*ಶರಣಾಗತಿ*

 "ಇದು ನಮ್ಮ ನಿಮ್ಮದೇ ಬದುಕು ಭಕ್ತಿಗಳ ಕವಿತೆ. ಆ ಅಗೋಚರ ಅದೃಶ್ಯ ಶಕ್ತಿಯೆದುರು ಬೆಳಕಿಗಾಗಿ ಬಾಗಿ ಬೇಡುವ ಜೀವದ ಭಾವಗೀತೆ. ಕಳೆದ ವಾರದ ತಿರುಪತಿ-ತಿರುಮಲದಲ್ಲಿನ ಪಯಣ. ಅಲ್ಲಿ ಕಂಡ ಭಕ್ತಿ-ಭಾವಗಳ ದಿವ್ಯ ರಿಂಗಣ. ಮನದಲ್ಲಿ ಮಾರ್ದನಿಸುತ್ತಲೇ ಇತ್ತು. ಆ ಪುಣ್ಯ ಕ್ಷೇತ್ರದ ಪ್ರಭಾವ, ಅನುಭಾವಗಳ ಮೂರ್ತರೂಪವೇ ಈ ಕವಿತೆ. ಪರಿಪೂರ್ಣ ಪ್ರೀತಿಯಿಂದ, ಪ್ರಾಂಜಲ ಹೃನ್ಮನಗಳಿಂದ ಭಗವಂತನೆದುರು ಸಂಪೂರ್ಣ ಶರಣಾದಾಗ ಮೂಡುವ ಪ್ರತಿಜೀವದ ಹೃದ್ಯಗೀತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


ಶರಣಾಗತಿ.!


ಮುಡಿ ಕೊಟ್ಟು ಓಲೈಸುವರು

ಮಡಿ ಉಟ್ಟು ಓಲೈಸುವರು

ಹಲವು ಮುಡುಪಿಟ್ಟು ಓಲೈಸುವರು

ನೂರಾರು ನುಡಿ ಕಟ್ಟಿ ಓಲೈಸುವರು

ಮಡಿ ಮುಡಿ ನುಡಿ ಮುಡಿಪುಗಳಿಡದ

ಪರಮ ಪಾಮರ ಭಕುತನು ನಾನು

ಹೇಗೆ ಒಲಿಸಿಕೊಳ್ಳಲೋ ಗೋವಿಂದ.!


ಅಂದದ ಪದ ಹಾಡಿ ಆರಾಧಿಸುವರು

ಚೆಂದದ ನೃತ್ಯ ಮಾಡಿ ಆರಾಧಿಸುವರು

ನಿತ್ಯವೂ ಕಾವ್ಯ ಬರೆದು ಆರಾಧಿಸುವರು

ಸತತ ಮಂತ್ರ ವಾಚಿಸಿ ಆರಾಧಿಸುವರು

ಪದ ನೃತ್ಯ ಮಂತ್ರ ಕಾವ್ಯಗಳರಿಯದ

ಮರುಳ ಮೂಡ ಸೇವಕನು ನಾನು

ಹೇಗೆ ಆರಾಧಿಸಲೋ ಮುಕುಂದ.?


ಹಗಲಿರುಳು ಜಪ ಮಾಡಿ ಮೆಚ್ಚಿಸುವರು

ವರ್ಷಗಟ್ಟಲೆ ತಪ ಮಾಡಿ ಮೆಚ್ಚಿಸುವರು

ಪಾದಯಾತ್ರೆಗಳ ಮಾಡಿ ಮೆಚ್ಚಿಸುವರು

ಭಾರಿಜಾತ್ರೆ ಮಾಡಿ ನಿನ್ನ ಮೆಚ್ಚಿಸುವರು

ಜಪ ತಪ ಜಾತ್ರೆ ಯಾತ್ರೆಗಳರಿಯದ

ದೀನ ದುರ್ಬಲ ಅಲ್ಪನು ನಾನು

ಹೇಗೆ ಮೆಚ್ಚಿಸಲೋ ಶ್ರೀವೆಂಕಟೇಶ.?


ಧನ ಕನಕಗಳ ಅರ್ಪಿಸಿ ಒಲಿಸುವರು

ವಜ್ರ ವೈಢೂರ್ಯಗಳನಿಟ್ಟು ಒಲಿಸುವರು

ವಸ್ತ್ರ ಅನ್ನದಾನ ಮಾಡಿ ಒಲಿಸುವರು

ಸಕಲ ಸರ್ವ ಸೇವೆಗಳಿಂದ ಒಲಿಸುವರು

ಧನ ಕನಕ ವಜ್ರ ವೈಢೂರ್ಯಗಳಿರದ

ಭಿಕ್ಷಾಪಾತ್ರೆ ಹಿಡಿದ ಕಡುಬಡವ ನಾನು

ಹೇಗೆ ಒಲಿಸಿಕೊಳ್ಳಲೋ ತಿರುಮಲೇಶ.?


ನೀನಿಟ್ಟ ಕಾಯಕ, ನೀ ಕೊಟ್ಟ ಕಾಯ

ನೀನಿಟ್ಟ ಬೆಳಕು, ನಿನ್ನದೇ ಈ ಬದುಕು

ನನ್ನದೇನಿದೆ ನೀನೇ ಕಾರಣ ಸಕಲಕು

ನಿನ್ನಡಿಗೆ ಜೀವ-ಭಾವಗಳ ಅರ್ಪಿಸುತ

ಸಂಪೂರ್ಣ ಸಮರ್ಪಣೆ ಶರಣಾಗತಿ

ಭಕ್ತಿಯೋ? ಶಕ್ತಿಯೋ? ಮುಕ್ತಿಯೋ?

ದರ್ಶನವೋ? ಮೋಕ್ಷವೋ? ಸಕಲ ನಿನ್ನಾಣತಿ.!


ಎ.ಎನ್.ರಮೇಶ್.ಗುಬ್ಬಿ.


Image Description

Post a Comment

0 Comments