* ಇದು ಮಕರ ಸಂಕ್ರಮಣ *
ಅಂಬರದಿ ರವಿ ರಥವೇರಿಹನು
ಉತ್ತರಾಯಣಕೆ ಪಥ ಬದಲಿಸಿಹನು
ಮಾಗಿಯ ಚಳಿ ಓಡಿಸುವನು
ಮಕರರಾಶಿಗೆ ಪ್ರವೇಶಿಸಿಹನು
ಮಾವಿನ ತೋರಣದ ಸಿಂಗಾರ
ಮನೆಯoಗಳದಿ ರಂಗವಲ್ಲಿಯ ಚಿತ್ತಾರ
ಸುಗ್ಗಿ ಬಂದಿದೆ ಸಂಭ್ರಮಿಸೆ ಬಾರಾ
ಎಳ್ಳು ಬೆಲ್ಲವ ಬೀರುವ ಬಾರಾ ಬಾರಾ
ಒಕ್ಕಲಾಡಿದ ಪಸಲಿನ ರಾಶಿ ರಾಶಿ
ಪೂಜಿಸಲು ಆಹಾ ಎನಿತು ಖುಷಿ
ತುತ್ತನಿಡುವ ಭೂ ತಾಯಿಗೆ ನಮಿಸಿ
ಅನ್ನದಾತ ರೈತಗೆ ವಂದಿಸಿ
ಗಲ್ ಗಲ್ ಗೆಜ್ಜೆ ನಾದ ಮಾಡುತ್ತಾ
ಯೌವ್ವನದ ವೈಯಾರ ತೋರುತ್ತಾ
ರೆಷಿಮೆ ಸೀರೆ ಲಂಗ ದಾವಣಿ ತೊಟ್ಟು
ಸಾಂಪ್ರದಾಯಿಕ ತೊಡುಗೆ ಹಣಗೆ ತಿಲಕವಿಟ್ಟು
ಖುಷಿಯ ಜೊತೆ ಸಿಹಿ ಹಂಚುತ್ತಾ
ಉಭಯ ಕುಶಲೋಪರಿ ಮಾತನಾಡುತ್ತಾ
ಎಳ್ಳು ಬೆಲ್ಲ ಕೊಬ್ಬರಿ ಶೇಂಗಾ ಹುರಿಗಡಲೆ
ಸಕ್ಕರೆ ಅಚ್ಚು ಸಿಹಿ ಕಬ್ಬಿನ ಜಲ್ಲೆ
ಕುಣಿ ಕುಣಿದು ಹಂಚಿಹರು
ಭಾರತಿ ನಾರಿ ಮಣಿಯರು
ಹೊಸಕ್ಕಿ ಹುಗ್ಗಿಯೂಟ
ಹಾರುತಿದೆ ಬಾನಲಿ ಗಾಳಿಪಟ
ಹಿಮಾವಂತನೊಡನೆ ಬಿಹು ಆಡೋಣ
ಕಿಚ್ಚು ಹಾಯಿಸಿ ರಾಸುಗಳ ನಮಿಸೋಣ
ಜೀಕು ಜೋಕಾಲಿ ಬೋಗಿ ಹಬ್ಬ ಮಾಡೋಣ
ನೋವ ಮರೆತು ಸುಗ್ಗಿ ಸಂಭ್ರಮಿಸೋಣ ಇದು ಸಂಕ್ರಮಣ
✍️ ವಿಜಯಲಕ್ಷ್ಮಿ ನಾಡಿಗ್, ಕಡೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments