ನಡೆದಾಡುತಿವೆ ಸುಟ್ಟ ದೇಹಗಳು
ಮನಸು ಮನದ ಮಾತು ಕೇಳದೆ
ಒಳ ಒಳಗೆ ಪರಿತಪಿಸುತಿದೆ
ಸಾಂತ್ವನವೂ ಕೂಡಾ ದೂರ ದೂರ
ಗೊಂದಲಗೂಡಿನ ಆ ಕ್ಷಣಕೆ
ದೂರಲೂ ಬರುವುದಿಲ್ಲಾ ಯಾರನ್ನು
ಸ್ವಯಂಕೃತ ಈ ಅವಘಡಕೆ
ಪರಿಹಾರದ ಹಾದಿಯೂ ಈಗ
ಕಾಣದಷ್ಟು ಮಸುಕು ಮಸಕು
ತಾಪದ ಜ್ವಾಲೆಯಲ್ಲಿ ಉರಿದು
ಧಗ ಧಗಿಸಿ ಸುಡುತ್ತಿದ್ದರೂ
ತೋರಿಸದೇ ನಗುತ್ತ ನಡೆದು
ಬೂದಿಯ ಮುಚ್ಚಿಡುವ ಪಾಡು
ಮಾತಿನ ಮನೆಗೆ ಮೌನದ ಬೀಗ
ಮನೆಯೊಳಗೆ ನಾವು ಇದ್ದರೂ
ಸುಟ್ಟರೂ ಇಲ್ಲದ ಧೂಮಕೆ
ಬೀಗದ ಮನೆಗೆ ಬರುವರಾರು
ಕ್ಷಣ ಕ್ಷಣವೂ ಯುಗದ ಭಾಸ
ಮನಸಿನೊಳಗೆ ಮನಸಿನ ಜಗಳ
ದಹಿಪ ದೇಹವ ಶಮನಗೊಳಿಸಲು
ಕಂಬನಿಗೂ ಕೂಡಾ ನೀರಿನ ಬರ
ಸುಡುವ ದೇಹ ನಡೆದಾಡುತಿದೆ
ಅತ್ತ ಇತ್ತ ಅಲೆದಾಡುತ
ಜಗಕೆ ಎಲ್ಲ ಮರಿಸಿ
ತನ್ನ ತನವೇ ಇಲ್ಲದಾಗಿಸಿ
ಸುಟ್ಟರೂ ಕರಕಾಗದ ದೇಹದಿ
ವಾಸಿಯಾಗದೇ ಮೌನದಿ ಸಹಿಸಿ
ನಗುವಿನ ಮುಖವಾಡದೊಳಗೆ
ನಡೆದಾಡುತಿವೆ ಸುಟ್ಟ ದೇಹಗಳು
ಪ್ರಮೋದ ಜೋಶಿ
ಧಾರವಾಡ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments