*ಪ್ರಜಾರಾಜ್ಯೋತ್ಸವ ಭಾರತದ ಅಸ್ಮಿತೆ*
ಸುಸ್ಥಿರ ದೇಶಾಡಳಿತಕೆ ಸಂವಿಧಾನ ಜಾರಿಯಾದ ಸುವರ್ಣ ದಿನ
ನಾನು ಶ್ರೇಷ್ಠ ಅವನು ಕನಿಷ್ಟವೆನುವ ಭೇದವಳಿಸಿದ ಸಮತಾ ದಿನ
ಮತ ಮೌಢ್ಯ ತೊಲಗಿ ಮತೈಕ್ಯ ಆದ್ಯಾತ್ಮ ಉದಿಸಿದ ಪವಿತ್ರ ದಿನ
ಅಂಧ ಶ್ರದ್ಧೆ ಪೌರೋಹಿತ್ಯ ಮನುಮತಿಗಳ ಕಣ್ತೆರೆಸಿದ ದಿನ
ಆ ದಿನವೆ ಈ ದಿನ ಜನವರಿ ಇಪ್ಪತ್ತಾರು ಪ್ರಜಾರಾಜ್ಯೋತ್ಸವ ದಿನ
ದಮನಿತರೆಲ್ಲರಿಗೂ ಸಮಪಾಲು ನೀಡಿದ ನಿರ್ಣಾಯಕ ದಿನ
ಶೋಷಿತ ವರ್ಗಕೆ ಸಮಬಾಳ ದರ್ಶನ ಚರಿತ್ರೆ ನಿರ್ಮಾಣದ ದಿನ
ಬಹುತ್ವ ಭಾರತದೇಳ್ಗೆಗೆ ಸಹಬಾಳ್ವೆ ಸೇತುವೆ ಕಟ್ಟಿದ ದಿನ
ಸರ್ವ ಜನ ಗಣದ ಬಯಕೆಗಳ್ಗೆ ವರವನಿತ್ತ ಗಣರಾಜ್ಯೋತ್ಸವ ದಿನ
ಮೂಢನಂಬಿಕೆ ಸಾಮಾಜಿ ಪಿಡುಗುಗಳ್ಗೆ ಕಡಿವಾಣ ಹಾಕಿದ ದಿನ
ವಿಶ್ವ ಶಾಂತಿ ಸೋದರತೆ ಭಾತೃತ್ವ ಭಾರತಕೆ ಭಾಷ್ಯ ಬರೆದ ದಿನ
ಮೂಲನಿವಾಸಿ ಬಹುಜನತೆ ದಾಸ್ಯದ ಬದುಕಿನ ವಿಮೋಚನಾ ದಿನ
ಅದುವೆ ಜನವರಿ ಇಪ್ಪತ್ತಾರು ಭಾರತ ಸಂವಿಧಾನ ಜಾರಿಯಾದ ದಿನ
ಪ್ರಜಾಕಲ್ಯಾಣಕೆ ಮೂಲಭೂತ ಹಕ್ಕುಗಳ ಕೊಡುಗೆಯ ದಿನ
ರಾಷ್ಟ್ರಾಭ್ಯುದಯಕೆ ಮೂಲಭೂತ ಕರ್ತವ್ಯಗಳ ಅರಿವಿನ ದಿನ
ಹಿಂಸೆ ಕ್ರೌರ್ಯ ನಿರ್ನಾಮಕೆ ನ್ಯಾಯಾಂಗದ ಪಥ ತೋರಿದ ದಿನ
ಹೆಣ್ಣು ಗಂಡು ವರ್ಣದ ಹಂಗಿರದೆ ಶಿಕ್ಷಣ ದೀಕ್ಷೆಗೆ ಮುನ್ನುಡಿದ ದಿನ
ಸ್ವಾತಂತ್ರ್ಯ ಸಂಗ್ರಾಮ ತ್ಯಾಗ ಬಲಿದಾನ ಮಹತ್ವಗಳ ಅಮರಮಯ ದಿನ
ಬಾಬಾ ಸಾಹೇಬ ಅಂಬೇಡ್ಕರ್ ಲಿಖಿತ ಸಂವಿಧಾನ ಕ್ರಿಯಾಶೀಲಮಯ ದಿನ
ವಿಶ್ವದ ಸರ್ವೋಚ್ಚ ಬೃಹತ್ ಪ್ರಜಾಸತ್ತಾತ್ಮಕ ಗ್ರಂಥೋತ್ಸವ ದಿನ
ಆ ದಿನವೇ ಈ ದಿನ ಜನವರಿ ಇಪ್ಪತ್ತಾರು ಗಣರಾಜ್ಯೋತ್ಸವ ದಿನ
ಭಾಷಾವಾರು ರಾಜ್ಯಗಳುದಯದ ಸಂಚಾಲನಾ ನವನೀತ ದಿನ
ಸಂಪ್ರದಾಯ ನಂಬಿಕೆ ಸದಾಚಾರ ವಿಚಾರ ಅಭಿವ್ಯಕ್ತಿ ದಿನ
ಜಾತಿ ಜನಾಂಗ ಧರ್ಮ ವರ್ಣ ದ್ವೇಷದ ಬಲೆ ನಿರ್ಣಾಮ ದಿನ
ಆದರ್ಶ ಪ್ರಜಾರಾಜ್ಯದ ಕನಸು ನನಸಿನ ಅಮೋಘ ದಿನ
ವಂಶಪಾರಂಪರ್ಯ ರಾಜಪ್ರಭುತ್ವವದ ದರ್ಪವದು ಕೊನೆಯಾದ ದಿನ
ಮತ ಚಲಾವಣೆ ಅಸ್ತ್ರದಿ ಪ್ರಜಾ ಪ್ರಭುತ್ವಕೆ ಸಹಮತ ತೋರಿದ ದಿನ
ದೇಶದ ಪ್ರತಿ ನಾಗರಿಕ ತಾ ಪ್ರಭುವಾಗ್ವ ಪರಮಾಧಿಕಾರ ಪರಮ ದಿನ
ಪ್ರಜೆಗಳಿಗೆಲ್ಲ ಪ್ರಭುತ್ವದ ಭರವಸೆ ಕಿರಣ ಮೂಡಿದ ಪ್ರಜೋತ್ಸವ ದಿನ
*ಸುಭಾಷ್ ಹೇಮಣ್ಣಾ ಚವ್ಹಾಣ* ಶಿಕ್ಷಕ ಸಾಹಿತಿಗಳು, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments