*ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು*:

*ಡಾ.ಜಯವೀರ ಎ.ಕೆ*.



*ರಾಯಬಾಗ:* ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ನಿಷ್ಠೆಯಿಂದ ಅಧ್ಯಯನ ಮಾಡಿ ಪ್ರಾಮಾಣಿಕ ಪ್ರಯತ್ನ ಹಾಗೂ ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡರೆ ನೀವು ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ.ಆದುದರಿಂದ ಪ್ರಯತ್ನ ಮತ್ತು ಪರಿಶ್ರಮ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಶಿರಗುಪ್ಪಿ ಕೆ.ಎಲ್.ಇ. ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ.ಜಯವೀರ ಎ.ಕೆ. ಅಭಿಮತ ವ್ಯಕ್ತಪಡಿಸಿದರು.


ಅವರು ರವಿವಾರ ದಿನಾಂಕ 17 ರಂದು ಸಂಜೆ  ತಾಲ್ಲೂಕಿನ ಹಾರೂಗೇರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ   2022 ~23 ನೇ ಸಾಲಿನ ಬಿ.ಎ.ಬಿ.ಕಾಂ.ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಯಾವುದೇ ಮೂಲಭೂತ ಸೌಲಭ್ಯ ಇಲ್ಲದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ವಿಶ್ವ ರತ್ನ  ಡಾ.ಅಂಬೇಡ್ಕರ್ ಅವರು ಹೇಗೆ ಕಠಿಣ ಪರಿಶ್ರಮ ,ಪ್ರಾಮಾಣಿಕ ಪ್ರಯತ್ನದಿಂದ  ಸ್ವಾಭಿಮಾನಿಯಾಗಿ ನಿರಂತರ ಎದೆಗುಂದದೆ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಂಡರು ಎಂಬುದನ್ನು ನೀವೆಲ್ಲರೂ ಚೆನ್ನಾಗಿ ಅರಿಯಬೇಕು.ಸರಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ನಿಮಗೆ ಗರಿಷ್ಠ ಪ್ರಮಾಣದ ಸೌಲಭ್ಯಗಳನ್ನು ನೀಡಿದೆ. ಇದರ ಸದುಪಯೋಗ ಪಡಿಸಿಕೊಂಡು ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಗಳನ್ನು  ಮೈಗೂಡಿಸಿಕೊಂಡು ನಿಮ್ಮ ಉಜ್ವಲ ಬದುಕನ್ನು ಕಟ್ಟಿಕೊಂಡು ಹೆತ್ತ ತಂದೆ ತಾಯಿಗೆ ವಿದ್ಯೆ ಕಲಿಸಿದ ಗುರುಗಳಿಗೆ  ಕೀರ್ತಿ ತರಬೇಕು ಎಂದರು.ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಂಡೆವಾಡಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ ಶ್ರೀ ಆರ್.ಎನ್. ಮುರಾರಿ ಅವರು ಮಾತನಾಡಿ ಅಧ್ಯಯನಕ್ಕೆ ಬಡತನ ಅಡ್ಡಿ ಬಾರದು. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ಧೈರ್ಯದಿಂದ ಎದುರಿಸಿ ಸಾಧನೆ ಮಾಡಬೇಕು ಎಂದು ನುಡಿದರು.  ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದ ಸ್ಥಳೀಯ ಎಂ.ಬಿ.ಪಾಟೀಲ ಪದವಿಪೂರ್ವ ಕಾಲೇಜಿನ ಚೇರಮನ್ ಶ್ರೀ ಆಯ್.ಎಂ.ಪಾಟೀಲ ಅವರು ಮಾತನಾಡಿ  ಇಡೀ ನಿಮ್ಮ ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗಿ ಉತ್ತಮ ಸಂಸ್ಕಾರ ಮತ್ತು ಒಳ್ಳೆಯ ಆರೋಗ್ಯಕರ ಹವ್ಯಾಸಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು  ಎಂದು ಮಾರ್ಮಿಕವಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.

ಇದೇ ಸಂದರ್ಭದಲ್ಲಿ ಈ ವಸತಿ ನಿಲಯದ ಓರ್ವ ವಿದ್ಯಾರ್ಥಿ ಇತ್ತೀಚೆಗೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಆಯ್ಕೆಯಾದ ಪ್ರಯುಕ್ತ ಹಾಗೂ  ಕ್ರೀಡೆಯಲ್ಲಿ "ಯೂನಿವರ್ಸಿಟಿ ಬ್ಲೂ" ಗೆ ಭಾಜನರಾದ ಇಬ್ಬರು ವಿದ್ಯಾರ್ಥಿಗಳನ್ನು ಈ ವರ್ಣರಂಜಿತ ಸಮಾರಂಭದಲ್ಲಿ ವೇದಿಕೆಯ ಮೇಲಿನ ಗಣ್ಯರು ಆತ್ಮೀಯವಾಗಿ ಸತ್ಕರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಲಯ ಪಾಲಕ ಶ್ರೀ ಎಲ್.ಎಂ.ಜಾಯಗೋಣಿ ಅಧ್ಯಕ್ಷೀಯ ಆಶಯ ನುಡಿಯಾಡಿದರು. ಸ್ಥಳೀಯ ಎಂ.ಬಿ.ಪಾಟೀಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಾನುಜಂ ಮಕ್ಕಿನೆನಿ ಹಾಗೂ ಜ್ಯೂನಿಯರ್ ವಾರ್ಡನ್ ಶ್ರೀ ರತ್ನಕುಮಾರ ಹೊಳೆನ್ನವರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು.ಹೇಮಂತಕುಮಾರ ಬಿ.ಸ್ವಾಗತಿಸಿದರು. ಕು.ಯುವರಾಜ ಕೆಸರಗೊಪ್ಪ ನಿರೂಪಿಸಿದರು. ಕು.ಶಿವಾನಂದ ನಿಂಗನೂರೆ ವಂದಿಸಿದರು.ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.


,*ವರದಿ:ಡಾ.ಜಯವೀರ ಎ.ಕೆ.*

      *ಖೇಮಲಾಪುರ*

Image Description

Post a Comment

0 Comments