"ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಬೆಳಕಿನ ಹಾದಿಯಲಿ ನಡೆಸುತ್ತಾ ಬಾಳು ಬೆಳಗುವ ಆಂತರ್ಯದ ನಿತ್ಯ ಸತ್ಯ ಭಾವಗೀತೆ. ಕೆಟ್ಟವರೆದುರು ನಮ್ಮೊಳಗಿನ ಒಳಿತನ್ನಾಗಲೀ, ನಿಕೃಷ್ಟರೆದುರು ನಮ್ಮಯ ಉತ್ಕೃಷ್ಟತೆಯನ್ನಾಗಲೀ ಕಳೆದುಕೊಳ್ಳಬಾರದು. ಬೆಂಕಿಯನ್ನು ನೀರಿನಿಂದ ನಂದಿಸುತ್ತಾರೆ ವಿನಃ ಬೆಂಕಿಯಿಂದಲ್ಲ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಸ್ಥಿರತೆ-ಘನತೆ.!
ಹಾವು ಕಚ್ಚೀತೆಂದು ನಾವು
ಹಾವನ್ನು ಕಚ್ಚಲಾದೀತೆ
ಹಾವಂತೆ ಬಾಯಿ ತುಂಬ
ವಿಷವನ್ನು ತುಂಬಿಕೊಳ್ಳಲಾದೀತೆ.?
ನಾಯಿ ಬೊಗಳೀತೆಂದು ನಾವು
ನಾಯಂತೆ ಬೊಗಳಲಾದೀತೆ
ನಾಯಂತೆ ಬೀದಿಯಲಿ ನಿಂತು
ಬಾಯಿ ಬಾಯಿ ಬಿಡಲಾದೀತೆ.?
ಹಂದಿ ಕೆಸರೆರೆಚೀತೆಂದು ನಾವು
ಹಂದಿಗೆ ಕೆಸರೆರಚಲಾದೀತೆ.?
ಹಂದಿಯಂತೆ ಕೆಸರೊಳಗೆ ಬಿದ್ದು
ಎಲ್ಲರೆದುರು ಹೊರಳಾಡಲಾದೀತೆ.?
ಹಾವು ಹಂದಿ ನಾಯಿಗಳಿಂದ
ನಮ್ಮ ಬೆಲೆಯೆಂದು ಕುಸಿಯದು
ನಾವು ಹಂದಿ ನಾಯಿಗಳಂತೆ
ಆಡಿದರಷ್ಟೆ ನಮ್ಮ ಮೌಲ್ಯ ಮಣ್ಣಾದೀತು.!
ನೋಯಿಸುವರ ನೋಯಿಸಲೇಬೇಕೆಂದಿಲ್ಲ
ಕ್ಷುಲ್ಲಕರೆದುರು ಕ್ಷುಲ್ಲಕರಾಗಬೇಕಿಲ್ಲ
ಕಟುಕರೆದುರು ಕಟುಕರಾಗಬೇಕಿಲ್ಲ
ನಾವು ನಮ್ಮತನ ಬಿಟ್ಟುಕೊಡಬೇಕಿಲ್ಲ
ವಿಧ ವಿಧ ವ್ಯಕ್ತಿತ್ವ, ಸಂಸ್ಕೃತಿ, ವಿಕೃತಿ
ಇದುವೆ ಯುಗಧರ್ಮ, ಜಗ ಮರ್ಮ
ಬದಲಾಯಿಸಲು ನಾವ್ಯಾರು ನೀವ್ಯಾರು
ಸರಿಯಿರೆ ಸಾಕು ನಮ್ಮ ರೀತಿ-ನೀತಿ ಕರ್ಮ.!
ನಾವೆಂದು ನಾವಾಗಿರುವುದೇ ಶ್ರೇಷ್ಟತೆ
ವಿಚಲಿತವಾಗಬಾರದು ನಮ್ಮ ಕ್ಷಮತೆ
ಕಾಯ್ದುಕೊಂಡರೆ ಒಳಗಿನ ಸಮಗ್ರತೆ
ಹೊಳೆದೀತು ಜೀವದ ಜೀವನದ ಘನತೆ.!
ಎ.ಎನ್.ರಮೇಶ್.ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments