*ರಾಯಬಾಗ*:ಜೀವನದಲ್ಲಿ ಎಷ್ಟೇ ತೊಂದರೆ ತಾಪತ್ರಯ ಬಂದರೂ ಎದೆಗುಂದದೆ ವಿದ್ಯಾರ್ಜನೆ ಮಾಡಬೇಕು. ಶಿಕ್ಷಣ ನಿಮ್ಮ ಬಾಳು ಬಂಗಾರವಾಗಿಸುತ್ತದೆ.ಹಾಗಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೇ ಧೈರ್ಯ , ಆತ್ಮವಿಶ್ವಾಸ, ನಿಷ್ಠೆ ಶ್ರದ್ಧೆ, ಹಾಗೂ ಮನಃಪೂರ್ವಕವಾಗಿ ಚೆನ್ನಾಗಿ ಓದಿ ಭವಿಷ್ಯದಲ್ಲಿ ಭರವಸೆಯ ಬೆಳಕಾಗಬೇಕು ಎಂದು ಬೆಂಗಳೂರಿನ ಸದೃಶಂ (ರಿ) ಸರಕಾರೇತರ ಸಂಸ್ಥೆಯ ಸದಸ್ಯ ಶ್ರೀ ಪವನಕುಮಾರ ಹೇಳಿದರು.
ಅವರು ಶನಿವಾರ ದಿನಾಂಕ 16 ರಂದು ತಾಲ್ಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ತಮ್ಮ ಹೆಮ್ಮೆಯ ಸದೃಶಂ ಸಂಸ್ಥೆಯ ಮೂಲಕ 1 ಲಕ್ಷ 30 ಸಾವಿರ ರೂಪಾಯಿಗಳ ಮೌಲ್ಯದ ವಿವಿಧ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
*ಸದೃಶಂ (ರಿ) ಸರಕಾರೇತರ ಸಂಸ್ಥೆಯು* ಪ್ರತಿ ವರುಷ ರಾಜ್ಯದ ಅತ್ಯಂತ ಆಯ್ದ ಹಿಂದುಳಿದ ಪ್ರದೇಶಗಳ ಸರಕಾರಿ ಪ್ರೌಢಶಾಲೆಗಳನ್ನು ಗುರುತಿಸಿ ಬೆಂಗಳೂರಿನ ಸದೃಶಂ ಸಂಸ್ಥೆಯು ಅತ್ಯಂತ ಹಿಂದುಳಿದ ಪ್ರದೇಶಗಳ ಕಡು ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳ ಶೈಕ್ಷಣಿಕ ಕಲಿಕಾ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತಿರುವುದು ಗಮನಾರ್ಹ. ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಇರುವ ಆಯ್ದ 6 ಪ್ರೌಢ ಶಾಲೆಗಳಲ್ಲಿ ರಾಯಬಾಗ ತಾಲ್ಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಯು ಸತತ ಆರನೇ ಬಾರಿಗೆ ಆಯ್ಕೆಯಾಗುತ್ತಿರುವುದು ಒಂದು ವಿಶೇಷ. 9 ರಿಂದ 10 ನೇ ತರಗತಿಯ ಒಟ್ಟು 240 ವಿದ್ಯಾರ್ಥಿಗಳಿಗೆ ಪ್ರತಿಯೊಂದು ಮಗುವಿಗೆ 6 ನೋಟಬುಕ್ ಕ್ಲಿಪ್ ಪ್ಯಾಡ್, ಎರಾಜರ್, ಕಂಪಾಸ, 2 ಪೆನ್ ಹಾಗೂ 2 ಪೆನ್ಸಿಲ್ ಗಳನ್ನು ವಿತರಿಸುವ ಮೂಲಕ ಸದೃಶಂ ಸಂಸ್ಥೆಯ ಶೈಕ್ಷಣಿಕ ಕಳಕಳಿ ನಿಜಕ್ಕೂ ಶ್ಲಾಘನೀಯ.
ಕಲಿಕೆಯ ಆಸಕ್ತಿಯನ್ನು ಉದ್ದೀಪನ ಗೊಳಿಸುವ ವಿವಿಧ ರಚನಾತ್ಮಕ ಸ್ಪರ್ಧೆಗಳು, ಹಾಗೂ ರಸಪ್ರಶ್ನೆ ಸ್ಫರ್ಧೆಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಿದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಗಣ್ಯರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಆಗಮಿಸಿದ್ದ ಸದೃಶಂ ಸರಕಾರೇತರ ಸಂಸ್ಥೆಯ ಸದಸ್ಯರು ಮಕ್ಕಳೊಂದಿಗೆ ನೇರ ಸಂವಾದ ಮಾಡಿ ಬಡ ಮಕ್ಕಳ ಮನಸ್ಸು ಮುದಗೊಳಿಸಿ ಪ್ರೇರಣಾದಾಯಕ ಮಾರ್ಮಿಕ ನುಡಿಯಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹಾಗೂ ಸ್ಫೂರ್ತಿ ತುಂಬಿದರು. ಹಾಜರಿದ್ದ ಎಲ್ಲಾ ಮಕ್ಕಳ ಮುಖದಲ್ಲಿ ಸಂತೋಷ ಮನೆ ಮಾಡಿತ್ತು. "ವಿದ್ಯಾರ್ಥಿಗಳ ಅಕ್ಷರಗಳ ಬಳ್ಳಿಗೆ ಪ್ರೋತ್ಸಾಹದ ಮಳೆಗರೆ ಸುರಿಸಿದ "ಸದೃಶಂ" ಸರಕಾರೇತರ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಈ ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಜೆ.ಡಿ.ಹೊನ್ನಕಸ್ತೂರಿ ಅವರು ಅಭಿಮಾನದಿಂದ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ಸದೃಶಂ ಸಂಸ್ಥೆಯ ಶ್ರೀ ಕಾರ್ತಿಕ ಶ್ರೀ ಶಿವಾನಂದ ಮಲಕಗೊಂಡ ಶಿಕ್ಷಣ ಪ್ರೇಮಿ ಶ್ರೀ ಶಿವಾನಂದ ಚನಗೌಡರ, ಶ್ರೀ ಮಲ್ಲಿಕಾರ್ಜುನ ಬಾಗೆವಾಡಿ ಹಾಗೂ ಶಾಲೆಯ ಶಿಕ್ಷಕರುಗಳಾದ ಶ್ರೀ ಎನ್. ಡಿ.ಕುಕನೂರ, ಕೃಷ್ಣರಾಜು ಕೆ.ಎಸ್, ವಿ.ಡಿ.ಉಪಾಧ್ಯೆ, ಎಸ್.ಎಸ್.ನಾಯಿಕ, ಎಸ್.ಎಂ.ಮುಲ್ಲಾ, ಶ್ರೀಮತಿ ಎಸ್.ಪಿ.ನಾಯ್ಕ,ಶ್ರೀಮತಿ ಎಸ್.ಬಿ.ಹಳ್ಳದಮಳ, ಶ್ರೀಮತಿ ಎ.ಆಯ್.ಕುರಬೆಟ ಹಾಗೂ ಸುನೀಲ ಹೆಗಡೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
*ವರದಿ: ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments