* ಕಾವ್ಯಸಂಕ್ರಾಂತಿ.!

 ""ಸಂಕ್ರಾಂತಿಯ ಹಾರ್ದಿಕ‌ ಶುಭಕಾಮನೆಗಳೊಂದಿಗೆ ನಿಮಗಿದೋ ಕವನದ ಉಡುಗೊರೆ. ಹಬ್ಬದ ಸದಾಶಯ, ಪ್ರಾರ್ಥನೆಗಳ ಭಾವತೊರೆ.  ಸೂರ್ಯಾರಾಧನೆಯಂದು ಸಕಲ ಸಹೃದಯಗಳ ನಿವೇದನೆಯಿದು. ಸಮಸ್ತ ಸುಮನುಸುಗಳ ನಿತ್ಯ ಭಾವಸಂವೇದನೆಯಿದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.



ಕಾವ್ಯಸಂಕ್ರಾಂತಿ.!



ದಿಕ್ಕು ಬದಲಿಸುತ್ತಿರುವ ದಿವ್ಯ ದಿನಕರ

ಬದುಕುಗಳ ಬಿಕ್ಕು ತೊಡೆಯೋ ಶ್ರೀಕರ

ಒಳಿತುಗಳ ವರವಿಟ್ಟು ಹರಸು ಭಾಸ್ಕರ

ಸಂತಸದಿ ನಲಿಯಲಿ ಸಕಲ ಚರಾಚರ.!


ಮಾಗಿ ಚಳಿಗೆ ಮುದುಡಿದ ಜೀವಗಳಿಗೆ

ಭರವಸೆಯ ಬಿಸಿಲು ಹರಿಸಿ ಅರಳಿಸು

ಜಡತೆಯಲಿ ಜಿಡ್ಡುಗಟ್ಟಿದ ಭಾವಗಳಿಗೆ

ಚೈತನ್ಯದ ಬೆಳಕು ಸ್ಫುರಿಸಿ ನಳನಳಿಸು.!


ರಾಮ ರಾವಣನ ಸಂಹರಿಸಿದ ದಿನವಂತೆ

ನಮ್ಮೊಳಗಣ ಅಸುರಿಗುಣಗಳ ದಮನಿಸು

ರಾಶಿ ಬದಲಿಸುತಿರುವ ಭವ್ಯ ರವಿತೇಜನೆ

ಬಾಳಪಥಕೆ ನಿತ್ಯ ಬೆಳಕಿಡುತ ಮುನ್ನಡೆಸು.!


ಸುಗ್ಗಿಯ ಹಿಗ್ಗು ನಿತ್ಯ ನಿರಂತರವಾಗಲಿ

ಹಸಿರಿನ ಈ ಸೊಬಗು ಚಿರಂತನವಾಗಲಿ

ಸಂಕ್ರಮಣ ಕ್ಷಣ ಶುಭದಾಯಕವಾಗಲಿ

ವರ್ಷವೆಲ್ಲ ಧರೆಗೆ ಸುಖದಾಯಕವಾಗಲಿ.!


ಬೆಲ್ಲದಾ ಸವಿ ಸಿಹಿಯಿಡುತ ಅರಳಿಸಲಿ

ಎಳ್ಳಿನಾ ಕಾಂತಿ ಹೊಳಪಿಟ್ಟು ಬೆಳಗಿಸಲಿ

ಕಬ್ಬಿನ ಸ್ವಾದ ನಡೆನುಡಿಯಲಿ ಮೇಳೈಸಲಿ

ಸಕ್ಕರೆ ಅಚ್ಚಿನ ನೀತಿ ಹೃನ್ಮನ ಆವರಿಸಲಿ.!


ಸಂಕ್ರಾತಿಯಿಂದ ನಿತ್ಯಸತ್ಯ ಕ್ರಾಂತಿಯಾಗಲಿ

ಶಾಂತಿ ಪ್ರೇಮ ಬಾಳ  ಸಂಪ್ರೀತಿಯಾಗಲಿ

ಸದಾ ಮಮತೆ ಸಾಮರಸ್ಯ ನೀತಿಯಾಗಲಿ

ಸಹನೆ ಸೌಹಾರ್ದತೆ ಜೀವನ ರೀತಿಯಾಗಲಿ.!


ಭಾಸ್ಕರ ನಿನ್ನ ತತ್ವ ಮಾರ್ಗದರ್ಶನವಾಗಲಿ

ಆ ಬೆಳಕ ಸತ್ವ ಬಾಳಿಗೆ ನಿದರ್ಶನವಾಗಲಿ.!

ದಿನವು ನಿನ್ನ ಕಿರಣ ನಮಗೆ ವೇದ್ಯವಾಗಲಿ

ಸಂಕ್ರಮಣದ ಈ ಪಠ್ಯ ಭೋದ್ಯವಾಗಲಿ.!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments