*ಶಾಹೂ ಮಹರಾಜರು ಬ್ರಾಹ್ಮಣ ಗಣಪತಿರಾವರಿಗೆ ಮೀಸಲಾತಿಯನ್ನು ಅರ್ಥಮಾಡಿಸಿದ ಬಗೆ..*
__________
1902 ರ ಜುಲೈ 2 ರಂದು ಕೊಲ್ಹಾಪುರದ ಶಾಹೂ ಮಹಾರಾಜರು ಅಸ್ಪೃಶ್ಯ ಮತ್ತು ಹಿಂದುಳಿದ ವರ್ಗಗಳಿಗೆ ಸರಕಾರಿ ಹುದ್ದೆಗಳಲ್ಲಿ 50% ಮೀಸಲಾತಿಯನ್ನು ಜಾರಿಗೆ ತರುತ್ತಾರೆ. ಇದೊಂದು ಚಾರಿತ್ರಿಕ ಮಹತ್ವದ ನಿರ್ಣಯವಾಗಿತ್ತು. ಮಹಾರಾಜರ ಈ ಮೀಸಲಾತಿಯ ನಿರ್ಣಯವನ್ನು ಸಹಜವಾಗಿ ಬ್ರಾಹ್ಮಣರು ಮೇಲ್ಜಾತಿಗಳು ವಿರೋಧಿಸುತ್ತಾರೆ. ಬೇಸೆತ್ತ ಕೆಲವು ಗೂಂಡಗಳು ಶಾಹು ಪಯಣಿಸುತ್ತಿದ್ದ ರೈಲಿಗೆ ಬಾಂಬ್ ಇಟ್ಟು ಕೊಲೆಗೆ ಯತ್ನಿಸುತ್ತಾರೆ.
ಹೀಗಿರುವಾಗ ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ವಾಕ್ ಮಾಡುವಾಗ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣುತ್ತಾನೆ. ಮೀಸಲಾತಿಯ ಬಗ್ಗೆ ಚರ್ಚಿಸುತ್ತಾ, ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗ-ಶಿಕ್ಷಣ ಹಾಗೂ ಎಲ್ಲಾ ರಂಗಗಳಲ್ಲೂ ಮೀಸಲಾತಿ ಕೊಟ್ಟರೆ ನಿಜವಾದ ಪ್ರತಿಭೆಗೆ ಅನ್ಯಾಯವಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ.
ಆಗ ಶಾಹು ಮಹಾರಾಜರು 'ಓ ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ' ಎಂದು ಆ ವಕೀಲನನ್ನು ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಕುದುರೆಗಳನ್ನು ಪ್ರತ್ಯೇಕ ಗುಂಪು ಗುಂಪುಗಳಾಗಿ ವಿಂಗಡಿಸಿ ಮೇವನ್ನು ಹಾಕಲಾಗಿರುತ್ತದೆ. ಇದನ್ನು ಗಮನಿಸಿದ ಮಹಾರಾಜರು 'ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು' ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವ ಶೂದ್ರನೊಬ್ಬನು 'ನಾನೇ ಪ್ರಭು' ಎನ್ನುತ್ತಾನೆ.
ಆಗ ಮಹಾರಾಜರು ಅವನನ್ನು "ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನು ಹಾಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನು ಹಾಕಬಹುದಲ್ಲವೇ? ಎಂದು ಪ್ರಶ್ನಿಸಿ, ಜೊತೆಯಲ್ಲಿದ್ದ ವಕೀಲ ಗಣಪತಿರಾವ್ ರವರನ್ನು ನೋಡಿ 'ನಾನು ಕೇಳಿದ್ದು ಸರಿ ತಾನೆ?' ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ.
ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನು ಹಾಕಬೇಕಿತ್ತು ಎನ್ನುತ್ತಾನೆ.
ಆಗ ಶೂದ್ರನು ಮಹಾರಾಜರ ಪ್ರಶ್ನೆಗೆ ಸಾವಧಾನದಿಂದ ಹೀಗೆ ಉತ್ತರಿಸುತ್ತಾನೆ, "ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಮುದಿ ಕುದುರೆಗಳಿವೆ, ಕೆಲವು ಗಾಯಗಳಾಗಿ ಪೆಟ್ಟು ತಿಂದ ಕುದುರೆಗಳಿವೆ, ಮತ್ತೆ ಕೆಲವು ಸಣ್ಣ ಪ್ರಾಯದ ಮರಿ ಕುದುರೆಗಳಿವೆ ಜೊತೆಗೆ ದಷ್ಟಪುಷ್ಟವಾದ ಬಲಿಷ್ಟ ಕುದುರೆಗಳೂ ಇವೆ. ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನು ಹಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಬಲಿಷ್ಠ ಕುದುರೆಗಳು ಮೇವನ್ನೆಲ್ಲಾ ತಿಂದು ತೇಗುತ್ತವೆ. ಆಗ ಮುದಿ ಕುದುರೆಗಳಿಗೆ, ಮರಿ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸಾಯುತ್ತವೆ.
ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಠ ಕುದುರೆಗಳಿಗೊಂದು ಕಡೆ ಮೇವನ್ನು ಹಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಸಮಾನವಾಗಿ ಮೇವು ಸಿಗುತ್ತದೆ" ಎನ್ನುತ್ತಾನೆ.
ಆಗ ಶಾಹು ಮಹಾರಾಜರು ಕುದುರೆಯವನ ಮಾತು ಕೇಳಿ, ಒಮ್ಮೆ
ಆ ಬ್ರಾಹ್ಮಣ ವಕೀಲನ ಕಡೆಗೆ ನೋಡುತ್ತಾರೆ. ಕೂಡಲೆ ಎಚ್ಚೆತ್ತವನಂತೆ ಗಣಪತಿರಾವ್ 'ಮಹಾರಾಜರೇ, ಈಗ ನೀವು ಜಾರಿಗೆ ತಂದ ಮೀಸಲಾತಿಯ ಬಗ್ಗೆ ಸರಿಯಾಗಿ ಅರ್ಥವಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ' ಎಂದು ಕೈ ಮುಗಿದು ಹೊರಟು ಹೋದನು.
*ಅಜೋ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments