“ಇದು ಅವಳೆಂಬ ಅನನ್ಯ ರೂಪರಾಶಿಯ ಅನಾವರಣದ ಕವಿತೆ. ಅಪೂರ್ವ ಚೆಲುವು ಸೌಂದರ್ಯಗಳ ವೈಭವೀಕರಣದ ಭಾವಗೀತೆ. ಅವಳೆಂದರೆ ಕವಿಯ ಕಲ್ಪನೆಯ ಕಾವ್ಯಕನ್ನಿಕೆಯೂ ಹೌದು. ಓದುಗನೆದೆಯ ಕನಸಿನ ಬೆಳದಿಂಗಳ ಬಾಲಿಕೆಯೂ ಹೌದು. ಅವರವರ ಭಾವಕ್ಕೆ, ಅವರವರ ಬೆರಗಿಗೆ ನಿಲುಕುವ ವರ್ಣನಾತೀತ ಅನುಪಮ ಸುಂದರಿ ಅವಳು. ನೆನೆಯುತ್ತಾ ಓದಿಬಿಡಿ. ಓದುತ್ತಾ ನೆನೆದು ಬಿಡಿ.” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಬೆಳದಿಂಗಳ ಬಾಲೆ..!
ಸುಳಿವ ಗಾಳಿಗೂ ಅದೇನೋ ಪುಳಕ
ಅವಳ ಹಿಂದೆಯೇ ಸುಳಿಯುತಿಹುದು
ಮೆಲ್ಲ ಸ್ಪರ್ಶಿಸುತಳವಳ ಮುಂಗುರುಳು.!
ಹೊಳೆವ ಚಂದ್ರನಿಗೂ ಏನೋ ಸಂತಸ
ಎಡಬಿಡದೆ ಅವಳ ಹಿಂಬಾಲಿಸುತಿಹನು
ಸ್ಫುರಿಸುತಲಿ ಅಡಿಗಡಿಗೂ ಬೆಳದಿಂಗಳು.!
ಮುಗಿಲ ತಾರೆಗಳಿಗೂ ಅತೀವ ಕೌತುಕ
ಎವೆಯಿಕ್ಕದೆ ಅವಳನೇ ದಿಟ್ಟಿಸುತಿಹವು
ಪಿಳಿಪಿಳಿ ಬಿಡುತ ಮಿನುಗುವ ಕಂಗಳು.!
ಸುಗಂಧರಾಜ ಕುಸುಮಗಳಿಗೂ ಸಂಭ್ರಮ
ಘಮ್ಮನೆ ಸತತ ಸೌರಭವ ಸೂಸುತಿಹವು
ಸಡಗರದಿ ಪೂರ್ಣ ಬಿಚ್ಚಿಡುತ ಪ್ರತಿಎಸಳು.!
ಗೂಡೊಳಗಣ ಹಕ್ಕಿಗಳಿಗೂ ಅತಿ ವಿಸ್ಮಯ
ತಲೆ ಆಚೆ ಹಾಕಿ ಕಲರವ ಮಾಡುತಿಹವು
ಕಂಡು ಅವಳ ಮನೋಹರ ನಗೆಮುಗುಳು.!
ಮೊರೆವ ಕಡಲಲೆಗಳಿಗೂ ರೋಮಾಂಚನ
ನವೋತ್ಸಾಹದಿ ಮುಗಿಲೆತ್ತರ ಹಾರುತಿಹವು
ಒಮ್ಮೆ ನೆನೆಸಲು ಅವಳ ರೇಷಿಮೆ ಹೆರಳು.!
ಅವಳು ಹೆಜ್ಜೆಯಿಟ್ಟಡೆ ಬೆಳಕಾಯ್ತು ಇರುಳು
ಉರಿಬಿಸಿಲೂ ಕೂಡ ತಂಪಿನ ಬೆಳದಿಂಗಳು
ಮರಗಿಡಗಳೂ ಬಾಗುತಿವೆ ನೀಡಲು ನೆರಳು.!
ಸೃಷ್ಟಿಯೇ ಆಗಿಹುದು ಅವಳಿಗೆ ಮರುಳು
ಸೃಷ್ಟಿಸಿದ ಬ್ರಹ್ಮನೇ ನಿಬ್ಬೆರಗಾಗಿ ನೋಡಿಹನು
ಹಾಗೆ ನಾಸಿಕದ ಮೇಲಿಟ್ಟುಕೊಂಡು ಬೆರಳು.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments