*ಮಗು ಮತ್ತು ಯುದ್ಧ*
ಮುಂಜಾನೆಯ ಸವಿನಿದ್ದೆಯಲ್ಲಿದ್ದ ನನಗೆ
ಯುದ್ಧ ಪೀಡಿತ ದೇಶದ
ಮನೆಯ ಮುಂದಿನ ದಟ್ಟವಾದ ಬೆಂಕಿಯ ಕೆನ್ನಾಲಿಗೆಯಲ್ಲಿ ಜನ್ಮನೀಡಿದವರು ದಹಿಸುವದ ಕಂಡು
ಎದುರು ನಿಂತ ಮಗುವಿನ ಆಕ್ರಂದನ ನನ್ನೆದೆಗೆ ಚೂರಿ ಹಾಕಿದಂತಾಯಿತು.
ಭುವಿಯ ಮೇಲಿನ ಬುದ್ಧಿಜೀವಿ ಕ್ರೂರಿ ಮಾನವನೇ
ನಿನ್ನೊಳಗಿನ ಯುದ್ಧ ಮನಸು
ಯಾರಿಗೆ ಸುಖ ನೀಡಬಲ್ಲದು ?
ಒಬ್ಬರನ್ನು ಕೊಂದು ಬದುಕುವುದು
ಮಾನವ ಧರ್ಮವೇ ?
ಹಿಂದೆ ನಡೆದ ಯುದ್ಧಗಳಿಂದ ಇನ್ನೂ ಪಾಠ ಕಲಿತಿಲ್ಲವೇ ?
ನೂರಾರು ಆಸೆ ಕನಸುಗಳನ್ನು ಹೊತ್ತು ಈ ಭೂಮಿಗೆ ಬಂದ ಮಗು
ತನ್ನ ಕಣ್ಣೆದುರಿಗೆ ಹೆತ್ತವರು ಸುಟ್ಟು ಬೂದಿಯಾಗುವುದ ಕಂಡು
ಅಂತರಂಗದಲ್ಲಿನ ಅದರ ತೊಳಲಾಟ
ಮಾನವನ ಕ್ರೂರತೆಗೆ ಎಷ್ಟು ನಲಗಿರಬಹುದು
ಒಂದು ಬಾರಿ ವಿಚಾರಿಸು ಯುದ್ಧ ಪೀಡಿತ ಮನಸ್ಸೇ
ಯಾರಿಗೋಸ್ಕರ ಈ ಯುದ್ಧ
ಕೇವಲ ನಿನ್ನ ಪ್ರತಿಷ್ಠೆಗಾಗಿ - ನಿನ್ನ ಹಠಕ್ಕಾಗಿ
ಪ್ರತಿಷ್ಠೆ ಹಠಕ್ಕಾಗಿ ಮೆರೆದಾಡಿದವರೆಲ್ಲಾ ಮಣ್ಣಾಗಿ ಹೋಗಿರುವದನ್ನು ನೀನಿನ್ನೂ ಇತಿಹಾಸದಿಂದ ಕಲಿತಿಲ್ಲವೇ?
ಹೋಗು ಒಂದು ಬಾರಿ ಯುದ್ಧದಿಂದಾದ ಪರಿಣಾಮಗಳ ಕುರಿತು ಓದಿ ಅರ್ಥ ಮಾಡಿಕೊಂಡು ಬಾ
ಮಗು ಹುಟ್ಟಿದಾಗ ಜಾತಿ ಮತ ಧರ್ಮಗಳ ಕಟ್ಟು ಪಾಡಿಲ್ಲ
ಬೆಳೆದಂತೆ ನಮ್ಮ ನಮ್ಮ ಧರ್ಮಗಳ
ಕಟ್ಟುಪಾಡುಗಳ ಹೇರಿ
ಅದರ ಆಸೆ- ಕನಸುಗಳಿಗೆ ಕೊಳ್ಳಿ ಇಟ್ಟೆವು
ವಿಶ್ವಮಾನವನಾಗಬೇಕಾಗಿರುವವನನ್ನು
ಅಲ್ಪಮಾನವನನ್ನಾಗಿ ಮಾಡಿದೆವು
ಒಮ್ಮೆ ಆಲೋಚಿಸಿ ನೋಡಿ
ನಿಜವಾದ ಧರ್ಮ
ಮನುಷ್ಯ ಮನುಷ್ಯರನ್ನು ಪ್ರೀತಿಸುವದರಲ್ಲಿದೆ
ಯಾರೋ ಮಾಡಿದ ತಪ್ಪಿಗೆ ಏನೂ ಅರಿಯದ ಅಮಾಯಕರ ಬಲಿ ಪಡೆದು
ಗೆದ್ದೆವೆಂಬ ಅಹಂಕಾರ ಸಲ್ಲದು.
ಗೆಲ್ಲುವುದಾದರೇ ಜನರ ಮನಸ್ಸನ್ನು ಗೆಲ್ಲಿ
ಪ್ರೀತಿ ಸೌಹಾರ್ದತೆಯೇ ನಿಜವಾದ ಮಾನವಧರ್ಮ
ಯುದ್ಧ ಪಿಪಾಸುಗಳಿಗೆ ನನ್ನದೊಂದು ಪ್ರಶ್ನೆ
ಯುದ್ಧ ಗೆದ್ದು ಇತಿಹಾಸದಲ್ಲಿ ಉಳಿಯಬೇಕೆಂಬ ನಿಮ್ಮ ಹಪಾಹಪಿ ಯುದ್ಧದಲ್ಲಿ ಜೀವ ಕಳೆದುಕೊಂಡವರ
ಪ್ರಾಣಕ್ಕೆ ಪ್ರತಿಯಾಗಿ ನೀವು ಏನನ್ನೂ ನೀಡಿದರೂ ಅವರ ಜೀವಕ್ಕೆ ಸಮವಾದೀತೆ ?
ಯುದ್ಧ ನಿಲ್ಲಿಸಿ ಜೀವ ಉಳಿಸಿ
ಯುದ್ಧ ನಿಲ್ಲಿಸಿ ಜೀವ ಉಳಿಸಿ
✍️ ಶಿವಕುಮಾರ ಕೋಡಿಹಾಳ
ಮೂಡಲಗಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments