ಕವಿತೆಯ ಮಾಯೆ
ಯಾರು ಏನೇ ಹೇಳಲಿ ಬರೆಯುವ ಹವ್ಯಾಸ ಬಿದ್ದ ಮೇಲೆ ಬರಹ ಬಿಡುವದು ತುಂಬ ಕಷ್ಟ .ಅದು ಅವನಿಗೆ ಖುಷಿ ಯನ್ನು ಕೊಡುವ ಕಾರ್ಯವಾದ್ದರಿಂದಲೇ ಅದನ್ನು ಸತತ ಮಾಡುತ್ತ ಬರುತ್ತಾನೆ.ಇದು ಒಬ್ಬನಿಗೆ ಪೂರ್ಣಕಾಲಿಕ ಉದ್ಯೋಗವೇನೂ ಅಲ್ಲ .ಆದರೆ ಇದನ್ನು ಪೂರ್ಣಕಾಲಿಕ ಉದ್ಯೋಗವನ್ನಾಗಿ ನಮ್ಮ ರಾಜ ಮಹಾರಾಜರ ಆಸ್ಥಾನದಲ್ಲಿ ಕವಿಗಳು ಇದ್ದರು .ಅವರು ಬರೆದೇ ಬದುಕಿನ ಎಲ್ಲ ಆನಂದ ಅನುಕೂಲ ಅನುಭವಿಸುತ್ತಿದ್ದರು.ಎಲ್ಲೋ ಕೆಲವರನ್ನು ಬಿಟ್ಟರೆ ನಾನು ಬರಹದಿಂದಲೇ ನನ್ನ ಉಪಜೀವನ ನಡೆಸುತ್ತೇನೆ ಎಂದು ಇಂದಿನ ಕಾಲಕ್ಕಂತೂ ಎದೆ ತಟ್ಟಿ ಹೇಳಲಾಗದು.ನವೋದಯದ ಕಾಲಕ್ಕೆ ತಮ್ಮ ನಾಟಕಗಳನ್ನು ಕಂಪನಿಗಳಿಗೆ ಬರೆದುಕೊಟ್ಟು ಒಂದಿಷ್ಟು ಧನ ಸಹಾಯ ಪಡೆಯುವ ಲೇಖಕರಿದ್ದರು.ಇನ್ನು ಕೆಲವರು ನಾಟಕಕಾರರಿಂದ ನಾಟಕ ಬರೆಸಿ ರಾಯಲ್ಟಿ ಕೊಡುತ್ತಿದ್ದರು.
ನಾಡೋಜ ಚನ್ನವೀರ ಕಣವಿ ನಾಡಿನ ಭಾಗ್ಯವಾದ ಕವಿಗಳಲ್ಲಿ ಒಬ್ಬರು .ನವೋದಯ, ನವ್ಯ, ಪ್ರಗತಿಶೀಲ, ದಲಿತ -ಬಂಡಾಯ,ಬಂಡಾಯೋತ್ತರ ಹೀಗೆ ಹೊಸಗನ್ನಡದ ಎಲ್ಲ ಪಂಥಗಳಿಗೂ ಸಲ್ಲುವ ಕವಿತೆಯನ್ನು ಬರೆದ ಕೆಲವೇ ಕೆಲವು ಕವಿಗಳಲ್ಲಿ ಅವರೂ ಒಬ್ಬರು.ಬೇಂದ್ರೆಯಂತಹ ಮಹಾಕವಿಯ ನಾಡಿನಲ್ಲಿ ನಿಂತು ಬೇಂದ್ರೆಯವರ ನಂತರ ಕಣವಿಯವರು ಎನ್ನುವ ಹಾಗೆ ಕಾವ್ಯವನ್ನು ಧ್ಯಾನಿಸಿದವರು.
ಕವಿತೆಯ ಹುಟ್ಟಿನ ಬಗ್ಗೆ ಅರ್ಥ ಪೂರ್ಣ ಮೀಮಾಂಸೆಯನ್ನು ತಮ್ಮ ಕಾವ್ಯ ಸಮಯದಲ್ಲಿ ಮಾಡಿದ ಕವಿ ಕಣವಿಯವರು. ಕವಿತೆಯ ಹುಟ್ಟಿನ ಬಗೆಗೆ ಮಾಡಿರುವ ಆಲೋಚನೆಯನ್ನು ಕುರಿತು ಒಂದಿಷ್ಟು ಚಿಂತನೆ ಈ ಲೇಖನದ ವಿಷಯ.
ಕವಿಯೆದೆಯಲ್ಲಿ ಅದಾವುದೋ ಒಂದು ದನಿ ಹಾಡಿನ ಸ್ರೋತವನ್ನು ಸದಾ ಹರಿಸುತ್ತಿರುವದು ಕಾವ್ಯೋದ್ಯೋಗದಲ್ಲಿ ತೊಡಗಿರುವ ಎಲ್ಲರ ಅನುಭವವೇ. ಆತ ಸದಾ ಕವಿತೆಯ ಸಾಲು ಹುಟ್ಟುವ ಬಗೆಯನ್ನು ಚಿಂತಿಸುತ್ತಿರುತ್ತಾನೆ ಎನ್ನುವದನ್ನು ಕವಿ ಕಣವಿಯವರು ಒಂದು ಪದ್ಯಭಾಗದಲ್ಲಿ ಹೇಳುವದು ಹೀಗೆ.
ನನ್ನದೆಯ ಗೂಡಿನೊಳಗಾವುದೋ ಹಕ್ಕಿಯುಲಿ
ಚಿಲಿಪಿಲಿಸುತಿಹುದಾವ ನಿಮಿಷದಲ್ಲೂ
ಜಗದ ಮೊರೆ ಕರೆಗಳಿಗೆ ಚೆಲುವು ಚಿನ್ನಾಟಕ್ಕೆ
ದನಿಗೂಡಿ ಹಾಡುತಿದೆ ಕನಸಿನಲ್ಲೂ
ಒಳದನಿ
ಕವಿ ಎದೆಯಲ್ಲಿ ಸದಾ ನುಡಿಸುವ ಹಕ್ಕಿಯುಲಿ ಇರುವ ದನ್ನು ಹೇಳುವ ಕವಿ ಅದರ ಗುನುಗುವಿಕೆಯಿಂದಲೇ ಜಗತ್ತಿನೊಂದಿಗೆ ಸಂವಾದಿಸುತ್ತಾನೆ. ಆ ಉಲಿ ಅವನನ್ನು ಸುಮ್ಮನಿರಗೊಡು ವದಿಲ್ಲ.ಅಲ್ಲಿನ ನೋವುಗಳಿಗೆ ಸ್ಪಂದಿಸುವಂತೆ ಮಾಡುತ್ತದೆ.
"ಹಾಡೆನ್ನ ಜೀವಿತವು "ಎಂದು ಸಾರುವ ಕವಿ ಹಾಡು ಬಿಟ್ಟು ಇರಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತಾನೆ.ಅಂತೆಯೆ ಪ್ರತಿಯೊಬ್ಬ ಬರೆಯುವ ಕವಿಗೆ
ಏನಾದರೂ ಇರಲಿ ಹಾಡ ನಿಲ್ಲಿಸಬೇಡ,
ದೀಪ ಪಟ್ಟನೆ ಆರಿ ಹೋಗಬಹುದು!
ನಿನ್ನೆದೆಯ ಕತ್ತಲೆಯ ಕಣ್ಣು ಕಪ್ಪಡಿ ಮತ್ತೆ
ಮೂಲೆ ಮೂಲೆಗೆ ಹೋಗಿ ಹಾಯಬಹುದು.
ನಾವು ಎಷ್ಟು ದಿನ ಬದುಕಿರುವವರು ? ಅದು ದೇವರಿಗೆ ಗೊತ್ತು.ಇರುವ ಎಲ್ಲ ವಯಸ್ಸಿನಲ್ಲಾದರೂ ಎಲ್ಲಿ ಬರೆಯಲಾಗುತ್ತದೆ, ಯಾವುದೇ ಹೊತ್ತಿನಲ್ಲಿ ಸಾವೆಂಬ ಹಕ್ಕಿ ಅಥವಾ ವೃದ್ದಾಪ್ಯದ ನಿರಾಶೆ ಮೂಡಬಹುದು.. ಜೀವಂತ ವಿದ್ದೂ ಕಾವ್ಯದ ಕುರಿತು ಯೋಚಿಲಾರದಂತಹ ಸ್ಥಿತಿ ಬರಬಹುದು.ಆಗ ಬರೆಯಲಾಗುತ್ತದೆಯೇ? ಅದಕ್ಕೆ ಕವಿ" ದೀಪ ಪಟ್ಟನೆ ಆರಿ ಹೋಗಬಹುದು" ಎನ್ನುವ ಸಾಲಿನಲ್ಲಿ ನಮ್ಮ ಜೀವನದ ಹೃಸ್ವತೆಯನ್ನು ಸಾರುತ್ತಾರೆ.ಎಷ್ಟೋ ಜನ ಪ್ರತಿಭಾವಂತ ಕವಿಗಳೇ ಬರೆಯುವದನ್ನು ನಿಲ್ಲಿಸಿ ಎದ್ದು ಹೋಗಿದ್ದಾರೆ.ಇನ್ನು ನೀ ಸುಮ್ಮನಿದ್ದರೆ ಆಗದು ಎನ್ನುತ್ತಾರೆ.
ಕವಿಗೆ ಹಾಡು ಬರಿ ಹಾಡಲ್ಲ, ಅದು ಅವನದ ಸಕಲವೂ ಹೌದು ಅವರು " ಮತ್ತೊಂದು ಪುಟ್ಟ ಹಕ್ಕಿಗೆ ಕವಿತೆಯಲ್ಲಿ ಹೇಳುತ್ತಾರೆ .
ಬದುಕು ಸೋಲಾದರೂ ಕಾಡು ಪಾಲಾದರೂ
ಹಾಡ ಬಿಟ್ಟುಳಿದವನ ಪಾಡು ಬೇಡ
ನೀನ್ನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಪಾಡು ಬೇಡ
ಎಷ್ಟೋ ಜನ ಕವಿಗಳು ಬಾಳಿನಲ್ಲಿ ಸೋತಾಗ "ಎಲ್ಲಿಯ ಕವಿತೆ ಸರಿಯಾಚೆ" ಎನ್ನುವವರೇ ಇದ್ದೇವೆ ಆದರೆ ನಿಜವಾದ ಕವಿತೆಯ ಅಗತ್ಯ ಇರುವದೇ ಆಗವ. ಅದು ನಮ್ಮ ದುಖಕ್ಕೆ ಕಣ್ಣಿರಿಗೆ ಸಾಥು ಕೊಡುತ್ತದೆ . ಕಣವಿಯ
ವರಂತಹ ಹಿರಿಯ ಕವಿಗಳಿಗೆ ಅದು ದೈವವೂ ಆಗಿದೆ.ಅಂತೆಯೆ ನಾವು ಸಾಹಿತ್ಯವನ್ನು ಸರಸ್ವತಿ ಎನ್ನುತ್ತೇವೆ.
ಬರಹ ಅವನ ಶಕ್ತಿ ನಿಜ, ಆದರೆ ಆ ಬರಹವೂ ಒಂದು ಸಂಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಎಚ್ಚರವನ್ಜು ಕವಿ ಹೇಳುತ್ತಾರೆ .ಅಂದರೆ ಕವಿ ಬರೆಯುವಾಗಲೂ ತನ್ನ ಬರಹಕ್ಕೆ ಹಾಕಿಕೊಳ್ಳಬೇಕಾದ ಗಡಿಯನ್ನು ಕವಿ ನೆನಪಿಸುತ್ತಾರೆ.
ಬರೆಯುತ್ತೇನೆಂದು ಯಾರದೋ ಮನಸ್ಸಿಗೆ ನೋವು ಮಾಡುವ ಉದ್ದೇಶ ಪೂರ್ವಕ ಅವಮಾನಿಸುವ ಕವಿತೆ ಕವಿತೆಯಲ್ಲ ಎನ್ನುವ ಕವಿ"ಬಿನ್ನಹ"ಕವಿತೆಯಲ್ಲಿ
ಅಲ್ಲ ಸಲ್ಲದ ವಿಷಯ ವಿಪರೀತ ಭಾವನೆಯ
ವಿಷಗಾಳಿ ಎನ್ನಬಳಿ ಸುಳಿಯದಿರಲಿ
ಸೊಲ್ಲು ಸೊಲ್ಲಿಗೆ ಪರರಣಕಿಸುವ
ಅಶಿವ ನುಡಿ ಎನ್ನ ಕಿವಿ ಸೇರದಿರಲಿ.
ಇಲ್ಲಿ " ಅಶಿವ ನುಡಿ " ಎಂಬ ಪದ ಗುಚ್ಛ ಗಮನಿಸಬೇಕು. ಸಾಹಿತ್ಯ ಅಥವಾ ಕಾವ್ಯವೆಂದರೆ ಶಿವ ನುಡಿ. ಅದು ಮಂಗಳಕರ ನುಡಿ.ಇತರರಿಗೆ ಕೇಡು ಬಗೆಯುವ ನುಡಿಯಲ್ಲ..
ಹೀಗೆ ಕವಿತೆ ಎಂದರೆ ಸದಾ ಒಳಿತು ಬಯಸುವದು ಎನ್ನುವ ಕವಿ ಕಣವಿಯವರ ವ್ಯಕ್ತಿತ್ವ ಕುರಿತು ಇನ್ನೊಬ್ಬ ಕವಿ ಜಿ ಎಸ್ ಎಸ್ ಹೇಳುವ ಮಾತಿದು" ..ಕವಿ ಕಣವಿಯವರ ವ್ಯಕ್ತಿತ್ವ ಸದಾ ನಿರಾತಂಕ ಮನಸ್ತಿತಿಯ ,ಯಾವ ಒಳ್ಳೆಯದರ ಬಗೆಗೂ ರುಚಿಯನ್ನು ಕಳೆದುಕೊಳ್ಳದ ....
ಮಾನವೀಯ ಸಂಬಂಧ ಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳದ ಮತ್ತು ಅದಮ್ಯವಾದ ಜೀವನಪ್ರೀತಿಯಿಂದ ತುಂಬಿದ" ವ್ಯಕ್ತಿತ್ವ ಎಂಬುದನ್ನು ಸಾರಿದ್ದಾರೆ.
ಇದೆಲ್ಲ ನಿಜ , ಇದು ಆ ಕಾಲದ ಮಾತಾಯಿತು.ಕಾಲ ಬದಲಾದಂತೆ ಕವಿತೆಯ ಭಾವವೂ ಬದಲಾಗಿದೆ.ಕಾಲ ಬದಲಾದಂತೆ ಸುತ್ತಲಿನ ವಿಷಮ ವಾತಾವರಣ ಕವಿಯ
ಜೀವವನ್ನೂ ಹಿಂಡಿದೆ .ಆದರೆ ಕವಿತೆ ಎಂದರೆ ಒಳಿತು ಬಯಸು ವದು ಎಂಬ ಮೂಲಭಾವ ಬದಲಾಗಿಲ್ಲ. ಬದಲಾದ ಇಂದಿನ ವಾಸ್ತವ ಜಗತ್ತನ್ನು ಕವಿ ಹೊಸ ಹುಟ್ಟು ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆ.
ನಿದ್ದೆ ಮಡಿಲೊಳು ದಣಿದು ಮಲಗಿಹುದು
ಜಗದ ಬಾಳು
ಹಗಲಿನ ಅಪಸ್ವರಗಳೆಲ್ಲ ಮೌನದಲಿ
ಮರೆತಿಹವು ನೂರಾರು ಮೇಲು ಕೀಳು:
ನಿದ್ದೆ ಬಾರದೆ ನಿನಗೆ ? ಬೀಳದೆಯೆ ಸವಿಗನಸು
ನೆಲದಿಂದ ಮುಗಿಲವರೆಗೆ ಚಿಮ್ಮಿ ಬರುತಿವೆ ಬಾಣ ಬಿರುಸು
ಕತ್ತಲೆಯ ಆಳದಲಿ ಕೊರತೆಗಳೆಲ್ಲವನು ಹೂಳು ಹೂಳು
ಮನುಷ್ಯ ಎಚ್ಚರದ ಸ್ಥಿತಿಯಲ್ಲಿ ಎಷ್ಟೇ ಬಡಿದಾಡಲಿ, ಎಷ್ಟೇ ಅಪಸ್ವರ ಎತ್ತಲಿ.ಆದರೆ ಮರೆತು ಮಲಗಿದನೆಂದರೆ ಆತ ಮತ್ತೆ ತನ್ನ ಮೂಲ ಸ್ಥಿತಿಗೆ ಬರಲೇಬೇಕು ಅವನ ಮೇಲು ಕೀಳು ಎಲ್ಲ ಮರೆಯಲೇಬೇಕು.ಅದಕ್ಕೆ ಕವಿ ನಿದ್ದೆಯಲ್ಲಾದರೂ ಸವಿಗಣಸು ಬೀಳಲಿ ಎಲ್ಲ ಕೊರತೆಗಳನ್ನು ಕತ್ತಲೆಯ ಆಳದಲಿ ಹೂಳಿ ಬಿಡೊಣ ಎಂಬ ಆಶಯ ಹೊಂದುತ್ತಾರೆ.
ಅಂತಿಮವಾಗಿ ಮನುಷ್ಯನ ಒಳಿತು ಮೇಲೆ ಬರಬೇಕು ಎನ್ನುವದು ಕವಿಯ ಆಸೆ." ಮನುಷ್ಯ ಪೃಕೃತಿ ಕವಿತೆಯ ಈ ಸಾಲುಗಳೊಂದಿಗೆ ಈ ಚಿಂತನೆ ಇಲ್ಲಿಗೆ ಮುಗಿಸಬಹುದು ಎನಿಸುತ್ತದೆ.
ಕಾಯಲಾರದ ಮನುಷ್ಯ ಕೊಡಲಿಯೆತ್ತುತ್ತಾನೆ
ಮಾಯಲಾರದ ಗಾಯ ಭವಿಷ್ಯಕ್ಕೆ ಭೂತಕ್ಕೆ ಬಲಿ?
ಒಂದೊಂದು ಏಟಿಗೂ ಒಂದೆಡೆಗೆ ಭೂಕಂಪ
ಮತ್ತೊಂದೆಡೆಗೆ ಚಂಡಮಾರುತ........,.
ಅನುಮಾನಿಸುವ ಮೊಗ್ಗೆ ಈ ಮನುಷ್ಯನ ಬಗ್ಗೆ
ಎಲ್ಕೆಡೆಯೂ ಸಂಶಯವೇ...
ನಿಜ ಆದರೆ ಇದರಾಚೆಗೆ ಮನುಷ್ಯನ ಜಿಜವಾದ ಪೃಕೃತಿಯಾದ ಪ್ರೀತಿ ನಮ್ಮನ್ನು ಕಾಯುತ್ತದೆ.ಅಂತೆಯೆ ಕಣವಿ ಯವರು ಮನುಷ್ಯನ ಬಗೆಗೆ ನೀಡುವ ಈ ದರ್ಶನ ನಮ್ಮಲ್ಕಿ ಆಶಾಭಾವನೆ ಮೂಡಿಸುತ್ತದೆ.
.....ಇದರ ತಣ್ಣೆಳಲಲ್ಲಿ ಕುಳಿತು
ನಲ್ಲೆಯ ಗಲ್ಲಮುಟ್ಟಿ ,ಮಗುವ ಮುದ್ದಿಸಿದವನು
ಹೂ ಹಣ್ಣು ಕಾಯಿಗಳ ಪಡೆದು ಗುಡಿಗೆ ಹೋದವನು
ಯಾರು? ಹೌದು,ಇವನೇ , ಈ ಮನುಷ್ಯನೇ
ಇದನ್ನು ನಾವು ಮರೆಯಬಾರದು. ಅಂದರೆ ಈ ಎಲ್ಲ ಸಂಶಯದ ನಡುವೆಯೂ ಮನುಷ್ಯನಲ್ಲಿರುವ ಒಳಿತನ್ನು ನಾವು ಮರೆಯಬಾರದು.ಮರೆತರೆ ಬದುಕು ನಡೆದೀತಾದರೂ ಹೇಗೆ? ಅಲ್ಕಿ ಕೊಡಲಿ ಹಿಡಿದ ಕೈಯೇ ಇಲ್ಲಿ ಮಗುವ ಮುದ್ದಿಸಿರಬಹುದೆ? ಅಂದರೆ ಕವಿಯ ಗಮನ ಕೊಡಲಿಯ ಬದಲು ಅವನೊಳಗೆ ಹುದುಗಿರುವ ಒಳಿತು ಹೊರಗೆಳೆಯೋಣ ಎಂದೇ ಧ್ಯಾನಿಸುತ್ತದೆ. ಇದು ಕಾವ್ಯ ಮಾಡಬೇಕಾದ ಕಾರ್ಯ. ಕವಿ ಕಣವಿಯವರು ಸಾರಿದ ದರ್ಶನವಾಗಿದೆ.
ಯ.ಮಾ.ಯಾಕೊಳ್ಳಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments