ಈಶ್ವರನ ದ್ವಿಪದಿ

 ಈಶ್ವರನ  ದ್ವಿಪದಿ



ಸಜ್ಜನರ ಸಂಗದಲ್ಲಿ ಹಿತವಿದೆ ಸಜ್ಜನರ ಸಂಗವಿರಲಿ

ದುಷ್ಟರ ಸ್ನೇಹದಿ ಕೇಡಿದೆ ದುಷ್ಟರಿಂದ ಅಂತರವಿರಲಿ


ಈ ದ್ವಿಪದಿಯಲ್ಲಿ  ಜೀವನದ ಎರಡು ಮುಖಗಳನ್ನು  ನೋಡಬಹುದು . ಒಂದು ಸಜ್ಜನರ ಸಂಗದ ಮಹತ್ವ ಇನ್ನೊಂದು ದುಷ್ಟರ ಸಂಗದ ಪರಿಣಾಮ.

     ಸಜ್ಜನರ ಸಂಗದ ಮಹತ್ವ : 

ಸಜ್ಜನರ ಸಂಗದಲ್ಲಿ ಹಿತ ಮತ್ತು ಶ್ರೇಯಸ್ಸು ಇರುತ್ತದೆ. ಸಜ್ಜನರೆಂದರೆ  ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿಗಳು. ಅವರ ಸಂಗವು ನಮಗೆ ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.


ಸಜ್ಜನರ ಸಂಗದಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ.ಅವರಿಂದ ಒಳ್ಳೆಯ ಗುಣಗಳನ್ನು ಕಲಿಯುತ್ತೇವೆ.ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ಪಡೆಯುತ್ತೇವೆ, ಉತ್ತಮ ಶ್ರೇಯಸ್ಸು ಮತ್ತು ಸುಖವನ್ನು ಪಡೆಯುತ್ತೇವೆ ಮತ್ತು ಜೀವನದಲ್ಲಿ ಧೈರ್ಯ ಮತ್ತು ತಾಳ್ಮೆಯನ್ನು ಹೊಂಡುತ್ತೇವೆ. ಉತ್ತಮರ ಸಂಗದಲ್ಲಿ ಹಿತದ ತಂಗಾಳಿಯೇ ಇರುತ್ತದೆ ಹೊರತು ಬೆಂಕಿಯ ಬಿರುಗಾಳಿಯು ಇರುವುದಿಲ್ಲ. 


ದುಷ್ಟರ ಸ್ನೇಹದ ಕೇಡು: 

ದುಷ್ಟರ ಸ್ನೇಹದಲ್ಲಿ ಕೇಡು ಮತ್ತು ನಷ್ಟವಿದೆ. ದುಷ್ಟರು ಎಂದರೆ ಕೆಟ್ಟ ಗುಣಗಳನ್ನು ಹೊಂದಿರುವ ವ್ಯಕ್ತಿಗಳು. ಅವರ ಸಂಗವು ನಮಗೆ ಜೀವನದಲ್ಲಿ ನಷ್ಟವನ್ನು ಉಂಟುಮಾಡಬಹುದು. 

ದುಷ್ಟರ ಸ್ನೇಹದಿಂದ ಉಂಟಾಗುವ ಸಮಸ್ಯೆಗಳು ಅನೇಕ. ಜೀವನದಲ್ಲಿ ನಷ್ಟ ಮತ್ತು ಕೇಡು ತರುತ್ತದೆ.

ಕೆಟ್ಟ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ,

ಇದರಿಂದ ಜೀವನದಲ್ಲಿ ಅಸಂತೋಷ ಮತ್ತು ದುಃಖ ಬರುತ್ತದೆ  ಹಾಗೂ ಸಮಾಜದಲ್ಲಿ ಕೆಟ್ಟ ಹೆಸರು ಕೂಡ ಬರುತ್ತದೆ. 

         ಮಹಾಭಾರತದ ಕಥೆಯಲ್ಲಿಯ ದುರ್ಯೋಧನ ಮತ್ತು ಕರ್ಣರ ಸ್ನೇಹವನ್ನು ನೆನಪಿಸಿಕೊಳ್ಳಬಹುದು. ಕರ್ಣ ಉತ್ತಮನಿದ್ದರೂ ದುಷ್ಟ ಮಿತ್ರನ ಸ್ನೇಹದಿಂದ ದುಃಖವನ್ನೇ ಅನುಭವಿಸಬೇಕಾಗುತ್ತದೆ. ಅದೇ ಪಾಂಡವರು ಶ್ರೀ ಕೃಷ್ಣನ ಗೆಳೆತನ ಮತ್ತು ಮಾರ್ಗದರ್ಶನದಿಂದ ಎಲ್ಲ ಕಷ್ಟಗಳನ್ನು ಜಯಿಸಿ ಕೊನೆಗೆ ಸುಖವನ್ನು ಪಡೆಯುತ್ತಾರೆ. ಅದೇ ರೀತಿ  ಸುಧಾಮನು ಶ್ರೀ ಕೃಷ್ಣನ ಪವಿತ್ರ ಸ್ನೇಹದಲ್ಲಿ ತನ್ನೆಲ್ಲ ಕಷ್ಟಗಳಿಂದ ಮುಕ್ತಿ ಹೊಂದುತ್ತಾನೆ. ರಾಮಾಯಣದಲ್ಲಿ ಸುಗ್ರೀವನು ಶ್ರೀ ರಾಮನ ಸ್ನೇಹದಿಂದ ತನ್ನ ಹೆಂಡತಿ ಮತ್ತು ರಾಜ್ಯವನ್ನು ಮರಳಿ ಪಡೆಯುತ್ತಾನೆ. ಶ್ರೀರಾಮನು ಹಣಮಂತ ಹಾಗೂ ವಾನರ ಮಿತ್ರತ್ವದಿಂದ ರಾವಣನನ್ನು ಸೋಲಿಸುತ್ತಾರೆ. ವಿಭಿಷಣನು ಶ್ರೀರಾಮನ ಸ್ನೇಹ ಪಡೆದು  ಲಂಕೆಗೆ ರಾಜನಾಗುತ್ತಾನೆ. ಆದ್ದರಿಂದ ಜೀವನದಲ್ಲಿ ನಾವು ಸರಿಯಾದ ಸಂಗಾತಿಗಳ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 

       ಅಂತಲೇ ಬಸವಣ್ಣನವರ ಈ ವಚನವನ್ನು ನೆನಪಿಸಿಕೊಳ್ಳಬೇಕು : 

ಸಾರ ಸಜ್ಜನರ ಸಂಗವು ಲೇಸು ಕಂಡಯ್ಯಾ

ದೂರ ದುರ್ಜನರ ಸಂಗವದು ಭಂಗವಯ್ಯಾ.

ಸಂಗವೆರಡುಂಟು; ಒಂದು ಬಿಡು, ಒಂದು ಹಿಡಿ;

ಮಂಗಳಮೂರ್ತಿ ನಮ್ಮ ಕೂಡಲಸಂಗಮದೇವ.

    ಇನ್ನು ಸರ್ವಜ್ಞನಂತೂ ನೇರವಾಗಿ ಹೀಗೆ ಹೇಳಿದ್ದಾರೆ : 

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಸಂಗವು ಬಚ್ಚಲೊಳಗಿನ ನೀರು ಇದ್ದಂತೆ. 

       ಆದ್ದರಿಂದ ಸಂಗಾತಿಗಳನ್ನು ಆಯ್ಕೆ ಮಾಡುವುದು ನಮ್ಮ ಕೈಯಲ್ಲಿಯೇ ಇದೆ. ಉತ್ತಮ ಜೀವನವನ್ನು ಹೊಂದಬೇಕಾದರೆ ಉತ್ತಮರ ಸಂಗದಲ್ಲಿಯೇ ಇರಬೇಕು. ಇದುವೇ ಜೀವನ ಅಥವಾ ಬದುಕಿನ ರೀತಿಯಾಗಿದೆ. 

        - ಈಶ್ವರ ಮಮದಾಪೂರ, ಗೋಕಾಕ.

Image Description

Post a Comment

0 Comments