*ಸ್ವರ್ಣಗರಿಯ ತುಂಬಾ ವಚನ ಸಾಹಿತ್ಯದ ಸವಿನೆರಳು : ನಿಜ ಶರಣ ಆಯ್. ಆರ್ ಮಠಪತಿ *

 *'ಸ್ವರ್ಣಗರಿ'ಯ ತುಂಬಾ ವಚನ ಸಾಹಿತ್ಯದ ಸವಿನೆರಳು : ನಿಜ ಶರಣ ಆಯ್.ಆರ್.ಮಠಪತಿ* 


   *ರಾಯಬಾಗ:* ಸ್ತ್ರೀ ಪ್ರಜ್ಞೆಯನ್ನು ಬಡಿದೆಚ್ಚರಿಸುವ ಸಮಚಿತ್ತದಿಂದ ಮಹಿಳಾಪರ ಧ್ವನಿಯೆತ್ತುವ ಸ್ವರ್ಣಗರಿ ಸಮಾನತೆಯ ಸಿರಿಗರಿಯಾಗಿದೆಯೆಂದು ಡಾ.ಪ್ರಿಯಂವದ ಹುಲಗಬಾಳಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ˌರಾಯಬಾಗ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಹಾರೂಗೇರಿ ಪಟ್ಟಣದ  ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಡಾ.ರತ್ನಮ್ಮ ಬಾಳಪ್ಪನವರ ಸೃಜಿಸಿದ 'ಸ್ವರ್ಣಗರಿ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯಕಾರರಾಗಿ ಮಾತನಾಡಿದರು.ಡಾ.ದೇವಿಕಾ ನಗರಕರ ನವಿಲುಗರಿಗಳಿಂದ ಮುಚ್ಚಲ್ಪಟ್ಟ ಸ್ವರ್ಣಗರಿ ಹೊತ್ತಿಗೆಗೆ ಹೊಸಬೆಳಕು ಕಾಣಿಸಿ ಲೇಖಕಿಯೊಂದಿಗೆ ಸಂವಾದ ನಡೆಸಿಕೊಟ್ಟರು.ಸ್ತ್ರೀ ಪ್ರಜ್ಞೆ ಎಂದರೆ ಮಹಿಳೆಯರ ಶೋಷಣೆಯ ವಿರುದ್ದದ ಹರಿತ ಧ್ವನಿಯೆಂದು ಲೇಖಕಿ ಡಾ.ರತ್ನಮ್ಮ ಬಾಳಪ್ಪನವರ ಅಭಿಮತ ವ್ಯಕ್ತಪಡಿಸಿದರು.

 ಶರಣ ವಿಚಾರ ವಾಹಿನಿ ಅಧ್ಷಕ್ಷ ಆಯ್.ಆರ್.ಮಠಪತಿ ಸಾನಿಧ್ಯ ವಹಿಸಿ ಆಶೀರ್ವಾಣಿ ನೀಡುತ್ತಾ ಸ್ವರ್ಣಗರಿಯ ತುಂಬಾ ವಚನ ಸಾಹಿತ್ಯದಾಶಯದ ಸವಿನೆರಳು ದಟ್ಟವಾಗಿದೆಯೆಂದರು.ಭವದ ಬಿಡುಗಡೆಯ ಸರಳ ಮಾರ್ಗ ಅರುಹುತ್ತಾ ತಿಪ್ಪೆರುದ್ರಸ್ವಾಮಿ ವಿರಚಿತ 'ಕರ್ತಾರನ ಕಮ್ಮಟ' ಪುಸ್ತಕದ ಪ್ರಭಾವದಿಂದ ಶರಣ ತತ್ವಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗಿ ಅಮೃತ ಬದುಕಿಗೆ ರಹದಾರಿಯಾಯಿತೆಂದು ಹೇಳಿದರು.

ಪ್ರಾಚಾರ್ಯ ಆರ್.ಎಸ್.ಕಾಗವಾಡೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಗೆಲುವಿನ ಗೆರೆಯನ್ನು ಮುಟ್ಟಿಸುವಲ್ಲಿ ಸಫಲರಾದರು.ದೀಪಾ ಖೋತˌ ಸಿದ್ದು ಪತ್ತಾರˌ ವಿಠ್ಠಲ ಜೋಡಟ್ಟಿ ತಾವು ಮೆಚ್ಚಿದ ಪುಸ್ತಕಗಳನ್ನು ಪರಿಚಯಿಸಿ ಪುಸ್ತಕ ಪರಿಮಳ ಪಸರಿಸಿದರು.

   ಡಾ.ನಂದಿತಾ ಒಡೆಯರˌ ಕಾವ್ಯತೀರ್ಥ ಒಡತಿ ಲತಾ ಹುದ್ದಾರˌಸುವರ್ಣಾ ಬಡಿಗೇರˌಅನನ್ಯ ಸಂಘಟಕˌಕವಿ ಸಾಗರ ಝಂಡೆನ್ನವರˌರಾಯಬಾಗ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀಶೈಲ ಶಿರೂರರವರು ಕೃತಿಗಾರ್ತಿ ಡಾ.ರತ್ನಾ ಬಾಳಪ್ಪನವರ ಅವರನ್ನು 

ಸತ್ಕರಿಸಿ ಗೌರವಿಸಿದರು.

ಹಿರಿಯ ಸಾಹಿತಿ ಬಾಳಕೃಷ್ಣ ಜಂಬಗಿˌನೇಮಿನಾಥ ನಾಗನೂರˌಶ್ರಮ ಸಂಸ್ಕೃತಿಯ ವಾರಸುದಾರˌಸಂಘಟನೆಯ ಸಂಜೀವಿನಿ ಕಡ್ಡಿ ಸಂತೋಷ ತಮದಡ್ಡಿ ˌಟಿ.ಎಸ್.ವಂಟಗೂಡಿˌಶ್ರೀಧರ ಹೊಳಕರ ˌಪ್ರಭಾಕರ ಸರ್ ಉಪಸ್ಥಿತರಿದ್ದರು.ಕ.ಸಾ.ಪˌರಾಯಬಾಗ ಅಧ್ಯಕ್ಷ ರವೀಂದ್ರ ಪಾಟೀಲ ಸ್ವಾಗತ ನುಡಿ ನವಿಲುಗರಿ ಕುಣಿಸಿದರು.ಕುಮಾರಿ ಶಿಲ್ಪಾ ಬನಸೋಡೆ ಕಾರ್ಯಕ್ರಮದ ದಿಕ್ಸೂಚಿಯಾದರು.ಶಿಕ್ಷಕ ಎಮ್.ಎಸ್.ಬಳವಾಡ ಕೃತಜ್ಞತಾ ನುಡಿಪುಷ್ಪ ಸಮರ್ಪಿಸಿದರು.ಜಿಲೆಬಿ ಸವಿ ಚಪ್ಪರಿಸುತ್ತಾ ಕಾರ್ಯಕ್ರಮದ ಸವಿ ಸೌಂದರ್ಯ ಮೆಲುಕು ಹಾಕುತ್ತಾ ಕನ್ನಡ ಮನಸ್ಸುಗಳು ನಿರ್ಗಮಿಸಿದ್ದು ವಿಶೇಷವಾಗಿತ್ತು.


*ವರದಿ:ಡಾ.ಜಯವೀರ ಎ.ಕೆ*.

   *ಖೇಮಲಾಪುರ*


Image Description

Post a Comment

0 Comments