ಗಗನ ಕುಸುಮ (ಕಾದಂಬರಿ )ಸಂಚಿಕೆ 80

 ಗಗನ ಕುಸುಮ (ಕಾದಂಬರಿ) ಸಂಚಿಕೆ-೮೦


ಹಿಂದಿನ ಸಂಚಿಕೆಯಲ್ಲಿ


ಮಗುವಿಗೆ ಎಂಡೋಸ್ಕೋಪಿ    ಮಾಡಿಸಿದ್ದಾರೆ ಬಂದು ನೋಡಿಕೊಂಡು ಹೋಗೆಂದು ಸಂಜಯನಿಗೆ ಅವರಪ್ಪ ಹೇಳಿದರೂ ಸಂಜಯನು ಎಂಡೋಸ್ಕೋಪಿ ಅಷ್ಟೇ ತಾನೇ ಮಗು   ಬದುಕಿದೆಯಲ್ಲಾ ಎಂದು ಹೇಳಿ ಹೋಗುವುದೇ ಇಲ್ಲ


ಕಥೆಯನ್ನು ಮುಂದುವರೆಸುತ್ತಾ


ಸಂಜಯನ ತಿರಸ್ಕಾರದ ಮಾತುಕೇಳಿ  ಅವರಪ್ಪನಿಗೆ ಸಹಿಸಲಾರದ ಕೋಪ ಬರುತ್ತದೆ. ಯಾವತ್ತೂ ಮಗನನ್ನು ಮಾತನಾಡಿಸಬಾರದೆಂದು ನಿರ್ಧರಿಸುತ್ತಾರೆ.


ಮಾರನೇ ದಿನ ರಾತ್ರಿ ಹತ್ತುಗಂಟೆ ಸಮಯದಲ್ಲಿ ಸಂಜಯನಿಗೆ ಮೆಸೇಜ್ ಬಂದಿದ್ದು ಯಾರದ್ದೆಂದು ನೋಡಲು ಗಗನಳ ಮೆಸೇಜ್ ಆಗಿದ್ದರಿಂದ ತಕ್ಷಣ ಮೆಸೇಜ್ ಓದಿದಾಗ ಅದರಲ್ಲಿ ಈ ಲೊಕೇಶನ್ ಜೊತೆಗೆ ಮೆಸೇಜ್ ಇದ್ದು ಅದರಲ್ಲಿ ನಾಳೆ ಬೆಳಿಗ್ಗೆ ಹತ್ತು  ಗಂಟೆಗೆ ಕಳುಹಿಸಿರುವ ಲೊಕೇಶನ್ ಗೆ ಬಾ ಸಂಜಯ್ ಅಲ್ಲಿ ಎಲ್ಲರ ಆರೋಗ್ಯ ಕಾಪಾಡುವ ದೇವರ ದೇವಸ್ಥಾನವಿದೆ ನೀನು ಆ ದೇವಸ್ಥಾನ ನೋಡಿದ್ದೀಯೋ ಇಲ್ಲವೋ ಗೊತ್ತಿಲ್ಲ ಆದರೆ ಆ ದೇವಸ್ಥಾನಕ್ಕೆ ಖಾಯಿಲೆ ಇರುವ ಎಲ್ಲರೂ ಹೋಗುತ್ತಾರೆ ಅಲ್ಲಿ  ನೀಡುವ ತೀರ್ಥ ಪ್ರಸಾದಗಳಿಂದ ಎಲ್ಲರ ಖಾಯಿಲೆಗಳು ವಾಸಿಯಾಗುತ್ತದೆಂಬ ನಂಬಿಕೆ ಇದೆಯಂತೆ.  ಎಷ್ಟೋ ಜನ ಅಲ್ಲಿಗೆ ಬಂದು ಖಾಯಿಲೆ   ವಾಸಿ ಮಾಡಿಕೊಂಡು ಹೋಗಿದ್ದಾರಂತೆ ಅಲ್ಲಿಯೇ ನಮ್ಮಿಬ್ಬರ  ಮದುವೆಗೆ ಎಲ್ಲಾ ಏರ್ಪಾಟು ಮಾಡಿರುತ್ತೇನೆ ನೀನು ಮಧುಮಗನಂತೆ ಸಿಂಗರಿಸಿಕೊಂಡು ಬರಬೇಕು ಆಗ ನನಗೆ ತೃಪ್ತಿಯಾಗುತ್ತದೆ. ಆಗ ನಿನ್ನನ್ನು  ಆ ಉಡುಪಿನಲ್ಲಿ ನೋಡಿ ಕಣ್ತುಂಬಿಕೊಳ್ಳಬೇಕೆಂಬ ಆಸೆ. ಈ ವಿಷಯ ಯಾರಿಗೂ ಹೇಳಬೇಡ. ಅಲ್ಲಿ ನಿನ್ನ ಸಹಾಯಕ್ಕೆ ಚೇತನ್ ಗೆ ಹೇಳಿರುತ್ತೇನೆ ಅವನೇ ಎಲ್ಲಾ ಏರ್ಪಾಡು ಮಾಡಿರುತ್ತಾನೆ. ನಿನಗೆ ಫೋನ್ ಮಾಡಲು ಆಗುತ್ತಿಲ್ಲ. ತಡ ಮಾಡಿದರೆ ನಮ್ಮಪ್ಪ ಅವರ ಸಹಚರರೊಂದಿಗೆ ವಾಹನದಲ್ಲಿ ಸಾಗಿಸಿಕೊಂಡು ಮನೆಗೆ ಹೋಗಿ ನಿನಗೆ ನನ್ನ ಮುಖ ನೋಡಲು ಸಿಗದಂತೆ ಮಾಡುತ್ತಾರೆಂದು ಅಪ್ಪ ಮಗ ಮಾತನಾಡಿಕೊಳ್ಳುತ್ತಿದ್ದಾರಂತೆ ಆದಷ್ಟೂ ಬೇಗ ಬಂದರೆ ಒಳ್ಳೆಯದು . ಆ ದೇವಸ್ಥಾನದವರು  ಭವಿಷ್ಯವನ್ನೂ ನುಡಿಯುತ್ತಾರಂತೆ ನಾಳೆ ಬೆಳಿಗ್ಗೆ ಹನ್ನೊಂದು ಗಂಟೆ ಒಳಗೆ ನನಗೆ ಮುಹೂರ್ತ ಇಟ್ಟಿದ್ದಾರೆ ಅಕಸ್ಮಾತ್ ಆ ವೇಳೆ ಮೀರಿಹೋದರೆ ನಿನಗೆ ನಾನು ಯಾವತ್ತೂ ಸಿಗುವುದಿಲ್ಲವೆಂದು ಭವಿಷ್ಯವನ್ನು ಹೇಳಿದ್ದಾರೆ.  ಅಷ್ಟರೊಳಗೆ ಬಂದು ಬಿಡು ನನಗೂ ಸಂತೋಷವಾಗುತ್ತದೆ . ಬರುವಾಗ ನನಗೆ ಇಷ್ಟವಾದ ಮಲ್ಲಿಗೆಯ ಹಾರಗಳನ್ನು ತರಲು ಮರೆಯಬೇಡ ಬಹುಷಃ ನನ್ನಿಂದ ನಿನ್ನ ಪ್ರೇಯಸಿಯಾಗಿ ಕಳುಹಿಸಿರುವ ಇದೇ ಕಡೇ ಮೆಸೇಜ್ ಆಗಬಹುದು . ತಪ್ಪು ತಿಳಿಯಬೇಡಾ ಏಕೆ ಈ ರೀತಿ ಬರೆಯುತ್ತಿದ್ದೇನೆಂದರೆ ನಾನು ನಾಳೆಯಿಂದ ನಿನ್ನ ಪ್ರೇಯಸಿಯಾಗಿರುವುದಿಲ್ಲ ನಿನ್ನ ಪತ್ನಿಯಾಗುತ್ತೇನೆ ಪ್ರೇಯಸಿಯಾಗಿ ಮೆಸೇಜ್ ಮಾಡುವುದಿಲ್ಲ ಅದಕ್ಕೆ ಈ ರೀತಿಯ ಮೆಸೇಜ್ ಎಂದು ಹೇಳಿದ್ದೇನೆ. ನಾಳೆ ಆದಷ್ಟೂ ಬೇಗನೇ ಬಾ ನಿನ್ನನ್ನೇ ಎದುರು ನೋಡುತ್ತಿರುತ್ತೇನೆ ಗುಡ್ ನೈಟ್ ಎಂದು ಮೆಸೇಜ್ ಕಳುಹಿಸಿರುತ್ತಾಳೆ.

ಅಯ್ಯೋ ಈಗೇನು ಮಾಡಲಿ? ಬೆಳಿಗ್ಗೆಯೇ ಹೇಳಿದ್ದರೆ ಒಳ್ಳೆಯ ಡ್ರೆಸ್ ಖರೀದಿಸಬಹುದಿತ್ತು ಇವಳೇನು ಈಗ ಮೆಸೇಜ್ ಕಳುಹಿಸಿದ್ದಾಳೆ ಫೋನ್ ಮಾಡಿದ್ದರೆ ಅವಳ ಇಷ್ಟದ ಡ್ರೆಸ್ ಯಾವುದೆಂದು ಕೇಳಿ ಅದನ್ನೇ ಹಾಕಿಕೊಳ್ಳಬಹುದಿತ್ತು ಎಂದುಕೊಂಡು ಒಂದು ನಿಮಿಷ ಯೋಚಿಸಿ ಹ್ಞಾಂ ಮಧುಮಗನ ಡ್ರೆಸ್ ಎಂದು ಹೇಳಿದ್ದಾಳೆಂದು ಒಳ್ಳೆಯ ಪಂಚೆ ಬಿಳಿ ಶರ್ಟು ಹೊದ್ದುಕೊಳ್ಳಲು ಶಲ್ಯ ಸೆಂಟ್ ಚಿನ್ನದ ಸರ ಕೈಗೆ ಬ್ರಾಸ್ ಲೈಟ್ ಎಲ್ಲವನ್ನೂ ತೆಗೆದಿಟ್ಚುಕೊಂಡು ಇದರ  ಜೊತೆಗೆ ಗಗನಳಿಗೆ ಕೊಡಲು ಕುಸುಮಳಿಗೆಂದು ಎಂ ಜಿ ರಸ್ತೆಯಲ್ಲಿ ಖರೀದಿಸಿದ್ದ ಸೀರೆಯನ್ನು ಇಟ್ಟುಕೊಳ್ಳುತ್ತಾನೆ

ಬೆಳಿಗ್ಗೆಯೇ ಹೇಳಿದ್ದರೆ ಗಗನಳಿಗೆ ನಕ್ಲೇಸ್ ಖರೀದಿಸಿ ಸರ್ಪ್ರೈಸ್ ಕೊಡಬಹುದಿತ್ತೆಂದು ಪಶ್ಚಾತ್ತಾಪ ಪಡುತ್ತಾ ಹಾಗೇ ಮಲಗಿದ್ದು  ಈಗಲೇ ಚೇತನ್ ಗೆ ಫೋನ್ ಮಾಡಿ ಎಲ್ಲಾ ಏರ್ಪಾಡು ಆಗುತ್ತದಾ ನಾನು ಏನಾದರೂ ತರಬೇಕಾ ಎಂದು ಕೇಳಲಾ ಎಂದು ಮೊಬೈಲ್ ಆನ್ ಮಾಡುವ ಮುಂಚೆ ಕೈ ಗಡಿಯಾರ ನೋಡಲು ಮದ್ಯರಾತ್ರಿ ಒಂದು ಗಂಟೆಯಾಗಿರುತ್ತದೆ.

ಈಗ ಫೋನ್ ಮಾಡುವುದು ಬೇಡವೆಂದುಕೊಂಡು ಮಲಗಿದರೂ ನಿದ್ದೆ ಬರುವುದೇ ಇಲ್ಲಾ ಕಣ್ಣು ಮುಚ್ಚಿದರೆ ಗಗನಳ ಚಿತ್ರವೇ ಕಣ್ಣುಮುಂದೆ ನಿಂತಂತಾಗುತ್ತಿರುತ್ತದೆ ಗಗನಳೊಂದಿಗಿನ ಒಡನಾಟ ಅವಳ ಮಾತು ನಗು ಎಲ್ಲವನ್ನೂ ಜ್ಞಾಪಿಸಿಕೊಳ್ಳುತ್ತಾ ಮಾರನೇ ದಿನ ನಾನು ಗಗನಳಿಗೆ ತಾಳಿ ಕಟ್ಟಿದ ತಕ್ಷಣ ಗಗನ ನನ್ನ ಪತ್ನಿಯಾಗುವ ಸನ್ನಿವೇಶವು ಹೇಗಿರುತ್ತದೋ ಎಂದು  ರೋಮಾಂಚನಗೊಳ್ಳುತ್ತಾನೆ. ಅದೇ ನೆನಪಿನಲ್ಲಿ ನಿದ್ದೆಗೆ ಜಾರುತ್ತಾನೆ

ಮಾರನೇ ದಿನ ಸಂಜಯನಿಗೆ ಎಚ್ಚರವಾಗುವ ವೇಳೆಗೆ ಬೆಳಿಗ್ಗೆ ಆರುಗಂಟೆಯಾಗಿರುತ್ತದೆ ತಕ್ಷಣ ಎದ್ದು ಮುಖ ತೊಳೆದು ಹೊರ ಬಂದಾಗ 

ಯಜಮಾನ್ರೇ ಕಾಫಿ ತೆಗೆದುಕೊಳ್ಳಿ ಎಂದು ಹೇಳಿ ಕೆಲಸಗಾರಳು ಕಾಫಿ ಕೊಟ್ಟಾಗ 

ರೂಮಿಗೆ ಹೋಗಿ ಬೇಗನೆ ಕಾಫಿ ಕುಡಿದು ತನ್ನ ಮುಖ ನೋಡಿ ಗಗನ ದೂರವಾದಾಗಿನಿಂದ ಮುಖ ಕ್ಷೌರವನ್ನೇ ಸರಿಯಾಗಿ ಮಾಡಿಕೊಂಡಿಲ್ಲವೆಂದು ನೀಟಾಗಿ ಮುಖ ಕ್ಷೌರ ಮಾಡಿಕೊಂಡು ಸ್ನಾನ ಮಾಡಿ ಹೊರಬಂದಾಗ ಒಂಬತ್ತು ಗಂಟೆಯಾಗಿರುತ್ತದೆ 

ಯಜಮಾನ್ರೇ ತಿಂಡಿ ತಿನ್ನುತ್ತೀರಾ ಎನ್ನಲು

ಕುಸುಮಳ ಮದುವೆಯ ದಿನ ಬೆಳಿಗ್ಗೆ ಹಾಲು ಮಾತ್ರ ಕುಡಿದು ತಾಳಿ ಕಟ್ಟುವವರೆಗೂ ಏನೂ ತಿನ್ನದೆ ಇದ್ದದ್ದು ಜ್ಞಾಪಕಕ್ಕೆ ಬಂದು   ಬೇಡಾ ಈದಿನ ನನಗೆ ಒಂದು ಲೋಟ ಹಾಲು ಕೊಡಿ ಸಾಕೆಂದು ಹೇಳಿ ಹಾಲು ಮಾತ್ರ ಕುಡಿದು ರೂಮಿಗೆ ಬಂದು ಹಿಂದಿನ ರಾತ್ರಿ ತೆಗೆದಿಟ್ಟಿದ್ದ ಬಟ್ಟೆಯನ್ನು ಧರಿಸಿ ಚಿನ್ನದ ಸರ  ಕೈಗೆ ಬ್ರಾಸ್ ಲೈಟ್ ಹಾಕಿಕೊಂಡು ಬೀರುವಿನಲ್ಲಿದ್ದ ಸೀರೆಯನ್ನು ತೆಗೆದುಕೊಂಡು ರೂಮಿನಿಂದ ಹೊರಬಂದು ಅಲ್ಲೇ ಇದ್ದ ಕೆಲಸಗಾರಳಿಗೆ ಮದ್ಯಾಹ್ನ ನಾವು ಬರುವ ವೇಳೆಗೆ ಅರತಿ ರೆಡಿ ಮಾಡಿರಿ ಎಂದಾಗ

ಇದೇನು ಯಜಮಾನ್ರೇ ಆರತಿ ಏಕೆ ಎನ್ನಲು

ಇಂದು ಹೊಸದಾಗಿ ನವ ದಂಪತಿಗಳು ಮನೆಗೆ ಬರುತ್ತಾರೆಂದಾಗ

ಆಗಬಹುದು ಯಜಮಾನ್ರೇ ಎಂದ ನಂತರ ಮನೆಯಿಂದ ಹೊರಗೆ ಬಂದು ಕಾರಲ್ಲಿ ಕುಳಿತು ಮೊಬೈಲ್ ನೋಡಿ ಗಗನ ಕಳುಹಿಸಿದ್ದ ಲೊಕೇಶನ್ ನಂತೆ ಕಾರನ್ನು ಚಲಾಯಿಸುತ್ತಾ  ಕೈ ಗಡಿಯಾರ ನೋಡಿಕೊಂಡು ಓ ಆಗಲೇ ಹತ್ತುಗಂಟೆಯಾಗುತ್ತಿದೆ  ಬೇಗ ಹೋಗಬೇಕೆಂದು ಕಾರನ್ನು ಸ್ವಲ್ಪ ವೇಗದಿಂದ ಲೊಕೇಶನ್ ನಲ್ಲಿ ಮಾರ್ಗ ತೋರಿಸಿದಂತೆ ಹೋಗುತ್ತಾನೆ ಲೊಕೇಶನ್ ಅಂತಿಮ ಹಂತ ತಲುಪಿದರೂ ಅಲ್ಲಿ ಯಾವ ದೇವಸ್ಥಾನಗಳು ಇರುವುದಿಲ್ಲ 

ಇದೇನು ಗಗನ ನನಗೆ ಸುಳ್ಳು ಹೇಳಿದ್ಲಾ? ಯಾವಾಗಲೂ ಇವಳು  ಹೀಗೇಕೆ ಮಾಡುತ್ತಿದ್ದಾಳೆಂದು ತಕ್ಷಣ ಫೋನ್ ಮಾಡಿದರೂ ಗಗನಳ ಫೋನ್ ಸ್ವಿಚ್ ಆಫ್ ಎಂದು ಬರುತ್ತದೆ ಛೇ ಕಡೆಗೂ ನನಗೆ ಮೋಸ ಮಾಡಿದಳೆಂದು ತಡೆಯಲಾರದ ಕೋಪ ಬರುತ್ತದೆ. ಇಲ್ಲಾ ಇಲ್ಲಾ ಅವರಪ್ಪ ಫೋನ್ ಮಾಡುತ್ತಾರೆಂದು ಸ್ವಿಚ್ ಆಫ್ ಮಾಡಿಕೊಂಡಿರಬಹುದೆಂದುಕೊಂಡು ಒಂದು ಸಲ ಚೇತನ್ ಗೆ ಫೋನ್ ಮಾಡಿದ್ರೆ ವಿಷಯ ತಿಳಿಯುತ್ತದೆಂದು   ತಕ್ಷಣ  ಚೇತನ್ ಗೆ ಫೋನ್ ಮಾಡಿದಾಗ

ಎಲ್ಲಿದ್ದೀಯಾ ಸಂಜಯ್ ಎನ್ನಲು 

ತಾನು ಬಂದಿದ್ದ ಲೊಕೇಶನ್ ಹೇಳುತ್ತಾನೆ

ಅಲ್ಲೇ ಇರು ಬರುತ್ತೇನೆಂದು ಹೇಳಿದ ಐದು ನಿಮಿಷದಲ್ಲಿ 

ಸಂಜಯನು ಇರುವಲ್ಲಿಗೆ ಬಂದಾಗ 

ಸಂಜಯನು ಕಾರಿನಿಂದ ಇಳಿಯದೆ ಚೇತನ್ ನನ್ನು ನೋಡಿದ ತಕ್ಷಣ ಮನಸ್ಸಿಗೆ ಖುಷಿಯಾಗುತ್ತದೆ ಗಗನ ಹೇಳಿದ್ದು ಸರಿಯಾಗಿದೆ ಚೇತನ್ ಗೆ ಹೇಳಿ ಮದುವೆಗೆ ಅರೇಂಜ್ ಮಾಡಿಸಿದ್ದಾಳೆ ಥ್ಯಾಂಕ್ಸ್ ಗಗನಾ ಎಂದುಕೊಳ್ಳುತ್ತಾನೆ

ಹಲೋ ಚೇತನ್ ನಾನು ಇಲ್ಲಿದ್ದೇನೆ ಎನ್ನುತ್ತಾ ಕಾರಿನಲ್ಲೇ ಕುಳಿತು ಕೈ ಬೀಸಿದಾಗ 

ಚೇತನ್ ಅವನ ಕಾರಿನ ಬಳಿ ಬಂದ ತಕ್ಷಣ 

ಹಲೋ ಚೇತನ್ ಬಾ ಕಾರಿನಲ್ಲಿ ಕುಳಿತುಕೋ ಎನ್ನಲು

ಚೇತನ್ ಕಾರಿನಲ್ಲಿ ಕುಳಿತ ತಕ್ಷಣ 

ಗಗನ ಎಲ್ಲವನ್ನೂ ಹೇಳಿ ಅರೇಂಜ್ ಮಾಡಿಸಿದ್ದಾಳಾ ಚೇತನ್ ಎನ್ನಲು

ಗಗನ ಮೇಡಮ್ ಏನೂ ಮಾಡಿಸಿಲ್ಲ ಎಲ್ಲಾ ಅವರಪ್ಪ ತಮ್ಮ ಇಬ್ಬರೇ ಬೆಳಿಗ್ಗೆಯಿಂದ ಕಾದಿದ್ದಾರೆ

ಓ ಕೆ ಅವರಪ್ಪನಿಗೂ ವಿಚಾರ ಗೊತ್ತಾ?

ಗೊತ್ತಿಲ್ಲದೆ ಇಲ್ಲಿಗೆ ಬಂದಿದ್ದಾರಾ? ಸಂಜಯ್ 

ಇನ್ನೂ ಎಷ್ಟು ದೂರ ಹೋಗಬೇಕು ಎನ್ನಲು

ಎಲ್ಲಿಗೆ ಸಂಜಯ್ ಎಂದಾಗ

ಸಂಜಯನು ತನಗೆ ಗಗನ ಕಳುಹಿಸಿದ್ದ ಮೆಸೇಜ್ ಓಪನ್ ಮಾಡಿ ಇದನ್ನು ನೀನೇ ಓದಪ್ಪಾ ಎಲ್ಲವೂ ತಿಳಿಯುತ್ತದೆಂದು ಮೊಬೈಲನ್ನು ಚೇತನ್ ಗೆ ಕೊಡುತ್ತಾನೆ

ಚೇತನ್ ಮೆಸೇಜ್ ಓದಿ ಮೌನವಾಗುತ್ತಾನೆ

ಏನಾಯ್ತು ಚೇತನ್ ಏಕೆ ಮೌನವಾದೆ? ಮಾತಾಡು ಗಗನ ಎಲ್ಲಿ ಅರೇಂಜ್ ಮಾಡಿದ್ದಾಳೆ ಇಲ್ಲಿ ನೋಡಿದರೆ ಯಾವ ದೇವಸ್ಥಾನವೂ ಇಲ್ಲಾ

ಚೇತನ್ ಮಾತನಾಡದೆ ಎದುರಿಗೆ ಕೈ ತೋರಿಸಿ ಅಲ್ಲೇ ಗಗನ ಮೇಡಮ್ ಇದ್ದಾರೆ ಎಂದಾಗ

ಲೋ ಚೇತನ್ ಅದೇನು ದೇವಸ್ಥಾನವಾ?

ಆ ಕಟ್ಟಡದ ಹಿಂಭಾಗ ಹೋದರೆ ದೇವಸ್ಥಾನವಿದೆ ಹಾಗೆಂದಿದ್ದರೆ ಕಾರಿನಲ್ಲೇ ಪಕ್ಕದ ರಸ್ತೆಗೆ ಹೋಗಬಹುದಿತ್ತಲ್ಲಾ?

ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಇಲ್ಲೇ ಕಾರು ಪಾರ್ಕಿಂಗ್ ಮಾಡಿ ಕಾರಿನಿಂದ ಇಳಿ ಗಗನ ಇರುವಲ್ಲಿಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿದಾಗ 

ತನ್ನ ಕನಸು ನನಸಾಯಿತೆಂದು ಸಂಜಯನ ಮನಸ್ಸಿನೊಳಗೆ ಅಗಾಧವಾದ ಸಂತೋಷವಾಗಿರುತ್ತದೆ. ಈ ಸಂತೋಷವನ್ನು ಗಗನಳ ಮದುವೆಯಾದ ನಂತರ ಹಂಚಿಕೊಳ್ಳಬೇಕೆಂದುಕೊಳ್ಳುತ್ತಾನೆ 

ನಂತರ ಇಬ್ಬರೂ  ಕಾರಿನಿಂದ ಇಳಿದಾಗ ಚೇತನ್ ಮೌನವಾಗಿ ಮುಂದೆ ನಡೆಯುತ್ತಿದ್ದು ಸಂಜಯ ಅವನನ್ನು ಹಿಂಬಾಲಿಸುತ್ತಿರುತ್ತಾನೆ 


ಮುಂದುವರೆಯುತ್ತದೆ


ಡಾ. ಎನ್ ಮುರಳೀಧರ್ 

ವಕೀಲರು ಹಾಗೂ ಸಾಹಿತಿ 

ನೆಲಮಂಗಲ


Image Description

Post a Comment

0 Comments