*"ಕಕ್ಕುಲತೆಯಿಂದ ರೂಪುಗೊಂಡ ನಮ್ಮ ಮನದ ಭಾವನೆಗಳು ನೈಜ ಕಾವ್ಯವಾಗಬಲ್ಲದು: ಬಸವರಾಜ
ಗಾರ್ಗಿ*
*ರಾಯಬಾಗ:* ಕಾವ್ಯ ಕಸರತ್ತಿನ ಕ್ರಿಯೆಯಲ್ಲ.ಕಕ್ಕುಲಾತಿಯಿಂದ ರೂಪುಗೊಂಡ ನಮ್ಮ ಮನದ ಭಾವನೆಗಳು ಮಾತ್ರ ನೈಜ ಕಾವ್ಯವಾಗಬಲ್ಲದು ಎಂದು ಬೆಳಗಾವಿಯ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರದಾನ ಕಾರ್ಯದರ್ಶಿ, ಹಿರಿಯ ಚುಟುಕು ಕವಿ ಶ್ರೀ ಬಸವರಾಜ ಗಾರ್ಗಿ ಅಭಿಮತ ವ್ಯಕ್ತಪಡಿಸಿದರು.
ಅವರು ಬುಧವಾರ ದಿನಾಂಕ 1 ರಂದು ರಾಯಬಾಗ ಪಟ್ಟಣದ ಸರಸ್ವತಿ ಟ್ಯುಟೋರಿಯಲ್ಸ ಸಭಾಂಗಣದಲ್ಲಿ ರಾಯಬಾಗ ತಾಲ್ಲೂಕು ನೂತನ ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನೆ, ರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಚುಟುಕು ಕವಿಗೋಷ್ಠಿ ಹಾಗೂ ಕನ್ನಡ ಮೂಕನಾಯಕ ವಾರಪತ್ರಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಮನದ ಮಾತುಗಳನ್ನು ಆಶಯ ನುಡಿಗಳ ಮೂಲಕ ಸೊಗಸಾಗಿ ಹಂಚಿಕೊಂಡರು. ಕಾವ್ಯ ಅವಿರ್ಭವಿಸಲು ಕವಿಯ ಮನಸ್ಸು ಏಕಾಂತದಲ್ಲಿ ವಿಹರಿಸಬೇಕು.ಪ್ರಾಸಕ್ಕೆ ಜೋತು ಬೀಳದೆ ಈ ಪರಿವರ್ತನಾಶೀಲ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಚುಟುಕು ಸಂಕ್ಷಿಪ್ತವಾಗಿ ಜನಮನಸೂರೆಗೊಳ್ಳಬೇಕು ಎಂದು ಸಲಹೆ ನೀಡಿದರು. ಇದಕ್ಕೂ ಮೊದಲು ಆಗಮಿಸಿದ್ದ ಗಣ್ಯ ಮಹೋದಯರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಬಂಡಾಯ ಸಾಹಿತಿ,ಹಾಗೂ ವಿಶ್ರಾಂತ ಶಿಕ್ಷಕ ಶ್ರೀ ಕುಮಾರ ಅವಳೆ ಅವರ ಸಾರಥ್ಯದಲ್ಲಿ ಮೂಡಿಬಂದ "ಕನ್ನಡ ಮೂಕನಾಯಕ" ವಾರಪತ್ರಿಕೆಯನ್ನು ವೇದಿಕೆ ಮೇಲಿನ ಗಣ್ಯರು ಲೋಕಾರ್ಪಣೆ ಮಾಡಿದರು.ರಾಯಬಾಗದ ಹಿರಿಯ ಬಂಡಾಯ ಹಾಗೂ ಪ್ರೇಮಕವಿ ಪ್ರೊ.ಶಿವಾನಂದ ಬೆಳಕೂಡ ಕಾರ್ಯಕ್ರಮ ಉದ್ಘಾಟಿಸಿ ಉದಯೋನ್ಮುಖ ಚುಟುಕು ಕವಿಗಳಿಗೆ ಸಲಹೆ ನೀಡಿ ಸಾಂದರ್ಭಿಕವಾಗಿ ತಮ್ಮ ಸ್ವರಚಿತ ಚುಟುಕು ವಾಚಿಸಿ ಚುಟುಕು ಕವಿಗೋಷ್ಠಿಗೆ ಚಾಲನೆ ನೀಡಿದರು. ಪ್ರೊ.ಎಲ್.ಎಸ್.ವಂಟಮೂರೆ ಪ್ರೊ.ಮನೋಹರ ಕಾಂಬಳೆ ಜೆ.ಡಿ.ಕವಿ ಜ್ಯೋತಿ ರೂಪಾಳೆ ಸೇರಿದಂತೆ 15 ಕ್ಕೂ ಹೆಚ್ಚು ಹಿರಿಯ ಕಿರಿಯ ಚುಟುಕು ಕವಿಗಳು ಪಾಲ್ಗೊಂಡು ತಮ್ಮ ರಸವತ್ತಾದ ಚುಟುಕುಗಳನ್ನು ವಾಚಿಸಿ ಗಮನ ಸೆಳೆದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಚ್.ಎ.ಭಜಂತ್ರಿ,ಶ್ರೀ ಕುಮಾರ ಅವಳೆ, ನ್ಯಾಯವಾದಿ ಶ್ರೀ ಡಿ.ಎಚ್.ಯಲ್ಲಟ್ಟಿ, ಶ್ರೀ ಸಂಜಯ ಏಕಣೆ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ ಸಾಧಕರನ್ನು ಚು.ಸಾ.ಪ.ವತಿಯಿಂದ ಅಭಿಮಾನದಿಂದ ಸತ್ಕರಿಸಲಾಯಿತು.ಈ ಸಮಾರಂಭದಲ್ಲಿ ಚುಟುಕು ಕವಿತೆ ವಾಚಿಸಿದ ಕವಿಗಳಿಗೆ ಗಣ್ಯರು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರು, ಹಿರಿಯ ಸಾಹಿತಿ ಡಾ.ಸಿ.ಕೆ.ಜೋರಾಪುರ ಅವರು ಘನ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಯಾಡಿದರು. ವಿಜಯಕುಮಾರ ಕಾಂಬಳೆ ,ಶ್ರೀಕಾಂತ ಚಲವಾದಿ,ಕವಿ ಶ್ರೀಶೈಲ ಶಿರೂರ ಟಿ.ಎಸ್.ವಂಟಗೂಡೆ, ಹಿರಿಯ ಸಂಶೋಧಕ ಡಾ.ಹಂದೂರ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕರು ಸಾಹಿತಿ ಡಾ.ಜಯವೀರ ಎ.ಕೆ. ಸ್ವಾಗತಿಸಿದರು. ಸಾಗರ ಝ0ಡೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಡಿ.ಕಾವ್ಯನಾಮದ ಉದಯೋನ್ಮುಖ ಕವಿ ಶ್ರೀ ಜ್ಯೋತಿ ರೂಪಾಳೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ರೀ ರಾಜೇಂದ್ರ ಕಾಂಬಳೆ ವಂದಿಸಿದರು.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments