*ಬದುಕೇ ಉತ್ಕೃಷ್ಟ, ಏನಂತೀರಾ...?

 "ಇಲ್ಲಿದೆ ಜೀವನದ ಮಾನ-ಸ್ವಾಭಿಮಾನಗಳ ಮಹತ್ವ ಸಾರುವ ಆರು ಹನಿಗವಿತೆಗಳು. ಜೀವದ ಆತ್ಮಾಭಿಮಾನದ ಬೆಳಕತತ್ವ ಬೀರುವ ಭಾವಪ್ರಣತೆಗಳು. ಅವರಿವರ ಓಲೈಸುತ, ನಮ್ಮತನ ಮಾರಿಕೊಂಡು, ಬೆಲೆಯಿಲ್ಲದೆ ನೂರು ವರ್ಷ ಬದುಕುವುದಕಿಂತ, ನಮ್ಮದೇ ಜೀವ-ಜೀವನದ ಸ್ವಂತಿಕೆಯ ಮುದ್ರೆಯೊತ್ತುತ, ಆತ್ಮಾಭಿಮಾನ ಉಳಿಸಿಕೊಂಡು ನಾಲ್ಕುದಿನ ಬದುಕುವುದೇ ಶ್ರೇಷ್ಟ. ಆ ಬದುಕೇ ಉತ್ಕೃಷ್ಟ


. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



1. ಸ್ವಂತಿಕೆ.!


ನಮ್ಮ ಬದುಕು 

ನಮ್ಮದೇ ಆಗಿರಬೇಕೆಂದರೆ..

ನಾವು ನಾವಾಗಿರಬೇಕು.!


***************


2. ಲೇಸು-ಸಲೀಸು.!


ವೃಥಾ ದಾಕ್ಷಿಣ್ಯಕೆ ಬಸಿರಾಗುವುದಕಿಂತ

ಧಾರ್ಷ್ಟ್ಯದಿ ಬಂಜೆಯಾಗಿರುವುದು ಲೇಸು.!

ಅವಡುಗಚ್ಚಿ ನುಂಗುತ ನರಳುವುದಕಿಂತ

ಧೈರ್ಯದಿ ಕಕ್ಕಿ ನಿರಾಳರಾಗುವುದು ಸಲೀಸು.!


**********************


3. ಪ್ರಾರ್ಥನೆ.!


ಸದಾ ಬಾಗುವ ಶಿರಕ್ಕಿಂತ

ಬೀಗುವ ಕರನೀಡು ಶಿವ

ಕನಿಕರದಿ ಹರಸುವುದಕಿಂತ

ಹೆಮ್ಮೆಯಲಿ ಹಾರೈಸಲಿ ಭವ.!


*****************


4. ಶವಯಾನ.!


ಅಡವಿಟ್ಟು ಆತ್ಮಾಭಿಮಾನ

ಬದಿಗಿಟ್ಟು ಸ್ವಾಭಿಮಾನ

ಹರಾಜಿಗಿಟ್ಟು ಮಾನಾಭಿಮಾನ

ಬದುಕುವುದೆಂತಹ ಜೀವನ?

ನಿತ್ಯ ಜೀವಚ್ಚವ ಯಾನ.!


********************


5. ಕೃತ್ರಿಮತೆ.!


ಇಷ್ಟವಿಲ್ಲದಿದ್ದರೂ ಅರಳಿಸುತ ಮೊಗ

ಸುಮ್ಮನೆ ಬೀರಲಾರೆ ಬಲವಂತದ ನಗೆ.!

ಮಾತಾಡುವ ಮನಸಿಲ್ಲದಿದ್ದರೂ ಒಳಗೆ

ತೋರಲಾರೆ ಸಿಹಿ ಸವಿನುಡಿ ಹೂರಗೆ.!


********************


6. ದುರಂತ.!


ಕಂಡವರ ಕನಿಕರದ

ಕಂಬನಿಯಲ್ಲೆ ಸುಖಿಸುವವರಿಗೆ

ಎದುರಿನವರ ಅನುಕಂಪದ

ಅಲೆಯಲ್ಲೆ ತೇಲುವವರಿಗೆ

ರುಚಿಸದು ಬೆವರಿನ ಸೆಲೆ

ತಿಳಿಯದು ಸ್ವಾಭಿಮಾನದ ಬೆಲೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments