"ಬಾಳ ಭಾವಯಾನ "

 "ಇದು ಬದುಕಿನ ಬಾಳಯಾನದ ಕವಿತೆ. ಬೆಳಕಿನ ಜೀವಗಾನದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ‌ ಹರಿವಿದೆ. ಅರ್ಥಗಳ‌ ವಿಸ್ತಾರವಿದೆ. ಬಾಳಯಾನವೆಂದರೆ  ಹೀಗೆ.. ಹೆದರಿದರೆ ದೂರ ತೀರ ಯಾನ. ಧೈರ್ಯ ದೃಢತೆಯಿರೆ ಸುಖ ಸೋಪಾನ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಬಾಳ ಭಾವಯಾನ.!


ಕಳೆದುಕೊಳ್ಳುವ ಕಳವಳ ತೊರೆದು

ಕರಗದೆ ಕೊರಗದೆ ಕನವರಿಸದೆ

ಕನಲದೆ ಕಂಗಾಲಾಗದೆ ಕಲ್ಲಾಗುತ

ಒಮ್ಮೆ ಅಚಲ ನಿಂತು ಬಿಡು ಗೆಳೆಯ.!


ಭಾಗ್ಯಕ್ಕಿಹುದು ಬಂದೇ ಬಪ್ಪುದು

ಬದುಕಿಗೆ ಬರೆದಿಹುದೆಂದು ತಪ್ಪದು

ಮತ್ತೇಕೆ ತಲ್ಲಣ ಚಡಪಡಿಕೆ ಅಧ್ಯಾಯ

ನೆಮ್ಮದಿ ನಿರಾಳವಾಗಿರಲಿ ಹೃದಯ.!


ಒಡಲೊಡೆದುಕೊಂಡರು ಕೇಳದು ಮೊರೆ

ಬೆಲೆ ಕಳೆದುಕೊಂಡಿದೆ ಕಂಬನಿ ಧಾರೆ

ಬಿಡು ಮರುಕ ಸಾಂತ್ವಾನ ನಿರೀಕ್ಷೆಯ

ಆಸ್ಥೆ ಅಂತಃಕರಣಗಳಿಗಿಲ್ಲ ಸಮಯ.!


ಇದು ಬರೀ ಮಾಯೆ ಮೋಹದಾಲಯ

ನೀ ಬರುವಾಗ ಹೋಗುವಾಗ ಬರಿಗೈ ಫಕೀರ

ಬಂಧ ಬೆಸುಗೆ ಬದುಕು ಸಕಲವೂ ನಶ್ವರ

ಇನ್ನೇಕೆ ಕಳೆದುಕೊಳ್ಳುವ ಆತಂಕ ಭಯ.!


ಸೋತಷ್ಟು ಸತಾಯಿಸುವ ಬುವಿಯಿದು

ನೊಂದಷ್ಟೂ ನೋಯಿಸುವ ಬಾಳಿದು

ಕುಗ್ಗಿ ಕುಸಿಯದೆ ದೃಢವಾಗಿಸು ಎದೆಯ

ಎದುರಿಸುತ ದಾಟಬಹುದು  ಇಳೆಯ.!


ಕ್ಷಣಕ್ಷಣದ ಆಸ್ವಾಧನೆಯಲ್ಲಿದೆ ಬದುಕು

ನಿತ್ಯ ನಿಶ್ಚಲ ಆರಾಧನೆಯಲ್ಲಿದೆ ಬೆಳಕು

ನೋಯದೆ ನರಳದೆ ಸಾಗಿಸು ನಡೆಯ

ಭಯ ಭ್ರಮೆಗಳೇಕೆ ಕುರಿತು ನಾಳೆಯ.!


ಬರೀ ನಾಲ್ಕುದಿನದ ಬಾಳ ಯಾನವಿದು

ಸರ್ವರಿಗು ಅವರವರ ಧ್ಯಾನವಿಹುದು

ಮುಗಿಸಿಬಿಡು ನಿನ್ನ ಪಾಲಿನ ಸಂತೆಯ

ಚಿಂತೆಯೇಕೆ ಕಾಯುವನು ಚಿನ್ಮಯ.!


ಎ.ಎನ್.ರಮೇಶ್. ಗುಬ್ಬಿ.


Image Description

Post a Comment

0 Comments