ಸಣ್ಣ ಹಣತೆಯಂತೆ, ಏಳು ಬಣ್ಣಗಳ ನಡುವೆ ಶ್ವೇತ ಬಣ್ಣದಂತೆ, ಗ್ರಹಣ ಬಡಿದ ಮನಸ್ಸುಗಳಿಗೆ ಜಾತಕದ ಸೂತಕ ಕಳೆಯುವ ಸಂತನಂತೆ ಭೂಮಿಗೆ ಬಂದ ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್. ಸಮಾನತೆಯ ಹರಿಕಾರ, ಮಹಾ ಬೆಳಕು 14ನೇ ಎಪ್ರಿಲ್ 1891ರಲ್ಲಿ (ಅಮರ ಡಿಸೆಂಬರ್ 6, 1956ರಲ್ಲಿ) ಮಧ್ಯಪ್ರದೇಶದ ಮಾಹೋ ಎಂಬಲ್ಲಿ ರಾಮಜಿ ಸಕ್ಪಾಲ್ ಮತ್ತು ತಾಯಿ ಭೀಮಾಬಾಯಿ ಅವರ ಮಡಿಲಲಿ ಉದಿಸಿಬಂದ ಭಾಸ್ಕರ್. ಇವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹರ್ ಜಾತಿಯಲ್ಲಿ ಜನಿಸಿದರು. ಜಾತಿಯ ಭೂತ ಜನುಮಕ್ಕೆ ಅಂಟಿ ಬಂದದ್ದು ವಿಧಿ ಲಿಖೀತ. ಇವರ ಗುರುಗಳು ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ ಅಂಬೇಡ್ಕರ್ ನಾಮದಿಂದ ಖ್ಯಾತರಾದ ಇವರು ಬಾಲ್ಯದಿಂದ ಸಾಮಾಜಿಕ ಅವಮಾನ ಎದುರಿಸಿದ್ದು, ನೋವಿನಿಂದ ನೊಂದ ಬಾಲ್ಯದ ಬರೆಗಳು ಇನ್ನೂ ಮಾಸಿಲ್ಲ. ಪ್ರತಿಯೊಬ್ಬ ಭಾರತೀಯನ ಎದೆಯಾಳದಲ್ಲಿ ಅಚ್ವೊತ್ತಿದೆ. ಅದಕ್ಕೆ ಜೀವಂತಸಾಕ್ಷಿಯಾಗಿ ಕನ್ನಡ, ಹಿಂದಿ, ಮರಾಠಿಯಾದಿಯಾಗಿ ಹಲವು ಭಾಷೆಗಳಲ್ಲಿ ಮೂಡಿಬರುತ್ತಿರುವ ಮಹಾನಾಯಕ ಡಾ. ಭೀಮ ರಾವ್ ರಾಮಜಿ ಅಂಬೇಡ್ಕರ್ ಧಾರಾವಾಹಿ ಸರ್ವಜನಾಂಗದವರ ಕಣ್ಣುತೆರೆಸಿ, ಜೈ ಭೀಮ್ ಘೊಷಣೆ ಮೊಳಗಿಸುತಿದೆ. ಈ ದಾಸ್ಯ ವಿಮೋಚಕ ಮಹಾನಾಯಕನಿಗೆ ಇಂದು 133ನೇಯ ಜನುಮ ದಿನದ ಶುಭಾಶಯಗಳು.
ದಲಿತ ಸಮುದಾಯವು ಶತ ಶತಮಾನಗಳಿಂದಲೂ ಹಿಂದೂ ಸವರ್ಣೀಯರಿಂದ ಅಸ್ಪಶ್ಯರು ಎಂದು ಪರಿಗಣಿಸಲ್ಪಟ್ಟವರು. ಸ್ವತಂತ್ರ ಭಾರತದಲ್ಲಿ ಸಂವಿಧಾನವನ್ನು ಅಂಗೀಕರಿಸುವ ಪೂರ್ವದವರೆಗೆ ಈ ಸಮುದಾಯಗಳನ್ನು ಮುಟ್ಟಬಾರದು ಮತ್ತು ನೋಡಬಾರದು ಮತ್ತು ಸಮೀಪ ಬರಲು ಬಿಡಬಾರದು ಎಂಬ ಭಾವನೆಯಲ್ಲಿ ಅಂದಿನ ಸಮಾಜ ಇತ್ತು. ಈಗಲೂ ಇದು ಸಂಪೂರ್ಣವಾಗಿ ತೊಲಗಿಲ್ಲ. ಇದರ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿದ ಮಹಾ ನಾಯಕ ನಮ್ಮ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್. ಎಲ್ಲಾ ರೀತಿಯಿಂದ ಶೋಷಿಸಲ್ಪಟ್ಟ ದಲಿತರಾದಿಯಾಗಿ ಸರ್ವ ಸಮುದಾಯಕ್ಕೆ ಮಾನವ ಹಕ್ಕುಗಳನ್ನು ದೊರಕಿಸಿಕೊಟ್ಟವರು. ಒಬ್ಬ ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ , ಸಮಾಜ ಸುಧಾರಕ ಮತ್ತು ರಾಜಕೀಯ ನಾಯಕರಾಗಿದ್ದು , ಅವರು ಸಂವಿಧಾನವನ್ನು ರಚಿಸುವ ಸಮಿತಿಯ ನೇತೃತ್ವ ವಹಿಸಿದ್ದರು. ಜವಾಹರಲಾಲ್ ನೆಹರು ಅವರ ಮೊದಲ ಕ್ಯಾಬಿನೆಟ್ ಮತ್ತು ಹಿಂದೂ ಧರ್ಮವನ್ನು ತ್ಯಜಿಸಿದ ನಂತರ ಇವರ ದಲಿತ ಬೌದ್ಧ ಚಳುವಳಿಗೆ ಸ್ಫೂರ್ತಿ ಸಿಕ್ಕಿತು. ಡಾ. ಬಿ. ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬) ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಅಡಳಿತ ಹಾಗೂ ಸರ್ವಜನ ಕಲ್ಯಾಣಕ್ಕಾಗಿ, ವಿಶ್ವ ಶ್ರೇಷ್ಠ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ 1954 ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ "ಜಗತಿಕ್ ಬೌದ್ಧ ಧರ್ಮ ಮಂಡಳಿ" ನಲ್ಲಿ ಬೌದ್ಧ ಸನ್ಯಾಸಿಗಳಿಂದ "ಬೋಧಿಸತ್ವ" ಎಂಬ ಬಿರುದನ್ನು ನೀಡಲಾಯಿತು. ವಿಶೇಷವೆಂದರೆ ಅಂಬೇಡ್ಕರ್ ಬದುಕಿರುವಾಗಲೇ ಅವರಿಗೆ 'ಬೋಧಿಸತ್ವ' ಎಂಬ ಬಿರುದು ನೀಡಲಾಗಿತ್ತು.
*ಸಮತೆ ಬಾಳಿಗೆ ದಾರಿದೀಪವಾಗಬಲ್ಲ ಬಾಬಾಸಾಹೇಬ ಅಂಬೇಡ್ಕರ್ ರವರ ನಿತ್ಯ ನೂತನ ನುಡಿದೀಪ್ತಿ ತೋರಣ*
*ವಿಶ್ವ ರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರು ಜನರನ್ನು ಎಚ್ಚರಿಸುತ, ಮಾರ್ಗದರ್ಶಿಯಾಗಿ ನೀಡಿದ ಪ್ರಜಾಪ್ರಭುತ್ವದ ಮಹತ್ವ*
*"ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಜತೆಯಾಗಿ ಬಾಳುವ ವಿಧಾನ, ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮ."* ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರು ಹೇಳಿದ ಮಾತನ್ನು ಮೆಲುಕು ಹಾಕುತ್ತಾ ಅನುದಿನ - ಅನುಕ್ಷಣ ಕೂಡಿಬಾಳುವ ಮತ್ತು ಒಗ್ಗಟ್ಟಿನಿಂದ ಬಾಳುವ ಪಾಠವನ್ನು ಕಲಿಯೋಣ. ಕಲಿಸೋಣ
*"ಪ್ರಜಾಪ್ರಭುತ್ವವೆಂದರೆ, ದೇಶದ ಎಲ್ಲಾ ಜನರ ಆರ್ಥಿಕ & ಸಾಮಾಜಿಕ ಅಸಮಾನತೆಯನ್ನು ಕ್ರಾಂತಿಕಾರಕವಾಗಿ, ಯಾವುದೇ ಹಿಂಸಾತ್ಮಕ ಮಾರ್ಗವಿಲ್ಲದೇ, ಯಾವುದೇ ಹಿಂಸೆಯಿಲ್ಲದೇ, ಕಾನೂನಿನ ಮೂಲಕ ಬದಲಾವಣೆ ಮಾಡುವ ಸರಕಾರದ ಒಂದು ಪದ್ಧತಿಯಾಗಿದೆ."* ಎಂದು ಹೇಳಿದ ಸಂವಿಧಾನ ಶಿಲ್ಪಿ ಬಾಬಾಸಾಹೇಬರ ನುಡಿಗಳು ನಮ್ಮ ಬಾಳಿಗೆ ಹೊಸ ಬೆಳಕು ನಿಡಿದೆ.
*"ಸರ್ವರಿಗೂ ಸಮಾನವಾಗಿ ಬದುಕುವಂತೆ ಅವಕಾಶ ಕಲ್ಪಿಸುವುದೇ ರಾಷ್ಟ್ರೀಯತೆ. ಈ ದೇಶದಲ್ಲಿ ಉತ್ತಮ ಪ್ರಜೆಯಾಗಿ ಬದುಕುವುದಕ್ಕೆ ನಾವೆಲ್ಲರೂ ಕಲಿಯಬೇಕಾದ ಮೊದಲ ಪಾಠ ಇದಾಗಲೇಬೇಕು."* ಎಂದು ಹೇಳಿದ ಅಪ್ರತಿಮ ದೇಶಭಕ್ತ ಬಾಬಾಸಾಹೇಬ ಡಾ. ಅಂಬೇಡ್ಕರ ಅವರ ಮಾತಿನಂತೆ ನಾಕರಿಕರನಾಗಿ ಅನಾಕರಿಕತೆಯನ್ನು ಸಂಪೂರ್ಣ ತ್ಯೇಜಿಸೋಣ.
*ಮತದಾನ ಹಾಗೂ ಚುನಾವಣೆಯ ಹಿರಿಮೆ - ಗರಿಮೆಗಳ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ್ ರವರು ನುಡಿದ ಬರಹ ದರ್ಶನ*
*"ಕೋಟಿಗಳ ಒಡೆಯರಿಗೂ ಒಂದೇ ಮತ ಹಾಕುವ ಹಕ್ಕು ; ಬಡವರಿಗೂ ಒಂದೇ ಮತ ಹಾಕುವ ಹಕ್ಕು, ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ"* ಎಂದು ಹೇಳಿದ ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ ಅವರ ಮಾತು ಇಂದಿಗೂ ದೇಶದ ಎಲ್ಲಾ ಚುನಾವಣೆಗಳಲ್ಲಿ ಅನುಸರಿಸಲಾಗುತ್ತಿದೆ ಎಂಬುದು ಸತ್ಯ & ಸೂಕ್ತ ಸಂಗತಿ. ರಾಜಕೀಯ ಅರಾಜಕತೆಗೆ ಆಸ್ಪದ ಕೊಡದೆ ಚುನಾವಣೆಗಳಲ್ಲಿ ಜಾಣ್ಮೆಯಿಂದ ನಮ್ಮಲ್ಲಿರುವ ಒಂದೇ ಒಂದು ಅಮೂಲ್ಯ ಮತ ಚಲಾಯಿಸೋಣ. ನೆಮ್ಮದಿಯಿಂದ ಬಾಳೋಣ.
*"ಮತದಾನವೆಂಬುದು ಮನೆಯ ಮಗಳಿದ್ದಂತೆ, ಅದನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ"* ಎಂದು ಆ ಕಾಲದಲ್ಲೇ ಹೇಳಿದ *ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ* ಅವರ ಮಾತು ಪ್ರಸ್ತುತ ದೇಶದಲ್ಲಿ ಲೋಕ ಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ಎಷ್ಟೊಂದು ಅರ್ಥಪೂರ್ಣ, ಸಕಾಲಿಕವಾಗಿದೆಯಲ್ಲವೇ? ಇಂಥಹ ವಿಚಾರಗಳಿಂದ ಭಾರತದ ಹಣೆಬರಹವನ್ನೇ ಬದಲಾಯಿಸಿದ* ಸಂವಿಧಾನಶಿಲ್ಪಿ, ವಿಶ್ವರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ೧೩೩ನೇ ಜಯಂತಿ ಆಚರಣೆ (೧೪- ೦೪- ೨೦೨೪) ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಎಪ್ರಿಲ್ ೨೬ ಮತ್ತು ಉತ್ತರ ಕರ್ನಾಟಕದಲ್ಲಿ ಮೇ ೦೭ ಲೋಕಸಭೆ ಚುನಾವಣೆ ಬಂದಿರುವಾಗ ನಾವೆಲ್ಲರೂ ಜಾಗರೂಕತೆಯಿಂದ, ಮತಿವಂತಿಕೆಯಿಂದ ಮತ ಚಲಾಯಿಸಿ ಸಕಲ ಜನಾಂಗದ ಲೇಸನು ಬಯಸುವ ಜನನಾಯಕನನ್ನು ಆರಿಸೋಣ. ಮತದಾನವು ಮಾರಾಟವಾಗಿ, ಜೀವನ ಗುಲಾಮಗಿರಿಗೆ ಬೀಳದಂತೆ ಎಚ್ಚರವಹಿಸೋಣ.
*"ಯಾವತ್ತು ಭಾರತದ ಪ್ರಜೆಗಳಿಗೆ ಮತದಾನದ ಮಹತ್ವ ತಿಳಿಯುತ್ತದೆಯೋ ಆವತ್ತು (ಅಂದು) ಭ್ರಷ್ಟ ರಾಜಕಾರಣಿಗಳು ಬಿಕಾರಿಗಳಾಗುತ್ತಾರೆ"* ಎಂದು ಹೇಳಿದ *ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ* ಅವರ ಮಾತು ಈಗ ನಮ್ಮ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಘೊಷಣೆಯಾಗಿರುವ ಸಂದರ್ಭದಲ್ಲಿ ಎಷ್ಟೋಂದು ಸೂಕ್ತವಾಗಿದೆಯಲ್ಲವೇ? ಇಂಥಹ ಆರೋಗ್ಯವಂತ ಸಮ - ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಅವರು ಹೇಳಿದ ಹಲವಾರು ವಿಚಾರಗಳನ್ನಾಧರಿಸಿದ ನಾವು ನೀಡುವ ಮತ ದಾನವಾಗಲಿ, ತುಂಡು - ಗುಂಡಿನ ಅಮಲ್ಲಿಲಿ ಅಯೋಗ್ಯರಿಗೆ ಮತಚಲಾಯಿಸಿ ಮತ ಗಲಭೆಗೆ ಇಂಬುಕೊಡದಿರೋಣ. ಯಾರ ಒತ್ತಾಯಕ್ಕೂ ಮಣಿಯದೆ, ಆಸೆ ಆಮಿಷಗಳಿಗೆ ಬಲಿಯಾಗದೆ. ನಾಡಿನ ಸಮಗ್ರ ಅಭಿವೃದ್ಧಿ ಮಾಡುವ ಪ್ರತಿನಿಧಿಯನ್ನು ಆಯ್ಕೆಮಾಡೋಣ.
*"ದೇಶವನ್ನಾಳುವ ಪ್ರಭುಗಳು ಇನ್ನು ಮುಂದೆ ದೇವತೆಗಳ ಹೊಟ್ಟೆಯಿಂದ ಹುಟ್ಟುವುದಿಲ್ಲ. ದೇವತೆ ಒಂದು ಕಲ್ಪಕತೆ. ಅವರು ಮತದಾರರು ಹಾಕುವ ಮತದ ಪೆಟ್ಟಿಗೆಯಿಂದ ಹುಟ್ಟುತ್ತಾರೆ"* ಎಂದು ಸಂವಿಧಾನ ಜಾರಿಯಾದಾಗ ಹೇಳಿದ *ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್* ಅವರ ಮಾತುಗಳು ಈಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದ ಸಂದರ್ಭದಲ್ಲಿ ಎಷ್ಟೊಂದು ಸಾರ್ವಕಾಲಿಕ ಸತ್ಯವಾಗಿವೆ ಎಂಬುದನ್ನು ಗಮನಿಸಿದರೆ ಅವರು *ಭಾರತದ ಭಾಗ್ಯ ವಿಧಾತ* ಆಗಿದ್ದು ಆಯಾ ಸಂದರ್ಭಗಳಲ್ಲಿ ಸಾಭೀತು ಆಗುತ್ತಲೇ ಇದೆ. ಇಂಥಹ ಹಲವಾರು ಸಂಗತಿಗಳು, ಚಿಂತನೆಗಳ ವಿಶ್ವಜ್ಞಾನಿ ಅಂಬೇಡ್ಕರ್ ಅವರ ನುಡಿ ಅಮೃತ ಸವಿಯುತ, ನೆನಪಿಸಿಕೊಳ್ಳುವುದರೊಂದಿಗೆ ಪ್ರಬುದ್ಧರಾಗೋಣ*
*ವಿಶ್ವ ಶ್ರೇಷ್ಠ ಭಾರತ ಸಂವಿಧಾನದ ಪರಿಶುದ್ಧತೆಯ ಬಗೆಗೆ ವಿಶ್ವರತ್ನ ಬಾಬಾಸಾಹೇಬ ಅಂಬೇಡ್ಕರ್ ರವರ ನುಡಿ ದರ್ಶನ*
ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ೧೯೪೯ನೇ ನವೆಂಬರ್ ೨೯ರಂದು ಹೀಗೆ ಹೇಳಿದರು 1950ರ ಜನೇವರಿ, 26ರಂದು (ಸಂವಿಧಾನ ಜಾರಿ ದಿನದಂದು) *"ಇಂದಿನಿಂದ ನಾವು ವೈರುಧ್ಯದ ಬದುಕಿಗೆ ಒಳಪಡುತ್ತಿದ್ದೇವೆ. ರಾಜಕೀಯದಲ್ಲಿ ನಮಗೆ ಸಮಾನತೆ ದೊರಕುವುದು. (ಸಂವಿಧಾನ ವ್ಯಕ್ತಿಗೆ ಒಂದು ಓಟು, ಒಂದು ಓಟಿಗೆ ಒಂದು ಮೌಲ್ಯ ಎಂಬ ರಾಜಕೀಯ ಸಮಾನತೆ ಪಡೆದಿದ್ದೇವೆ.) ಆದರೆ ಬದುಕಿನಲ್ಲಿ ಸಾಮಾಜಿಕ & ಆರ್ಥಿಕ ಅಸಮಾನತೆ ಇನ್ನೂ ಹಾಗೇ ಇದೆ. ನಾವು ಈ ವೈರುಧ್ಯವನ್ನು ಸಾಧ್ಯವಾದಷ್ಟು ಬೇಗನೆ ಅಳಿಸಿ ಹಾಕಬೇಕು. ಇಲ್ಲದಿದ್ದರೆ ಅಸಮಾನತೆಯಿಂದ ಬಳಲುವವರು ರಾಜಕೀಯ ಪ್ರಭುತ್ವದ ರಚನೆಯನ್ನು ಸ್ಪೋಟಗೊಳಿಸುವರು"* ನಿಜ, ಈ ಸಾಮಾಜಿಕ & ಆರ್ಥಿಕ ಸಮಾನತೆ ಪ್ರತಿ ಭಾರತೀಯರಿಗೂ ಸಿಗಬೇಕಾದರೆ ಅವರು ಹುಟ್ಟು ಹಾಕಿದ ವಿಮೋಚನಾ ಚಳುವಳಿ ಮುಂದುವರೆಸುವ ಅವಶ್ಯಕತೆ ಇದೆ. ಸಮ ಸಮತೆಗಾಗಿ ಶೋಷಿತರೆಲ್ಲರೂ ಜಾತಿ ಮತ ಭೇಧ ಮಾಡದೆ ನಿರಂತರ ಹೋರಾಡೋಣ.
*"ನಾನು ಕೇವಲ ಒಂದೇ ಜಾತಿ ಅಥವಾ ಒಂದೇ ಜನಾಂಗಕ್ಕೋಸ್ಕರ ಕೆಲಸ ಮಾಡಿಲ್ಲ. ಭಾರತದ ಕಟ್ಟ ಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ. ಸಂಶಯವಿದ್ದರೆ ಹೋಗಿ ಸಂವಿಧಾನ ಓದಿಕೊಳ್ಳಿ."* ಎಂದು ಹೇಳಿದ ಸಂವಿಧಾನ ಶಿಲ್ಪಿ ಬಾಬಾಸಾಹೇಬರ ಮಾತುಗಳನ್ನು ಮೆಲುಕು ಹಾಕುತ್ತಾ ಸಮತೆಗಾಗಿ ನಿತ್ಯ ಹೋರಾಡೋಣ
*"ಸಂವಿಧಾನದಲ್ಲಿ ನಾನು ನಿಮಗೆ ಮತದಾನದ ಹಕ್ಕು ಕೊಟ್ಟಿರುವುದು ರಾಜರಂತೆ ಬದುಕಲಿ ಅಂತ. ಆದರೆ, ರಾಜಕಾರಣಿಗಳ ಚಮಚಾಗಳಾಗಿ ಬದುಕಲಿ ಅಂತ ಅಲ್ಲ"* ಎಂದು ಯುವಪೀಳಿಗೆಗೆ ಹೇಳಿದ ಸಂವಿಧಾನಶಿಲ್ಪಿ ಬಾಬಾಸಾಹೇಬ ಡಾ. ಅಂಬೇಡ್ಕರ ಅವರು ಹೇಳಿದ ಮಾತು ಈಗಿನ ಸಂದರ್ಭದಲ್ಲಿ ಎಷ್ಟೊಂದು ಸಮಂಜಸವಾಗಿದೆಯಲ್ವಾ?!. ದಯಮಾಡಿ ಸ್ವಾಭಿಮಾನದಿಂದ ಬದುಕಿ ನಮ್ಮ ಅಸ್ತಿತ್ವಕ್ಕೆ ಭದ್ರಕೋಟೆ ಕಟದಟೋಣ.
ಸಂವಿಧಾನ ಶಿಲ್ಪಿ ಬಾಬಾಸಾಹೇಬರು *"ನಮ್ಮ ಸಂವಿಧಾನ ಸತ್ತವರ ಬಗ್ಗೆ ಬರೆದ ಚರಿತ್ರೆಯಲ್ಲ. ಅದು ನನ್ನ ಭಾರತ ದೇಶದ ಜನಗಳ ಬದುಕು ಕಟ್ಟುವ ಮಹಾಗ್ರಂಥ"* ಎಂದು ಹೇಳಿದ ಮಾತು ನಿಜವಾಗಿಯೂ ಎಷ್ಟೊಂದು ಸಾಕ್ಷಿಕರಿಸಲ್ಪಟ್ಟಿದೆ ಮತ್ತು ಅರ್ಥಪೂರ್ಣವಾಗಿದೆ ಎಂಬುದನ್ನು ಬಹಳ ಗಂಭೀರವಾಗಿ ಗಮನಿಸಬೇಕಾಗುತ್ತದೆ. ಇಂಥಹ ಹಲವಾರು ಸಾಕ್ಷೀಕರಿಸಿದ, ಅರ್ಥಪೂರ್ಣ ವಿಚಾರಗಳುಳ್ಳ ಬಾಬಾಸಾಹೇಬರ ಮಾತಿನಂತೆ ನಾವೆಲ್ಲರೂ ಜಾತಿ ತಾರತಮ್ಯ ಮಾಡದೆ. ಶಾಂತಿ - ಮೈತ್ರಿಯಿಂದ ಸಕಲ ಧರ್ಮದವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡೋಣ. ಕೋಮುಗಲಭೆಗೆ ಆಸ್ಪದ ಕೋಡದಿರೋಣ.
*ಶೋಷಿತ ಮತ್ತು ತುಳಿತಕ್ಕೊಳಗಾದ ಜನರಲ್ಲಿ ಸಿಂಹ ಘರ್ಜನೆ ಮಿಲಗಿಸುವ ಸಮರ ವೀರ ಅಂಬೇಡ್ಕರ್ ರವರ ನುಡಿ ಮುತ್ತುಗಳು*
*"ಬದುಕಿದರೆ ಹುಲಿ - ಸಿಂಹಗಳಂತೆ ಬದುಕಿರಿ...*
*ಯಾಕಂದರೆ, ಬಲಿ ಕೊಡುವುದು ಕುರಿ - ಕೋಳಿಗಳನ್ನೇ ಹೊರತು ಹುಲಿ - ಸಿಂಹಗಳನ್ನಲ್ಲ"* ಎಂದು ಹೇಳಿದ ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ ರವರ ನುಡಿ ಬೆಳಕಿನಂತೆ ಶಕ್ತಶಾಲಿಗಳಾಗೋಣ, ಕೀಳರಿಮೆ ಕಿತ್ತುಹಾಕೋಣ. ಶಿಕ್ಷಣವೆಂಬ ಹುಲಿಹಾಲು ಕುಡಿದು ಅನಿಷ್ಟ ಪದ್ದತಿಗಳನ್ನು ಬಲಿಕೊಟ್ಟು ದಮನಿತರನ್ನು ಮೇಲೆತ್ತೋಣ. ಪರಾಕ್ರಮಿಗಳಾಗೋಣ.
*"ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು"* ಎಂದು ಹೇಳಿದ ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ ಅವರ ಮಾತಿನಂತೆ ಈ ದೇಶಗಳಲ್ಲಿ ಮುಸುಕು ಹಾಕಿಕೊಂಡು ತಾಂಡವಾಡುತ್ತಿರುವ ಜಾತಿರೋಗದ ಬುಡಕ್ಕೆ ಬೆಂಕಿ ಇಡೋಣ. ಮಾನವರೆಲ್ಲರು ಆತ್ಮಗೌರವ, ವ್ಯಕ್ತಿಗೌರವದಿಂದ ಸುಖವಾಗಿ ಬಾಳೋಣ. ಬಾಬಾಸಾಹೇಬರ ಹೆಗ್ಗನಸನು ನನಸಾಗಿಸೋಣ.
*"ನಿಮ್ಮ ಅದೃಷ್ಟದ ಮೇಲೆ ನಂಬಿಕೆ ಇಡಬೇಡಿ ; ನಿಮ್ಮ ಪ್ರಯತ್ನದ ಮೇಲೆ ನಂಬಿಕೆಯಿಡಿ"* ಎಂದು ಹೇಳಿದ ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ ಅವರ ಮಾತಿಗೆ ಕಿವಿಯಾಗಿ ನಿತ್ಯ ಪರಿಶ್ರಮಿಶೋಣ. ಉನ್ನತೊನ್ನತ ಸ್ಥಾನಮನಾಗಳಿಸೋಣ. ಶ್ರಮಕ್ಕೆ ತಕ್ಕ ಫಲ ಪಡಿಯೋಣ*
*"ಓದು - ಬರಹ ತಿಳಿದಿರುವ ವ್ಯಕ್ತಿ ತನ್ನ ಸಮುದಾಯದ ಜನರಿಗೆ ಶಿಕ್ಷಣ, ಮೂಢನಂಬಿಕೆ, ದೌರ್ಜನ್ಯಗಳ ಕುರಿತು ತಿಳುವಳಿಕೆ ನೀಡಿಲ್ಲವೆಂದಾದರೆ ಆ ವ್ಯಕ್ತಿ ಬದುಕಿದ್ದು ಸತ್ತಂತೆ"* ಎಂದು ಹೇಳಿದ ವಿಶ್ವರತ್ನ ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ ಅವರ ನುಡಿ ಕಿರಣದಂತೆ ಸುಶಿಕ್ಷತರಾಗೋಣ. ನಮ್ಮ ಹಕ್ಕು ಪಡೆದು ಮತ್ತು ಕರ್ತವ್ಯವನ್ನು ಚಾಚು ತಪ್ಪದೆ ಪಾಲಿಸೋಣ.
*"ನನಗೆ ಅಭಿಮಾನಿಗಳು ಬೇಡ. ಅನುಯಾಯಿಗಳು ಬೇಕು. ಅಭಿಮಾನಿಗಳು ಹುಚ್ಚರಾಗುತ್ತಾರೆ. ಈ ದೇಶದಲ್ಲಿ ಅಭಿಮಾನಿಗಳು ಹುಚ್ಚರಾಗಿರುವ ಉದಾಹರಣೆಗಳು ಬಹಳಷ್ಟಿವೆ. ಅನುಯಾಯಿಗಳು ಹಾಗಲ್ಲ. ಅವರು ಅರಿವು, ಸಮಾಜದ ಹಿತ ಗಮನಿಸಿ ಹೆಜ್ಜೆಯಿಡುವ ವಿಚಾರವಂತರಾಗಿರುತ್ತಾರೆ"* ಎಂದು ಸಂವಿಧಾನ ಶಿಲ್ಪಿ, ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ ಮಾತು ಇಂದಿಗೂ ಸಾರ್ವಕಾಲಿಕ ಸತ್ಯವಾಗಿದೆ. ಇಂಥಹ ಹಲವಾರು ಕುತೂಹಲಕರ, ಆಸಕ್ತಿಕರ ಸಾರ್ವಕಾಲಿಕ ಸಂಗತಿಗಳನ್ನು ಅರಿತವರಾಗಿ ಕುರುಡು ಅಭಿಮಾನಿಗಲಾಗದೆ ಸಮ ಸಮಾಜ ನಿರ್ಮಾಣದ ಮಾರ್ಗದಲ್ಲಿ ನಿತ್ಯ ಶ್ರಮಿಸೋಣ. ಭೀಮ ಗರ್ಜನೆ ಮೋಳಗಿಸೋಣ.
*"ರಾಷ್ಟ್ರಗೀತೆಗೆ ಹೇಗೆ ಎದೆಯುಬ್ಬಿಸಿ ನಿಲ್ಲುತ್ತೇವೆಯೋ ಹಾಗೆ ಸಮಾಜದಲ್ಲಿನ ಅನ್ಯಾಯ, ಅಸಮಾನತೆಯ ವಿರುದ್ಧ ನಿಂತಾಗ ಮಾತ್ರ ಈ ದೇಶಬಾಂಧವರಿಗೆ ಗೌರವದ ಬದುಕು ದಕ್ಕುತ್ತದೆ"* ಎಂದು ಹೇಳಿದ *ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್* ಅವರ ಮಾತು ಇಂದಿನ, ಈ ಹೊತ್ತಿಗೂ ಸಾರ್ವಕಾಲಿಕ ಸತ್ಯವಾಗಿದೆಯೆಂದರೆ ಅವರಲ್ಲಿನ ದೂರದೃಷ್ಟಿತ್ವ, ಆಳವಾದ ಅಧ್ಯಯನಶೀಲತೆ, ದೇಶದ ಬಗೆಗಿನ ಅಪಾರ ಕಾಳಜಿ ಇತ್ಯಾದಿ ಸಂಗತಿಗಳನ್ನು ಗಮನಿಸಬಹುದು. ಸಾವಿರಾರು ವರುಷ ಕಳೆದರೂ ಭಾರತ ದೇಶಕ್ಕೆ ಸವೆಯದಂತಹ, ನವನವೀನತೆಯ *ವಿಶ್ವಶ್ರೇಷ್ಟ ಸಂವಿಧಾನ* ನೀಡಿ *"ಭಾರತ ಭಾಗ್ಯವಿಧಾತ"* ಆಗಿರುವುದು ಈಗ ಇತಿಹಾಸ. ಇಂತಹ ಇತಿಹಾಸಕಾರ, ಅಪ್ಪಟ ದೇಶಪ್ರೇಮಿ ಬಾಬಾಸಾಹೇಬರ ನುಡಿ ಸಿಡಿಲಿಗೆ ಮೈಯೊಡ್ಡಿ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಸಾಮಾಜಿಕ ಪಿಡುಗುಗಳನ್ನು ಸುಟ್ಟುಹಾಕೋವ ಪಣತೋಡೋಣ, ಕಾರ್ಯೋನ್ಮೂಖರಾಗೋಣ.
ಡಾ. ಅಂಬೇಡ್ಕರ್ ರವರ ಸಾಮಾಜಿಕ ಸುಧಾರಣಾ ಕಾರ್ಯ ಮತ್ತು ಮಾನವ ಹಕ್ಕುಗಳಿಗಾಗಿ ನಡೆಸಿದ ಹೋರಾಟಕ್ಕಾಗಿ, ವಿಶ್ವದಲ್ಲಿ ಅತ್ಯುನ್ನತ ಅದ್ಯಯನಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯ ೧೯೫೨ರಲ್ಕಿ ಗೌರವ ಡಾಕ್ಟರೇಟ್ ಹಾಗೂ ಮರಣೊತ್ತರ ೨೦೧೫ರಲ್ಲಿ 'ವಿಶ್ವರತ್ನ' ಪ್ರಶಸ್ತಿಯನ್ನು ನೀಡಿ, ವರ್ಡ್ ಆಫ್ ದಿ ಫಾದರ್ ಎಂಬ ಹಿರಿಮೆಯ ಪಟ್ಟವನ್ನು ಬಾಬಾಸಾಹೇಬರಿಗೆ ನೀಡಿರುವುದು, ವಿಶ್ವದಲ್ಲೇ ಭಾರವು ಮಾದರಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿಬೇಕಾಗಿಲ್ಲ.
ಅಸ್ಪೃಶ್ಯತೆ, ಮತಾಂಧತೆ, ಮೌಢ್ಯಗಳು ಹಾಗೂ ಅಂಧ ಶ್ರದ್ಧೆಗಳ, ಅಸಮಾನತೆಯ ನರಕವನ್ನು ಒಡ್ಡುವ ಹಿಂದೂಧರ್ಮವನ್ನು ತ್ಯಜಿಸಿ, ವ್ಯಕ್ತ ಘನತೆ, ಶಾಂತಿ ಮೈತ್ರಿ, ಸರ್ವ ಸಮಾನತೆಗಾಗಿ ೧೯೫೬ನೇ ಅಕ್ಟೋಬರ್ ೧೪ರಂದು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಬೌದ್ಧಧರ್ಮವನ್ನು ಸ್ವೀಕರಿಸಿದರು.
ಒಮ್ಮೆ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಫೆಡರೇಶನ್ ನಾಯಕರ ಮತ್ತು ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ‘‘ಕೇವಲ ರಾಜಕೀಯದ ಕಡೆ ಗಮನ ಕೊಡ ಬೇಡಿರಿ; ನಮ್ಮ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಹಳ್ಳಿಗಾಡಿನ ಜನರಿಗೆ ಸೌಲಭ್ಯಗಳನ್ನು ಒದಗಿಸಿರಿ; ಅವರನ್ನು ಹೋರಾಟಕ್ಕೆ ಸಜ್ಜುಗೊಳಿಸಿರಿ; ಕಳೆದು ಒಂದೂವರೆ ದಶಕದಲ್ಲಿ ನಾವು ಪರಿಶಿಷ್ಟ ಜಾತಿಗಳ ಮಧ್ಯೆ ಕೆಲಸ ಮಾಡಿದ್ದೇವೆ. ಇನ್ನು ನಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಂಕುಚಿತ ದೃಷ್ಟಿಕೋನ ನಮ್ಮದಾಗಬಾರದು; ಸಮುದಾಯದ ಹಿತವನ್ನು ಕಡೆಗಣಿಸುವುದೂ ಸಲ್ಲದು.’’ ಎಂದು ಎಚ್ಚರಿಸಿದರು. ಆದರೆ ಈ ಮಾತು ಅಂದಿನಿಂದ ಇಂದಿನವರೆಗೂ ಯಾವ ನಾಯಕನ ಕಿವಿಗೂ ತಟ್ಟುತ್ತಿಲ್ಲ. ಸಮುದಾಯದ ಈಗಿನ ನಾಯಕರು ತಮ್ಮ ಸ್ವಹಿತ ಮತ್ತು ಸ್ವಾರ್ಥದ ಬದುಕಿನಲ್ಲಿ ಮುಳುಗಿದ್ದಾರೆ. ಹೀಗಾಗಿ ಅಂಬೇಡ್ಕರ್ ಅವರ ಕನಸು ನನಸಾಗುತ್ತಿಲ್ಲ.
ತಮ್ಮ ಶ್ರಮದಿಂದ, ಕಾಯಕದಿಂದ ಹಣೆಬರಹ ಬದಲಿಸಿಕೊಂಡ ಭಾರತ ಭಾಗ್ಯ ವಿಧಾತ ಅಂಬೇಡ್ಕರ್ ಇಂದು ಮತ್ತೆ ಯುವಕರ ಎದೆಯಲ್ಲಿ ಜನಿಸಬೇಕಿದೆ. ಮರುಭೂಮಿಯಲ್ಲಿ ನೀರು ಹುಡುಕಿದಂತೆ ಅವಕಾಶಗಳೇ ಇಲ್ಲದ ದಾರಿಯಲ್ಲಿ ತನ್ನ ಜ್ಞಾನದಿಂದ ಜಗತ್ತಿಗೆ ಪ್ರಕಾಶಮಾನವಾಗಿ ಕಂಡ ಭೀಮಜಿ ಅವರ ಜೀವನ ನಮಗೆಲ್ಲ ಮಾರ್ಗದರ್ಶಿಯಾಗಬೇಕಿದೆ. ಇಂದು ಎಲ್ಲೋ ಕಳೆದು ಹೋದ ಜಗತ್ತಿಗೆ ಮತ್ತೆ ಓದಿನ ದಾರಿ ತೋರಬೇಕಿದೆ. ಬೆಳಕಲ್ಲೂ ಕತ್ತಲೆಯ ಜೀವನ ಮಾಡುವವರಿಗೆ ಕತ್ತಲಲ್ಲಿ ಸಾಧಿಸಿದವನ ಕಥೆಯೊಮ್ಮೆ ಹೇಳಬೇಕಿದೆ. ಸಮಯ ಸಾಧಕನ ಸೊತ್ತು ವಿನಃ ಹಗಲುಗನಸಲ್ಲಿ ಮಾರು ಹೋಗುವವನದಲ್ಲ ಎಂಬುದನ್ನು ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆ ಎಲ್ಲರಿಗೂ ಇದೆ. ೧೯೪೨ ಜುಲೈ ೧೮ರಂದು ನಾಗಪುರದಲ್ಲಿ ಅಂಬೇಡ್ಕರ್ ಕರೆಕೊಟ್ಟ 'ಭೀಮ ಮಂತ್ರ', 'ಶಿಕ್ಷಣ', 'ಸಂಘಟನೆ', 'ಹೋರಾಟದ', ಸಂದೇಶದ ಮೂಲಕ ನಮ್ಮ ಬಾಳನ್ನು ಹೊನ್ನಾಗಿಸೋಣ, ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬಾಳೋಣ.
*"ಜೈ ಭಾರತ ಭಾಗ್ಯವಿಧಾತ ಡಾ. ಬಿ. ಆರ್. ಅಂಬೇಡ್ಕರ "* , ಜೈ ಭೀಮ್, ಜೈ ಭಾರತ ಸಂವಿಧಾನ, ಜೈ ಸರ್ವ ಸಮಾನತೆ.
*ಸುಹೇಚ ಪರಮವಾಡಿ*
ಶ್ರೀ. ಸುಭಾಷ್ ಹೇಮಣ್ಣಾ ಚವ್ಹಾಣ, ವೈಚಾರಿಕ ಬರಹಗಾರರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments