ಮನಸ್ಸೆಂಬ ಮಹಾಚಂಚಲ

 ಮನಸ್ಸೆಂಬ ಮಹಾಚಂಚಲ ...

--------------------------

ಈತ ಮಹಾಚಂಚಲ 

ಈತ ಈಕೆಯೋ ಇದೋ ಅದೋ ಗೊತ್ತಿಲ್ಲ !

ನನ್ನೊಳಗೆ ಇರುವುದರಿಂದ ಈತ ಎಂದು ಸಂಭೋಧಿಸುತ್ತೇನಷ್ಟೇ,


ಸರಿ-ತಪ್ಪುಗಳ ಪರಿವೆಯಿದೆಯಾದರೂ 

ಈತ ಒಮ್ಮೊಮ್ಮೆ ಅದಾವುದೋ ತಿಳಿಯದ 

ನಿರ್ಲಿಪ್ತನೀತ,


ಬೇಕಾದುದ ಮರೆತು 

ಬೇಡವಾದುದನ್ನೆಲ್ಲ ನೆನಪಿಸಿ 

ಕಣ್ಣೀರಿಡಿಸುವುದು ಈತನಿಗಿಷ್ಟವೆನಿಸುತ್ತೇ,


ಏಕಾಂಗಿಯಾಗಿರಬೇಕೆನ್ನುತ್ತಾನೆ 

ಏಕತಾನತೆ ಕಾಡಿದಾಗಲೆಲ್ಲ 

ಮತ್ತೊಬ್ಬರ ಮೊರೆ ಹೋಗುತ್ತಾನೆ,


ನಗಿಸುತ್ತಾನೆ ನಾ ನಗುವಾಗ 

ಒಳಗೊಳಗೆ ಅಳುತ್ತಾನೆ ಒಮ್ಮೆ 

ಅಳಿಸುತ್ತಾನೆ ತಾ ನಗುತ್ತಾನೆ,


ಮಾನಗಳ ಕೊಡಿಸುತ್ತಾನೆ ಅವ-

-ಮಾನಗಳನೂ ನೀಡುತ್ತಾನೆ 

ತಾನಾವುದಕೂ ಭಾಧ್ಯಸ್ಥನಾಗದೇ ನಿಶ್ಚಲನಾಗಿರುತ್ತಾನೆ, 


ಈತ ಅಪರಾಧಿಯೂ ಅಲ್ಲ 

ನಿರಪರಾಧಿಯೂ ಅಲ್ಲ 

ಹಿಡಿದಿಡಲಾಗದ ನನಗೆ ಹಗರಣಗಳ 

ಹೊರೆ ಹೊರಿಸುತ್ತಾನೆ,


ಅಣಕಿಸುತ್ತಾನೆ ದೂಷಿಸುತ್ತಾನೆ 

ಎಡವಿದಾಗ ಕೈ ಹಿಡಿದೇಳಿಸುತ್ತಾನೆ

ಈತ ಜಾಣ ಹಾಗೆಯೇ ಅತಿ ದಡ್ಡ,


ತನ್ನ ಚಳಿ ಕಾಯಿಸಲು 

ನನ್ನ ಬೆಂಕಿಗೆ ದೂಡುವ ಈತ 

ತನ್ನ ಆರೋಗ್ಯಕ್ಕೆ ನನಗೆ ಚುಚ್ಚುತ್ತಾನೆ,


ಪಂಚ ಪಕ್ವಾನ್ನಗಳ ಬೇಡುತ್ತಲೇ 

ಅಸಹ್ಯಗಳಿಗೂ ಕೈ ಹಾಕುತ್ತಾನೆ 

ತಾನಿಷ್ಟಪಟ್ಟ ಮದ್ಯ ಮದಿರೆಗಳ 

ನನ್ಮೂಲಕ ಸೇವಿಸುತ್ತಾನೆ,


ರಾಜನಾಗುತ್ತಾನೆ ಕಾಲಾಳುವಾಗುತ್ತಾನೆ

ಬೆವರು ಹರಿಸಿ ತಾನೇ ಒರೆಸುತ್ತಾನೆ

ಹೇಗಪ್ಪಾ ನನ್ನೊಳು ನೀ ಬಂದೆಯೆಂದರೆ

ನಾನಿರದೇ ನೀನಿಲ್ಲ ಎಂದಷ್ಟೇ ಹೇಳುತ್ತಾನೆ...


ಸಿದ್ರಾಮ ತಳವಾರ


Image Description

Post a Comment

0 Comments