*_ಸಿರಿತನದ ಸೌಧ ಕುಸಿಯದಂತೆ ಕಾಯುವ ಆಧುನಿಕ ಸರ್ಪಗಾವಲಿನ ಕತೆ_*
____________
ಪ್ರಾಚೀನ ಕಾಲದಲ್ಲಿ
ಅಪಾರ ಸಂಪತ್ತನ್ನು ಅಡಗಿಸಲಾಗಿದೆ ಎನ್ನುವ ಸ್ಥಳ ಅಥವಾ ಅಂತಹ ಕಡೆ ಆ ಸಂಪತ್ತನ್ನು ಕಾಯಲು ಸರ್ಪವೋ/ದೊಣ್ಣೆಕಾಟವೋ/ಉಡವೋ/ಕೋಣವೋ/ಹುಂಜವೋ ಇದೆ ಎನ್ನುವ ಮಿತ್ ಗಳನ್ನು ಎಲ್ಲರೂ ಕೇಳಿಯೇ ಇರುತ್ತೀರಿ. ಆ ಸಂಪತ್ತನ್ನು ದೋಚಲು ಹೋದರೆ ಸರ್ಪ ಎದ್ದುನಿಲ್ಲುತ್ತೆ/ಕೋಣ ಗುಟುರು ಹಾಕುತ್ತೆ/ದೊಣ್ಣೆಕಾಟ ತಲೆ ಹಾಕುತ್ತೆ ಇತ್ಯಾದಿ. ಈ ಮೂಲಕ ದೋಚಲು ಬಂದವರನ್ನು ನಾಶಗೊಳಿಸುತ್ತೆ ಎನ್ನುವುದು ಈ ಮಿತ್ ನ ಒಂದೆಳೆ ಸಾರಾಂಶ. ಹೀಗೆ ಉಳ್ಳವರು ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಎಂಥಹ ಅದ್ಭುತ ಕತೆ ಹೆಣೆದಿದ್ದಾರೆ ಎನ್ನುವ ಬಗ್ಗೆ ಬೆರಗು ಹುಟ್ಟುತ್ತದೆ. ಹಾಗಾದರೆ ಆಧುನಿಕ ಸಂಪತ್ತುಗಳನ್ನು ಕಾಯುವ ಸರ್ಪಗಳು ಯಾವುವು? ಇದೊಂದು ಕುತೂಹಲಕಾರಿ ಸಂಗತಿ.
ಯಾವುದೇ ಕ್ಷೇತ್ರದಲ್ಲಿ ಅವರ ಸ್ವ-ಪ್ರತಿಭೆಯಿಂದಲೋ, ನಿರಂತರವಾದ ಅಪಾರ ಶ್ರಮದಿಂದಲೋ..
ಹಲವು ಬಗೆಯ ಪ್ರಭಾವ ಬಳಸಿಯೋ ಕೆಲವೊಮ್ಮೆ ಅಡ್ಡದಾರಿ ಹಿಡಿದೋ ಕಡುಭ್ರಷ್ಟರಾಗಿಯೋ
ಮಧ್ಯಮ ವರ್ಗವನ್ನು ಮೀರಿ ಮೇಲೆ ಬಂದವರು ಅಥವಾ ಆರ್ಥಿಕವಾಗಿ ಬಲಾಡ್ಯರಾದಾಗ ಈ ಸಂಪತ್ತು, ಇದರ ಜತೆ ಹೆಸರು, ಸೋಷಿಯಲ್ ಸ್ಟೇಟಸ್ ಈ ಎಲ್ಲವೂ ಕುಸಿಯದಂತೆ ಕಾಯಬೇಕಾಗುತ್ತೆ. ಇದನ್ನು ಸರ್ಪಗಾವಲು ಕಾಯಲು ಅಧಿಕಾರದಲ್ಲಿರುವ ಸರಕಾರದ ಶ್ರೀರಕ್ಷೆ ಬೇಕಾಗುತ್ತದೆ. ಹಾಗಾಗಿ ಆಯಾ ಆಡಳಿತ ಪಕ್ಷವನ್ನೋ..ರಾಜಕಾರಣಿಗಳನ್ನೋ ಓಲೈಸಬೇಕಾಗುತ್ತದೆ. ಅಥವಾ ಅವರೆ ಆಳುವ ಸರಕಾರ ಅಥವಾ ರಾಜಕೀಯ ಪಕ್ಷದ ಒಳಸೇರಿ ಅದರ ಭಾಗವೇ ಆಗಬೇಕಾಗುತ್ತದೆ. ಹೀಗೆ ಆಗದೆ ಆಳುವ ಸರಕಾರ-ಪಕ್ಷದ ವಿರುದ್ಧವಾದರೆ ತಾನು ಕಟ್ಟಿದ ಸಿರಿತನದ ಸೌಧ ಕಣ್ಣೆದುರೆ ಕುಸಿಯುವುದನ್ನು ನೋಡಲು ಅಸಾಧ್ಯ ದೈರ್ಯ ಮತ್ತು ಸಿದ್ಧತೆ ಬೇಕಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ಶೂನ್ಯಕ್ಕೆ ಮರಳಲು ಆತ/ಆಕೆಯನ್ನು ನಂಬಿದ ಇಡೀ ಕುಟುಂಬ ಮಾನಸಿಕವಾಗಿ ಸಿದ್ಧಗೊಳ್ಳಬೇಕಾಗುತ್ತದೆ. ಈ ಆಧುನಿಕ ವಾಣಿಜ್ಜೀಕರಣಗೊಂಡ ಸಮಾಜಿಕ ಜೀವನದ ವಾತಾವರಣವು ಇಂತಹ ದೈರ್ಯವನ್ನು ಕಲಿಸಿಲ್ಲ.
ಈ ಮನಸ್ಥಿತಿಯನ್ನು ಇದೀಗ ಆಳುವ ಪಕ್ಷಗಳು ಚೆನ್ನಾಗಿ ಅರ್ಥಮಾಡಿಕೊಂಡಿವೆ. ಹಾಗಾಗಿ ಕೊಂಡಿಯೆತ್ತಿ ಕುಟುಕಲು ಬರುವ ಚೇಳನ್ನು ನಾನಾ ರೀತಿಯ ತಂತ್ರ ಬಳಸಿ ಕೊಂಡಿಯನ್ನು ಮುರಿಯಲಾಗುತ್ತದೆ. ಹೀಗೆ ಕೊಂಡಿ ಮುರಿಸಿಕೊಂಡ ಚೇಳುಗಳು ಬಾಲಮುದುರಿಕೊಂಡು ಬಿಲದೊಳಗೆ ಜೀವಿಸಬೇಕಾಗುತ್ತದೆ.
ಹಾಗಾಗಿಯೇ ಈ ಕಾಲದಲ್ಲಿ ಸಿರಿವಂತಿಕೆಯ ಮಹಡಿಯಲ್ಲಿ ಜೀವಿಸುವ ನಟನಟಿಯರು/ಕ್ರೀಡಾಪಟುಗಳು/ಉದ್ಯಮಿಗಳು/ಸ್ವಾಮೀಜಿ-ಮಠಾಧೀಶೆಯರು/ರಾಜಕಾರಣಿಗಳು/ಅಧಿಕಾರಿಗಳು/ಅಧ್ಯಾಪಕರು/ಸಾಹಿತಿಗಳು/ಚಳವಳಿಗಾರರು ಮೊದಲಾದವರ ಪ್ರಗತಿಪರತೆಯು ಯಾವಾಗಲೂ ಒಂದು ಮಿತಿಗೆ ಒಳಪಟ್ಟಿರುತ್ತದೆ. ಸಮಯ ಸಂದರ್ಭ ವಾತಾವರಣಕ್ಕೆ ತಕ್ಕಂತೆ ಯಾವಾಗಲಾದರೂ ರಾಜಕೀಯ ಪಕ್ಷದ ಬಗೆಗಿನ ಈ ನಿಷ್ಠೆ ಅದಲು-ಬದಲಾಗಬಹುದು. ಕೊನೆಗೆ ಮೌನವನ್ನಾದರೂ ತಾಳಬಹುದು.
ಹಾಗಾಗಿ
ಇಂತಹವರ ಪ್ರಗತಿಪರತೆಯನ್ನು/ಜೀವಪರತೆಯನ್ನು ಅಂತರ ಕಾಯ್ದುಕೊಂಡು ನೋಡಬೇಕಷ್ಟೆ. ಅತಿಯಾಗಿ ನಂಬಬಾರದು. ವಿಜೃಂಬಿಸಬಾರದು. ಇದು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಐಡಿಯಾಲಜಿಗೆ ಸೀಮಿತವಲ್ಲ. ಅಧಿಕಾರ ಅದಲು-ಬದಲಾದಾಗ ಪಕ್ಷಗಳ ಧೋರಣೆಗಳೂ/ಆ ಪಕ್ಷಗಳ ಬೆಂಬಲ ಮತ್ತು ವಿರೋಧವೂ ಅದಲು ಬದಲಾಗುತ್ತವೆ.
ನಾನು ಹೇಳಿದ್ದಕ್ಕೆ ಕೆಲವು ಅಪವಾದಗಳು ಸಿಕ್ಕಾವು.
*ಅಜೋ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments