*ಸಂಗಮೇಶ ನಾಯಿಕ ಅವರಿಗೆ "ರಾಷ್ಟ್ರೀಯ ಬಸವ ಕಾಯಕ ರತ್ನ ಪ್ರಶಸ್ತಿ"*
ರಾಯಬಾಗ:ಆದರ್ಶ ಕವಿ, ನಿಷ್ಠಾವಂತ ಪೊಲೀಸ್ ಪೇದೆ, ಶರಣ ಜೀವಿಗಳಾದ ಸಂಗಮೇಶ ಬಸಗೌಡ ನಾಯಿಕ ಅವರು ಕಲಬುರ್ಗಿಯ ಕನ್ನಡ ನುಡಿ ಮುತ್ತು ವೇದಿಕೆ ವತಿಯಿಂದ ಕೊಡಮಾಡುವ ಪ್ರಸಕ್ತ ಸಾಲಿನ ರಾಷ್ಟ್ರೀಯ ಬಸವ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ಅಥಣಿ ತಾಲೂಕಿನ ಅವರಖೋಡ ಗ್ರಾಮದವರಾದ ಇವರು ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಓರ್ವ ಭರವಸೆಯ ವಿಶಿಷ್ಟ ಕವಿಯಾಗಿ ಗುರುತಿಸಿಕೊಂಡ ನಾಯಿಕ ಅವರು ವೃತ್ತಿ ಹಾಗೂ ಪ್ರವೃತ್ತಿಗಳೆರಡರಲ್ಲಿಯೂ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಬಿ ಎ ಬಿ ಎಡ್ ಪದವೀಧರರಾದ ಇವರು ಸತ್ಸಂಗ ಜೀವಿಗಳಾಗಿದ್ದಾರೆ. ತಮ್ಮ ಬದುಕಿನಲ್ಲಿ ವಿನಯ,ಪ್ರಾಮಾಣಿಕತೆ, ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಸಕಲರಿಗೂ ಲೇಸನ್ನೇ ಬಯಸುತ್ತಾ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಎಲ್ಲರ ಮನವನ್ನು ಸೆಳೆಯುತ್ತ ಅಕ್ಷರ ಲೋಕವನ್ನು ಸಿರಿವಂತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ಚೆನ್ನಾಗಿ ತೊಡಗಿಸಿಕೊಂಡಿದ್ದಾರೆ.
ಈಗಾಗಲೇ ಚಿಕ್ಕೋಡಿ,ಕಾಗವಾಡ, ನಿಪ್ಪಾಣಿ ಹಾಗೂ ಕುಡಚಿ ಪಟ್ಟಣದಲ್ಲಿ ಆರಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದು ಗಮನಾರ್ಹ.
ಪ್ರೇರಣಾ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಸುತ್ತಿರುವ ಇವರು ಸದ್ಯ ರಾಯಬಾಗ ತಾಲೂಕಿನ ಹಾರೂಗೇರಿಯ ಪೊಲೀಸ್ ಇಲಾಖೆಯಲ್ಲಿ ಆರಕ್ಷಕರಾಗಿ ಸದ್ಯ ಸೇವೆಯಲ್ಲಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೆ ಈಗಾಗಲೇ ಇವರು ಮೌನ ಮಧುರ ಹಾಗೂ ಕಾವ್ಯ ಸಿಂಧೂರ ಎಂಬ ವಿಶಿಷ್ಟ ಕೃತಿ ಕುಸುಮಗಳನ್ನು ಸಮರ್ಪಿಸಿದ್ದಾರೆ.
ಉದಯೋನ್ಮುಖ ಕವಿಯಾಗಿ ಹೊರಹೊಮ್ಮಿದ ಸಂಗಮೇಶ ಅವರು ನಿತ್ಯ ನಿರಂತರ ಅಕ್ಷರ ಲೋಕವನ್ನು ಸಿರಿವಂತಗೊಳಿಸಿದ್ದಕ್ಕಾಗಿ ನಾಡಿನ ಅನೇಕ ಸಂಘ ಸಂಸ್ಥೆಗಳು ಇವರಿಗೆ ಹತ್ತಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಪ್ರಸ್ತುತ ಇವರ ಸಾಹಿತ್ಯ ಸೇವೆ ಮನ್ನಿಸಿ ಪ್ರತಿಷ್ಠಿತ "ರಾಷ್ಟ್ರೀಯ ಬಸವ ಕಾಯಕ ರತ್ನ ಪ್ರಶಸ್ತಿ" ಇವರ ಮುಡಿಗೇರುವ ಮೂಲಕ ಕವಿ ಸಂಗಮೇಶರ ಘನ ವ್ಯಕ್ತಿತ್ವ ಇಮ್ಮಡಿಸಿದೆ.
ಮೇ ಮೊದಲ ವಾರದಲ್ಲಿ ನಡೆಯುವ ವಿಶೇಷ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆರಕ್ಷಕ ಕವಿ ಸಂಗಮೇಶ ನಾಯಿಕ ಅವರಿಗೆ ಪ್ರಸಕ್ತ ಸಾಲಿನ" ರಾಷ್ಟ್ರೀಯ ಬಸವಕ ರತ್ನ ಪ್ರಶಸ್ತಿ" ನೀಡಿ ಗೌರವಿಸಲಾಗುವುದೆಂದು ಕಲಬುರ್ಗಿಯ ಕನ್ನಡ ನುಡಿಮುತ್ತು ವೇದಿಕೆಯ ಸಂಚಾಲಕರಾದ ಜಗದೀಶ ಶರಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments